ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 2.1 ಕೋಟಿ ದೋಖಾ: ವಂಚಕರ ಮಾತು ನಂಬಿ ಹಣ ಕೊಟ್ಟು ಕೆಟ್ಟ 78 ವರ್ಷದ ಮಹಿಳೆ!

ಬೆಂಗಳೂರಿನಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ ವಂಚನೆ ಬೆಳಕಿಗೆ ಬಂದಿದೆ. 78 ವರ್ಷದ ವೃದ್ಧೆಯೊಬ್ಬರು NIA ಅಧಿಕಾರಿ ಎಂಬ ಸೋಗಲ್ಲಿ ಕರೆ ಮಾಡಿದ್ದ ವ್ಯಕ್ತಿಗೆ ಬೆದರಿ ಕೋಟಿ ಕೋಟಿ ಹಣ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಪಿಎಫ್‌ಐ ಸಂಘಟನೆ ಜೊತೆ ಸಂಪರ್ಕದ ಬೆದರಿಕೆ ಹಾಕಿ, ಬಂಧನದ ಭೀತಿ ಹುಟ್ಟಿಸಿ ವಂಚಕರು ಬ್ಯಾಂಕ್ ಖಾತೆಗಳ ವಿವರ ಪಡೆದು ಹಣ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 2.1 ಕೋಟಿ ದೋಖಾ: ವಂಚಕರ ಮಾತು ನಂಬಿ ಹಣ ಕೊಟ್ಟು ಕೆಟ್ಟ 78 ವರ್ಷದ ಮಹಿಳೆ!
ಸಾಂದರ್ಭಿಕ ಚಿತ್ರ
Image Credit source: shutterstock.com

Updated on: May 07, 2026 | 12:20 PM

ಬೆಂಗಳೂರು, ಮೇ 07: ಡಿಜಿಟಲ್​​ ಅರೆಸ್ಟ್​​ ಹೆಸರಿನಲ್ಲಿ 78 ವರ್ಷದ ಗೃಹಿಣಿ ಮತ್ತು ಆಕೆಯ ಪುತ್ರಿಗೆ ಬರೋಬ್ಬರಿ 2.1 ಕೋಟಿ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಸಂತ್ರಸ್ತರಿಗೆ ಏಪ್ರಿಲ್ 13ರಂದು ವಾಟ್ಸಾಪ್ ಕರೆ ಮಾಡಿದ್ದ ಆರೋಪಿ, ಮಹಿಳೆಯ ಹೆಸರಿನ ಡೆಬಿಟ್ ಕಾರ್ಡ್​​ನ ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ಸದಸ್ಯನೊಬ್ಬ ಬಳಸುತ್ತಿದ್ದಾನೆ ಎಂದು ಬೆದರಿಸಿದ್ದ. ಅಲ್ಲದೆ ತನ್ನನ್ನು ಎನ್‌ಐಎ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ.

  • ಬೆಂಗಳೂರಲ್ಲಿ ಮತ್ತೊಂದು ಡಿಜಿಟಲ್​​ ಅರೆಸ್ಟ್​​ ಕೇಸ್​​ ಬೆಳಕಿಗೆ
  • ಎನ್‌ಐಎ ಅಧಿಕಾರಿ ಸೋಗಲ್ಲಿ ಹಣ ಪೀಕಿರುವ ಖದೀಮರು
  • ಬರೋಬ್ಬರಿ 2.1 ಕೋಟಿ ಹಣ ಕಳೆದುಕೊಂಡ ತಾಯಿ-ಮಗಳು

ಇದನ್ನೂ ಓದಿ: ಸಿಬಿಐ ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಗಾಳ; 30 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ 15 ಕೋಟಿ ಲೂಟಿ!

ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿ ಈ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಮಹಿಳೆ ಹಾಗೂ ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡಿದ್ದ. ಬಳಿಕ ಮಹಿಳೆಯ ಪುತ್ರಿಯೂ ಇದೇ ಪ್ರಕರಣದಲ್ಲಿ ಶಂಕಿತಳಾಗಿದ್ದಾಳೆ ಎಂದು ಹೇಳಿದ್ದ. ವಂಚಕರು ಪೊಲೀಸ್ ಠಾಣೆಯಂತೆ ಕಾಣುವ ಪ್ರದೇಶದಿಂದ ವಿಡಿಯೋ ಕಾಲ್‌ಗಳನ್ನು ಮಾಡಿ ಸಂತ್ರಸ್ತರನ್ನು ಮತ್ತಷ್ಟು ನಂಬಿಸಿದ್ದು, ಆರೋಪಿ ಪ್ರದೀಪ್ ಜಸ್ವಾಲ್ ಎಂದು ತನನ್ನು ಪರಿಚಯಿಸಿಕೊಂಡಿದ್ದ. ಸಂತ್ರಸ್ತ ಮಹಿಳೆ ಮತ್ತು ಪುತ್ರಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದ ಆತ, ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದ ಎಂಬ ಮಾಹಿತಿ ಸಿಕ್ಕಿದೆ.

ನಂತರ ಹಣದ ವ್ಯವಹಾರಗಳ ಪರಿಶೀಲನೆ ನಡೆಸಬೇಕಿದ್ದು, ಅದೇ ಬಂಧನ ತಪ್ಪಿಸಿಕೊಳ್ಳುವ ಮಾರ್ಗ ಎಂದು ಹೇಳಿ ಬ್ಯಾಂಕ್ ಖಾತೆ ವಿವರಗಳನ್ನು ಆರೋಪಿ ಪಡೆದಿದ್ದ. ಬಳಿಕ, ಆರ್‌ಬಿಐ ಮಾರ್ಗಸೂಚಿಯಂತೆ ಪರಿಶೀಲನೆ ಬಳಿಕ ಹಣ ಮರಳಿ ನೀಡಲಾಗುವುದು ಎಂದು ನಂಬಿಸಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದ. ವಂಚಕನ ಮಾತು ನಂಬಿದ ಮಹಿಳೆ ತನ್ನ ಜೀವಮಾನ ಉಳಿತಾಯವನ್ನು ನೀಡಿದ್ದಾರೆ. ಸಾಲದ್ದಕ್ಕೆ ಚಿನ್ನವನ್ನು ಗಿರವಿ ಇಟ್ಟು ಗೋಲ್ಡ್ ಲೋನ್ ಪಡೆದು ಅದರ ಹಣವನ್ನೂ ಆರೋಪಿಗಳ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಏಪ್ರಿಲ್ 15ರಿಂದ 23ರವರೆಗೆ ಹಲವು ಆರ್‌ಟಿಜಿಎಸ್ ವ್ಯವಹಾರಗಳ ಮೂಲಕ ಒಟ್ಟು 2.1 ಕೋಟಿ ಹಣವನ್ನು ವಿವಿಧ ಖಾತೆಗಳಿಗೆ ಹಾಕಿರೋದು ಗೊತ್ತಾಗಿದೆ.

ಇಷ್ಟಾದರೂ ಆರೋಪಿಗಳ ಹಣದ ದಾಹ ತೀರದ ಕಾರಣ ಮೇ 2ರಂದು ಮಹಿಳೆ ತಮ್ಮ ಸಹೋದರರ ಬಳಿ ಮತ್ತಷ್ಟು ಹಣ ಕೇಳಿದ್ದರು. ಅನುಮಾನಗೊಂಡ ಅವರು ವಿಚಾರಿಸಿದಾಗ ವಂಚನೆ ಬಯಲಾಗಿದೆ. ಆ ಬಳಿಕ ಮಹಿಳೆ 1930 ಸೈಬರ್ ಸಹಾಯವಾಣಿ ಸಂಪರ್ಕಿಸಿ ದೂರು ನೀಡಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:15 pm, Thu, 7 May 26

Follow Us