AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರದ ಆರೋಪ: ಮಾಕುಟ್ಟ ಚೆಕ್‌ಪೋಸ್ಟ್‌ ವಿಡಿಯೋ ವೈರಲ್

ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರದ ಆರೋಪ: ಮಾಕುಟ್ಟ ಚೆಕ್‌ಪೋಸ್ಟ್‌ ವಿಡಿಯೋ ವೈರಲ್

ಗೋಪಾಲ್​ ಸೋಮಯ್ಯ
| Edited By: |

Updated on: Sep 02, 2026 | 11:12 AM

Share

ಕೊಡಗು-ಕೇರಳ ಗಡಿಯ ಮಾಕುಟ್ಟ ಚೆಕ್‌ಪೋಸ್ಟ್‌ನಲ್ಲಿ ವಾಹನ ಚಾಲಕರಿಂದ ಲಂಚ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಆರೋಪಿಸಿದ್ದಾರೆ. ಹಣ ಪಡೆಯುತ್ತಿರುವ ವಿಡಿಯೋ ಪ್ರದರ್ಶಿಸಿ ಆರೋಪ ಮಾಡಿದ್ದಾರೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಡಿಕೇರಿ, ಸೆಪ್ಟೆಂಬರ್ 2: ಕೊಡಗು-ಕೇರಳ ಗಡಿಯ ಮಾಕುಟ್ಟ ಚೆಕ್‌ಪೋಸ್ಟ್‌ನಲ್ಲಿ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೆಕ್‌ಪೋಸ್ಟ್‌ನಲ್ಲಿ ವಾಹನ ಚಾಲಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಆರೋಪಿಸಿದ್ದಾರೆ. ಕೇರಳದಿಂದ ಕೊಡಗಿಗೆ ಪ್ರತಿನಿತ್ಯ ಸಾವಿರಾರು ಸರಕು ಸಾಗಣೆ ವಾಹನಗಳು ಆಗಮಿಸುತ್ತವೆ. ಈ ವಾಹನಗಳ ಚಾಲಕರಿಂದ ಕನಿಷ್ಠ 30 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಕಲ್ಲು, ಜಲ್ಲಿ, ಇಟ್ಟಿಗೆ ಸೇರಿದಂತೆ ನಿರ್ಮಾಣ ಸಾಮಗ್ರಿ ಸಾಗಿಸುವ ಲಾರಿಗಳಿಂದ 3,000 ರೂಪಾಯಿವರೆಗೆ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಅವರು ಮಾಕುಟ್ಟ ಚೆಕ್‌ಪೋಸ್ಟ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ತಮಗೆ ಪರಿಚಯವಿಲ್ಲದ ಕಾರಣ, ರಂಜಿ ಪೂಣಚ್ಚ ಅವರಿಗೂ ಹಣ ನೀಡಲು ಮುಂದಾದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ವಿರಾಜಪೇಟೆ ನಗರ ಠಾಣೆಯ ಎಸ್‌ಐ ಪ್ರದೀಪ್ ಕೂಡ ಸ್ಥಳದಲ್ಲಿದ್ದರು ಎನ್ನಲಾಗಿದೆ. ಎಸ್‌ಐ ಅವರ ಎದುರಲ್ಲೇ ಹಣ ನೀಡಿದ ಘಟನೆ ಕುರಿತು ರಂಜಿ ಪೂಣಚ್ಚ ಪ್ರಶ್ನಿಸಿದ್ದು, ಹಣವನ್ನು ಪ್ರದರ್ಶಿಸಿ ಚೆಕ್‌ಪೋಸ್ಟ್‌ ಕಡೆಗೆ ಎಸೆದಿರುವುದು ವಿಡಿಯೋದಲ್ಲಿದೆ.

ಚೆಕ್‌ಪೋಸ್ಟ್‌ನಲ್ಲಿ ವಾಹನಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಗಳ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us