ಕಟ್ಟಡದ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪತ್ನಿ: ಜೀವ ತೆಗೆದ ಎರಡನೇ ಮದ್ವೆ
ಬೆಂಗಳೂರಿನ ಅಂದ್ರಹಳ್ಳಿಯ ಮಂಜುನಾಥ ಬಡಾವಣೆಯ ಮನೆಯ ಕಟ್ಟಡದ ಮೇಲಿಂದ ಪತಿಯನ್ನೇ ಪತ್ನಿ ತಳ್ಳಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಪತ್ನಿಗೆ ಆಕೆಯ ಸೋದರ ಮಾವ ಕೂಡ ಸಹಾಯ ಮಾಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು, ನವೆಂಬರ್ 17: ಸೋದರ ಮಾವನ ಜತೆ ಸೇರಿ ಕಟ್ಟಡದ ಮೇಲಿಂದ ತಳ್ಳಿ ಪತಿಯನ್ನೇ ಪತ್ನಿ (Wife) ಕೊಂದಿರುವಂತಹ (Murder) ಘಟನೆ ಅಂದ್ರಹಳ್ಳಿಯ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ. ಪತಿ ವೆಂಕಟೇಶ್ (65) ನನ್ನು ಕೊಂದ ಪತ್ನಿ ಪಾರ್ವತಿ. ಸದ್ಯ ಪಾರ್ವತಿ ಮತ್ತು ಆಕೆಯ ಸೋದರ ಮಾವ ರಂಗಸ್ವಾಮಿಯನ್ನು ಬಂಧಿಸಿರುವ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ನಡೆದದ್ದೇನು?
ವೆಂಕಟೇಶ್ 10 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಬಿಟ್ಟಿದ್ದರು. 6 ವರ್ಷಗಳ ಹಿಂದೆಯಷ್ಟೇ ಪಾರ್ವತಿಯನ್ನ ಮದುವೆಯಾಗಿದ್ದರು. ಮನೆಯನ್ನು ತನ್ನ ಹೆಸರಿಗೆ ಮಾಡುವಂತೆ, ಇಲ್ಲ ಅಂದರೆ 6 ಲಕ್ಷ ರೂ. ಕೊಡುವಂತೆ ಪತಿ ಜತೆ ಪಾರ್ವತಿ ಗಲಾಟೆ ಮಾಡಿದ್ದರು. ಇದಕ್ಕೆ ಒಪ್ಪದ ವೆಂಕಟೇಶ್ 2.5 ಲಕ್ಷ ರೂ. ಹಣ ನೀಡೋದಾಗಿ ಹೇಳಿದ್ದರು.
ಇದನ್ನೂ ಓದಿ: ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಹತ್ಯೆ: ಕಾರಣವೇನು?
ನಿನ್ನೆ ಇದೇ ವಿಚಾರವಾಗಿ ದಂಪತಿ ನಡುವೆ ಮತ್ತೆ ಜಗಳವಾಗಿದೆ. ರಾತ್ರಿ 9 ಗಂಟೆಗೆ ಪತ್ನಿಯನ್ನ ಮನೆಯಿಂದ ವೆಂಕಟೇಶ್ ಹೊರ ಹಾಕಿದ್ದರು. ಸೋದರ ಮಾವ ರಂಗಸ್ವಾಮಿಗೆ ಕರೆ ಮಾಡಿ ಕರೆಸಿಕೊಂಡಿದ್ದ ಪಾರ್ವತಿ, ಇಬ್ಬರು ಸೇರಿ ಕಟ್ಟಡದ ಮೇಲಿನಿಂದ ವೆಂಕಟೇಶ್ನನ್ನು ತಳ್ಳಿದ್ದಾರೆ. ತಲೆಗೆ ಪೆಟ್ಟಾಗಿದ್ದರೂ ಮತ್ತೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಕುಸಿದುಬಿದ್ದು ಸ್ಥಳದಲ್ಲೇ ವೆಂಕಟೇಶ್ ಮೃತಪಟ್ಟಿದ್ದಾರೆ.
ಅಪ್ಪನ ಮೇಲೆ ಹಲ್ಲೆ ಮಾಡಿದ್ದಕ್ಕೆ ಮಗನಿಂದ ವ್ಯಕ್ತಿಯ ಕೊಲೆ
ಅಪ್ಪನ ಮೇಲೆ ಹಲ್ಲೆ ಮಾಡಿದ್ದಕ್ಕೆ ಮಗನಿಂದ ವ್ಯಕ್ತಿಯ ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೀವ್ರ ಹಲ್ಲೆ ಮಾಡಿ ನಾರಾಯಣಸ್ವಾಮಿ(55) ಎಂಬುವವರನ್ನು ಅಜಯ್ ಕೊಲೆಗೈದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಾಲ ಪೊಲೀಸರು ಅಜಯ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲೊಂದು ಭಯಾನಕ ಘಟನೆ: ಪತ್ನಿಗೆ ವಿಡಿಯೋ ಕರೆ ಮಾಡಿ ನೇಣು ಬಿಗಿದುಕೊಂಡು ಸತ್ತ ಪತಿ
ನ.11ರಂದು ಅಜಯ್ ತಂದೆ ಮುನಿವೆಂಕಟಪ್ಪ ಮತ್ತು ನಾರಾಯಣಸ್ವಾಮಿ ಕುಡಿದು ಗಲಾಟೆ ಮಾಡಿಕೊಂಡಿದ್ದರು. ತಂದೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೋಪಗೊಂಡಿದ್ದ ಅಜಯ್, ಈ ಹಿನ್ನೆಲೆ ನಾರಾಯಣಸ್ವಾಮಿಗೆ ತೀವ್ರ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾರಾಯಣಸ್ವಾಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:28 pm, Mon, 17 November 25



