- TV9 Kannada Photo gallery Cricket photos Tilak Varma's Duleep Trophy Century: South Zone Heroics and Future T20 Prospects
Duleep Trophy: ತಿಲಕ್ ಶತಕ, ಶ್ರೇಯಸ್ 87 ರನ್; ದಕ್ಷಿಣ ವಲಯ ಮೇಲುಗೈ
Duleep Trophy 2026: ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ತಿಲಕ್ ವರ್ಮಾ ಭರ್ಜರಿ ಶತಕ ಸಿಡಿಸಿ ದಕ್ಷಿಣ ವಲಯವನ್ನು ಸಂಕಷ್ಟದಿಂದ ಪಾರು ಮಾಡಿದರು. ಶ್ರೇಯಸ್ ಗೋಪಾಲ್ ಜೊತೆಗೂಡಿ 175 ರನ್‌ಗಳ ಮಹತ್ವದ ಪಾಲುದಾರಿಕೆ ನೀಡಿದರು. 23 ವರ್ಷದ ತಿಲಕ್ ಈಗಾಗಲೇ 19 ಶತಕಗಳನ್ನು ಬಾರಿಸಿದ್ದು, ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.
Updated on: Aug 31, 2026 | 7:04 PM

ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ಹಾಗೂ ಉತ್ತರ ವಲಯ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ವಲಯ ತಂಡ 195 ರನ್‌ಗಳಿಗೆ ಆಲೌಟ್ ಆಯಿತು. ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ತಂಡದ ಪರ ನಾಯಕ ತಿಲಕ್ ವರ್ಮಾ ಅಮೋಘ ಶತಕ ಬಾರಿಸಿದ್ದಾರೆ.

ತಿಲಕ್ ವರ್ಮಾ ಶತಕ ಬಾರಿಸಿದಲ್ಲದೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಏಕೆಂದರೆ ಒಂದು ಹಂತದಲ್ಲಿ ದಕ್ಷಿಣ ವಲಯ ತಂಡವು 80 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಉತ್ತರ ವಲಯದ ವೇಗದ ಬೌಲರ್ ಗುರ್ನೂರ್ ಬ್ರಾರ್ ನಾಲ್ಕು ವಿಕೆಟ್‌ಗಳನ್ನು ಪಡೆದು ಎದುರಾಳಿ ತಂಡದ ಬೆವರಿಳಿಸಿದ್ದರು. ಆದರೆ ತಿಲಕ್, ಶ್ರೇಯಸ್ ಗೋಪಾಲ್ ಜೊತೆಗೂಡಿ ತಮ್ಮ ತಂಡವನ್ನು ಹಿನ್ನಡೆಯಿಂದ ಪಾರು ಮಾಡಿದರು.

ತಿಲಕ್ ವರ್ಮಾ 92 ನೇ ಓವರ್‌ನಲ್ಲಿ ಗುರ್ನೂರ್ ಬ್ರಾರ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು. 218 ಎಸೆತಗಳಲ್ಲಿ ಶತಕ ತಲುಪಿದ ತಿಲಕ್ ಅವರ ಈ ತಾಳ್ಮೆಯ ಇನ್ನಿಂಗ್ಸ್ ಉತ್ತರ ವಲಯದ ಭರವಸೆಯನ್ನು ಭಗ್ನಗೊಳಿಸಿತು. ಹಾಗೆಯೇ ಶ್ರೇಯಸ್ ಗೋಪಾಲ್ ಅವರ 88 ರನ್‌ಗಳ ಇನ್ನಿಂಗ್ಸ್ ಕೂಡ ತಂಡಕ್ಕೆ ನೆರವಾಯಿತು. ಜೊತೆಗೆ ಇವರಿಬ್ಬರು 175 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರ ಜೊತೆಯಾಟದಿಂದಾಗಿ ದಕ್ಷಿಣ ವಲಯ ತಂಡ ಎರಡನೇ ದಿನದಾಟದಂತ್ಯಕ್ಕೆ 9 ವಿಕೆಟ್‌ಗಳನ್ನು ಕಳೆದುಕೊಂಡು 285 ರನ್ ಕಲೆಹಾಕಿದೆ.

23 ವರ್ಷ ವಯಸ್ಸಿನ ತಿಲಕ್ ವರ್ಮಾ ಈಗಾಗಲೇ 19 ಶತಕಗಳನ್ನು ಬಾರಿಸಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎಂಟು, ಲಿಸ್ಟ್ ಎ ನಲ್ಲಿ ಆರು ಮತ್ತು ಟಿ20 ಕ್ರಿಕೆಟ್‌ನಲ್ಲಿ ಐದು ಶತಕಗಳನ್ನು ಸಿಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ತಿಲಕ್ ಅವರ ಪ್ರದರ್ಶನವನ್ನು ನೋಡಿದರೆ ಅವರು ದೀರ್ಘಕಾಲದವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಆಳುತ್ತಾರೆ ಎನ್ನಬಹುದು.

ತಿಲಕ್ ವರ್ಮಾ ಶೀಘ್ರದಲ್ಲೇ ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 13 ರಿಂದ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ತಿಲಕ್ ವರ್ಮಾ ಟಿ20 ತಂಡದ ಉಪನಾಯಕರಾಗಿದ್ದು ಅವರು ಈ ಸರಣಿಯಲ್ಲಿ ಆಡುವುದು ಖಚಿತ. ಆದಾಗ್ಯೂ ತಿಲಕ್ ವರ್ಮಾ ಅವರ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಹೀಗಾಗಿ ತಿಲಕ್ ಟೀಕಾಕಾರರಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಕಾದು ನೋಡಬೇಕಾಗಿದೆ.




