ಬೆಂಗಳೂರಿಗೆ ಸುರಂಗ ಮಾರ್ಗ, ಮೇಲ್ಸೇತುವೆ ಬೇಕಿಲ್ಲ ಎಂದ ನಾಗರಿಕರ ವೇದಿಕೆ: ಹೀಗೆನ್ನಲು ಇದೆ ಕಾರಣ!
ಬೆಂಗಳೂರಿನಲ್ಲಿ ಪ್ರಸ್ತಾವಿತ ಎಲಿವೇಟೆಡ್ ಕಾರಿಡಾರ್ ಮತ್ತು ಸುರಂಗ ಮಾರ್ಗಗಳನ್ನು ನಾಗರಿಕರ ವೇದಿಕೆ ತೀವ್ರವಾಗಿ ವಿರೋಧಿಸಿದೆ. ನಗರದ ಜನಸಂಖ್ಯೆ ಗರಿಷ್ಠ ಮಿತಿ ತಲುಪಿದ್ದು, ಈ ಯೋಜನೆಗಳಿಂದ ಸಂಚಾರ ದಟ್ಟಣೆ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಸಿಗುವುದಿಲ್ಲ ಎಂದು ವಾದಿಸಲಾಗಿದೆ. ಪರ್ಯಾಯವಾಗಿ, ಸಮಗ್ರ ನಗರ ಯೋಜನೆ ಮತ್ತು ಹೊರವಲಯದ ನಗರಗಳ ಅಭಿವೃದ್ಧಿಯ ಅಗತ್ಯವನ್ನು ಒತ್ತಿಹೇಳಲಾಗಿದೆ.

ಬೆಂಗಳೂರು, ಫೆಬ್ರವರಿ 18: ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕಾಗಿ, ಜನರ ಅನುಕೂಲಕ್ಕಾಗಿ ಬೆಂಗಳೂರು ನಗರದಲ್ಲಿ ಎಲಿವೇಟೆಡ್ ಕಾರಿಡಾರ್ಗಳು, ಸುರಂಗ ಮಾರ್ಗಗಳಿಗೆ ಬಿಬಿಎಂಪಿ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ನಗರಕ್ಕೆ ಇಂಥ ಯೋಜನೆಗಳಿಂದ ಉಪಯೋಗವಿಲ್ಲ. ಅದರ ಬದಲಿಗೆ ಸಮಗ್ರ ಯೋಜನೆ ಅಗತ್ಯವಿದೆ ಎಂದು ನಾಗರಿಕರ ವೇದಿಕೆ ಪ್ರತಿಪಾದಿಸಿದೆ. ನಟ ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ನಡೆದ ವಿವಿಧ ನಾಗರಿಕರ ಗುಂಪುಗಳ ಸಭೆಯಲ್ಲಿ, ಬೆಂಗಳೂರಿನ ಪ್ರಸ್ತಾವಿತ ಯೋಜನೆಗಳನ್ನು ಸರ್ವಾನುಮತದಿಂದ ತಿರಸ್ಕರಿಸಲಾಯಿತು.
ನಾಗರಿಕರ ವೇದಿಕೆ ಹೇಳುವುದೇನು?
ಬೆಂಗಳೂರು ಈಗಾಗಲೇ ಜನಸಂಖ್ಯಾ ಗರಿಷ್ಠ ಮಿತಿಯನ್ನು ತಲುಪಿದೆ. ಹೀಗಾಗಿ ಎಲಿವೇಟೆಡ್ ಕಾರಿಡಾರ್ ಅಥವಾ ಸುರಂಗ ಮಾರ್ಗಗಳಂಥ ಯೋಜನೆಗಳಿಂದ ನಗರದ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ನಾಗರಿಕರ ವೇದಿಕೆ ಪ್ರತಿಪಾದಿಸಿದೆ.
ಸುರಂಗ ಮಾರ್ಗಗಳಂಥ ಯೋಜನೆಗಳ ಬದಲಾಗಿ, ನಗರದ ಸವಾಲುಗಳನ್ನು ಸಮರ್ಪಕವಾಗಿ ಪರಿಹರಿಸುವ ದೃಷ್ಟಿಯಿಂದ ತಜ್ಞರ ಸಲಹೆಗಳನ್ನು ಆಧರಿಸಿ ಪರ್ಯಾಯ ಯೋಜನೆ ರೂಪಿಸಬೇಕು ಎಂದು ವೇದಿಕೆ ಹೇಳಿದೆ.
