ಬೆಂಗಳೂರು: 5 ವರ್ಷದ ಮಗಳ ಕೊಂದು ಗ್ರಾ.ಪಂ ಅಧ್ಯಕ್ಷೆ ಆತ್ಮಹತ್ಯೆ, ಪತಿ ಅನೈತಿಕ ಸಂಬಂಧಕ್ಕೆ ಬೇಸತ್ತು ನೇಣಿಗೆ ಶರಣು
ಬೆಂಗಳೂರಿನಲ್ಲಿ ಭೀಕರ ಘಟನೆ ನಡೆದಿದ್ದು, ಪಾವಗಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ಮಹಿಳೆ ತನ್ನ ಐದು ವರ್ಷದ ಮಗಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಅನೈತಿಕ ಸಂಬಂಧ ಮತ್ತು ವರದಕ್ಷಿಣೆ ಕಿರುಕುಳ ಬಗ್ಗೆ ಡೆತ್ನೋಟ್ನಲ್ಲಿ ಆರೋಪಿಸಲಾಗಿದೆ. ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಫೆಬ್ರವರಿ 18: ಬೆಂಗಳೂರಿನಲ್ಲಿ ಸೋಮವಾರ ಮಹಿಳೆಯೊಬ್ಬರು ತನ್ನ 5 ವರ್ಷದ ಮಗಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾವಗಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ಮಹಿಳೆ, ಮಗಳು ರೋಷಿಣಿಯನ್ನು ಕೊಲೆ ಮಾಡಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ 10 ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಜತೆ ವಿವಾಹವಾಗಿದ್ದರು.
ಮಹಿಳೆ ಡೆತ್ನೋಟ್ ಕೂಡ ಬರೆದಿಟ್ಟಿದ್ದು, ಪತಿಯ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ. ಶ್ರುತಿಯ ಪತಿಯನ್ನು ವಶಕ್ಕೆ ಪಡೆದು ಬಾಗಲಗುಂಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ನಾಗಸಂದ್ರದ ರಾಮಯ್ಯ ಲೇಔಟ್‌ನಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಆ ಸಮಯದಲ್ಲಿ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ.
ಅನೈತಿಕ ಸಂಬಂಧ, ವರದಕ್ಷಿಣೆ ಕಿರುಕುಳದ ಆರೋಪ
ಘಟನಾ ಸ್ಥಳದಲ್ಲಿ ದೊರೆತ ಡೆತ್ನೋಟ್ನಲ್ಲಿ, ಮಹಿಳೆಯ ಪತಿಗೆ ಬೇರೊಬ್ಬ ಸ್ತ್ರೀಯೊಂದಿಗೆ ಸಂಬಂಧವಿದೆ. ಅಷ್ಟೇ ಅಲ್ಲದೆ, ವರದಕ್ಷಿಣೆಗಾಗಿ ಆತ ಕಿರುಕುಳ ನೀಡುತ್ತಿದ್ದಾನೆ ಎಂದು ಉಲ್ಲೇಖಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2014 ರಲ್ಲಿ ವಿವಾಹವಾಗಿದ್ದ ದಂಪತಿಯ ಬಾಂಧವ್ಯ ಹದಗೆಟ್ಟಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧದ ಅನುಮಾನವು ಅವರ ದಾಂಪತ್ಯದಲ್ಲಿ ಜಗಳಕ್ಕೆ ಕಾರಣವಾಯಿತು. ಇದರಿಂದಾಗಿ ಆಗಾಗ್ಗೆ ದಂಪತಿ ಜಗಳವಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಮಹಿಳೆಯ ಪತಿಯ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಕುಡಿಯಲು ಹಣ ನೀಡದಿದ್ದಕ್ಕೆ ತಂದೆಯನ್ನೇ ಕೊಲೆಗೈದ ಮಗ
ಕುಡಿತದ ಚಟಕ್ಕೆ ದಾಸನಾಗಿದ್ದ ಅಮಿತ್ ಎಂಬಾತ ತಂದೆಯನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈತನ ತಂದೆ ಚನ್ನಬಸವಯ್ಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಕುಡಿಯಲು ಹಣ ನೀಡುವಂತೆ ತಂದೆ ತಾಯಿಯನ್ನು ಈತ ಪೀಡಿಸುತ್ತಿದ್ದ. ತಾಯಿ ಹಣವಿಲ್ಲವೆಂದರೆ ಚಿನ್ನದ ಬಳೆ, ಕಿವಿಯೋಲೆ ಕೊಡುವಂತೆ ಕೇಳುತ್ತಿದ್ದ ಎನ್ನಲಾಗಿದೆ. ಮಾಂಗಲ್ಯ ಸರವನ್ನೂ ಕಿತ್ತುಕೊಳ್ಳಲು ಮುಂದಾಗಿದ್ದ. ಮಗ ಅಮಿತ್ನ ಕೃತ್ಯವನ್ನು ತಂದೆ ಚನ್ನಬಸವಯ್ಯ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಆತತಂದೆಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಆರೋಪಿ ಅಮಿತ್ನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಆಟದ ಗನ್ ಎಂದು ಅಸಲಿ ಗನ್‌ನಿಂದ ಫೈರಿಂಗ್, 3 ವರ್ಷದ ಬಾಲಕ ದುರ್ಮರಣ: ಮಂಡ್ಯದ ನಾಗಮಂಗಲದಲ್ಲಿ ಘೋರ ದುರಂತ
ಮತ್ತೊಂದೆಡೆ, ಆನೇಕಲ್ ತಾಲೂಕಿನ ಯಾರಂಡಹಳ್ಳಿಯಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಸ್ಸಾಂ ಮೂಲದ ದಿವಾನ್ ಅಫ್ರಿದಿ, ಅಶ್ರಫ್ ಕುಟುಂಬ ಸಮೇತ ವಾಸವಿದ್ದರು. ಪತ್ನಿ ಕೆಸಲಕ್ಕೆ ಹೋಗಿದ್ದಾಗ ಮನೆಯಲ್ಲಿಯೇ ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡಿದ್ದರಂತೆ. ನಂತರ ಸಿರಿಂಜ್ನಿಂದ ಮಾದಕ ವಸ್ತು ಚುಚ್ಚಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ದಿವಾನ್ ಪತ್ನಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೂರ್ಯ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು, ಪಾರ್ಟಿ ಮಾಡಿದ್ದ ಶಂಕರ್ದಾಸ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.