ಕಾನೂನು ಸಮರದ ಮೊರೆ ಹೋಗುವ ಬಗ್ಗೆ ಪರಿಶೀಲನೆ
ಸರ್ಕಾರದ ಪ್ರಸ್ತಾವಿತ ಯೋಜನೆಗಳನ್ನು ವಿರೋಧಿಸುವುದರ ಜೊತೆಗೆ, ಪ್ರಸ್ತಾವನೆಗಳನ್ನು ಪ್ರಶ್ನಿಸಿ ಕಾನೂನು ಕ್ರಮದ ಸಾಧ್ಯತೆಯ ಬಗ್ಗೆಯೂ ನಾಗರಿಕರ ವೇದಿಕೆ ಸಮಾಲೋಚನೆ ನಡೆಸಿದೆ.
‘ಬೆಂಗಳೂರಿನ ಹೊರ ವಲಯದ ನಗರಗಳ ಅಭಿವೃದ್ಧಿ ಅಗತ್ಯ’
ಬೆಂಗಳೂರು ಇನ್ನೂ ಹೆಚ್ಚಿನ ಜನರು ಮತ್ತು ವಾಹನಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂದು ನಗರ ಯೋಜಕ ನರೇಶ್ ನರಸಿಂಹನ್ ಒತ್ತಿ ಹೇಳಿದರು. ಬೆಂಗಳೂರಿನಲ್ಲಿ ಜನಸಂಖ್ಯೆಯು ಅದರ ಗರಿಷ್ಠ ಹಂತವನ್ನು ತಲುಪಿದೆ. ಹೀಗಾಗಿ ಪರ್ಯಾಯ ಕೇಂದ್ರಗಳನ್ನು ರಚಿಸಲು ಮಾಗಡಿ, ಹೊಸಕೋಟೆ ಮತ್ತು ತುಮಕೂರಿನಂತಹ ನೆರೆಯ ಪ್ರದೇಶಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
“ಬೆಂಗಳೂರು ನಗರಕ್ಕೆ ಉಸಿರಾಡಲು ಜಾಗ ಬೇಕು” ಎಂದು ಅವರು ಹೇಳಿದ್ದಾರೆ. ಜನರು ಬೆಂಗಳೂರಿಗೆ ಬರುವುದು ಶಿಕ್ಷಣ ಮತ್ತು ಉದ್ಯೋಗಕ್ಕಾಗಿಯೇ ವಿನಃ ಹವಾಮಾನ ಅಥವಾ ಸಂಚಾರಕ್ಕಾಗಿ ಅಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ನಗರದ ಅತಿಯಾದ ಜನಸಂಖ್ಯಾ ಸಾಂದ್ರತೆಯು ಸಂಚಾರ ದಟ್ಟಣೆ, ಕಸ ವಿಲೇವಾರಿ, ನೀರಿನ ಕೊರತೆ ಮತ್ತು ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಸುರಂಗ ಮಾರ್ಗದಿಂದ ಯಾಕೆ ಪ್ರಯೋಜನವಿಲ್ಲ?
ಸರ್ಕಾರವು ಬೆಂಗಳೂರು ನಗರದಲ್ಲಿ ಶೇ 80 ರಷ್ಟು ಸಾರ್ವಜನಿಕ ಸಾರಿಗೆಯನ್ನು ಹೊಂದುವ ಗುರಿಯನ್ನು ಹೊಂದಿರಬೇಕು ಎಂದು ಐಐಎಸ್ಸಿ ಪ್ರೊಫೆಸರ್ ಆಶಿಶ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ಸುರಂಗ ಮಾರ್ಗಗಳು ನಿರ್ಮಾಣವಾದರೆ, ಅವು ತಕ್ಷಣವೇ ಪೂರ್ಣ ಸಾಮರ್ಥ್ಯದಷ್ಟು ಬಳಕೆಯಾಗಲಿವೆ. ಸಂಚಾರ ದಟ್ಟಣೆಗೆ ದೀರ್ಘಾವಧಿಯ ಪರಿಹಾರವನ್ನು ಒದಗಿವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪೀಣ್ಯ ಫ್ಲೈ ಓವರ್ : ಇನ್ನೂ ಒಂದೂವರೆ ವರ್ಷ ವಾಹನ ಸವಾರರಿಗೆ ತಪ್ಪಲ್ಲ ಟ್ರಾಫಿಕ್ ಸಂಕಷ್ಟ
ಬೆಂಗಳೂರಿಗೆ ವಸತಿ, ಸಾರಿಗೆ, ಸಾರ್ವಜನಿಕ ಆರೋಗ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಒಳಗೊಂಡ ಸಮಗ್ರ ಮಾಸ್ಟರ್ ಪ್ಲಾನ್‌ನ ಅವಶ್ಯಕತೆಯಿದೆ ಎಂದು ಪ್ರಕಾಶ ಬೆಳವಾಡಿ ಹೇಳಿದ್ದಾರೆ.