Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟದ ಗನ್ ಎಂದು ಅಸಲಿ ಗನ್‌ನಿಂದ ಫೈರಿಂಗ್, 3 ವರ್ಷದ ಬಾಲಕ ದುರ್ಮರಣ: ಮಂಡ್ಯದ ನಾಗಮಂಗಲದಲ್ಲಿ ಘೋರ ದುರಂತ

ಇದು ನಿಜಕ್ಕೂ ಎದೆ ಝಲ್ಲೆನೆಸುವಂತಹ ಘಟನೆ. ಪೋಷಕರು ಎಚ್ಚೆತ್ತುಕೊಳ್ಳಲೇಬೇಕಾದ ವಿಚಾರ. ಯಾಕೆಂದರೆ ಮಕ್ಕಳ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಸಲಿ ಗನ್ ಹಿಡಿದು ಕಳ್ಳ, ಪೊಲೀಸ್ ಆಡಿದ ಮಕ್ಕಳ ಪೈಕಿ ಬಾಲಕನೊಬ್ಬ ಹೊಡೆದ ಗುಂಡೇಟಿಗೆ 3 ವರ್ಷದ ಮಗು ದುರ್ಮರಣ ಹೊಂದಿದೆ. ಘಟನೆಯ ವಿವರಗಳಿಗೆ ಮುಂದೆ ಓದಿ.

ಆಟದ ಗನ್ ಎಂದು ಅಸಲಿ ಗನ್‌ನಿಂದ ಫೈರಿಂಗ್, 3 ವರ್ಷದ ಬಾಲಕ ದುರ್ಮರಣ: ಮಂಡ್ಯದ ನಾಗಮಂಗಲದಲ್ಲಿ ಘೋರ ದುರಂತ
ದುರಂತಕ್ಕೆ ಕಾರಣವಾದ ಬಂದೂಕನ್ನು ಪರಿಶೀಲಿಸುತ್ತಿರುವ ಪೊಲೀಸರು
Follow us
ಪ್ರಶಾಂತ್​ ಬಿ.
| Updated By: Ganapathi Sharma

Updated on:Feb 17, 2025 | 7:27 AM

ಮಂಡ್ಯ, ಫೆಬ್ರವರಿ 17: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ 13 ವರ್ಷದ ಬಾಲಕನೊಬ್ಬ ಆಟವಾಡುವಾಗ ಆಕಸ್ಮಿಕವಾಗಿ ತನ್ನ 3 ವರ್ಷದ ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ಪರಿಣಾಮ ಮಗುವಿನ ಹೊಟ್ಟೆ ಛಿದ್ರವಾಗಿದ್ದು ಪ್ರಾಣಬಿಟ್ಟಿದೆ. ನಾಗಮಂಗಲದ ದೊಂದೇಮಾದಿಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದೆ.

ಕಳ್ಳ ಪೊಲೀಸ್ ಆಟ ಆಡೋಣ ಎಂದು ಶೂಟ್ ಮಾಡಿದ ಬಾಲಕ

ಕೋಳಿ ಫಾರಂನಲ್ಲಿ ಭದ್ರತೆಗಾಗಿ ಒಂದು ಅಸಲಿ ಗನ್‌ ಇಡಲಾಗಿತ್ತು. ಅದು ಸಜೀವ ಗುಂಡುಗಳಿಂದ ಲೋಡೆಡ್ ಆಗಿತ್ತು. ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಹಾಗೂ ಲಿಪಿಕ ದಂಪತಿ ಇಲ್ಲೇ ಕೂಲಿ ಕಾರ್ಮಿಕರಾಗಿದ್ದು, 13 ವರ್ಷದ ಬಾಲಕ ಸುದೀಪ್‌ ದಾಸ್‌ನೊಂದಿಗೆ 3 ವರ್ಷದ ಮಗುವನ್ನು ಆಟವಾಡಲು ಬಿಟ್ಟು ಕೆಲಸಕ್ಕೆ ಹೋಗಿದ್ದರು.

ಈ ವೇಳೆ ಬಾಲಕ ಸುದೀಪ್, ಮೇಲೆ ಇದ್ದ ಗನ್ ತೆಗೆದುಕೊಂಡು ಕಳ್ಳ-ಪೊಲೀಸ್ ಆಟ ಆಡೋಣ ಎನ್ನುತ್ತಾ 3 ವರ್ಷದ ಮಗುವಿನ ಮೇಲೆ ಶೂಟ್ ಮಾಡಿದ್ದಾನೆ. ಈ ಆಕಸ್ಮಿಕ ಫೈರಿಂಗ್‌ ಮಗುವಿನ ಹೊಟ್ಟೆ ಸೀಳಿದೆ. ಅಲ್ಲೇ ಅಭಿಷೇಕ್ ತಾಯಿ ಲಿಪಿಕಾ ಇದ್ದು ಅವರಿಗೂ ಗಾಯವಾಗಿದೆ.

ಮಗುವಿನ ಕರಳು ಹೊರಕ್ಕೆ: ಆಸ್ಪತ್ರೆಗೆ ಕರೆದೊಯ್ದರೂ ಫಲಿಸದ ಚಿಕಿತ್ಸೆ

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಯಿತು. ಗನ್‌ನಿಂದ ಫೈರ್ ಆದ ಗುಂಡು ಮಗುವಿನ ಹೊಟ್ಟೆ ಸೀಳಿದ್ದರಿಂದ ಹೊಟ್ಟೆಯಲ್ಲಿದ್ದ ಕರಳು ಹೊರಗೆ ಬಂದಿತ್ತು. ಆದರೂ, ಉಸಿರಾಡುತ್ತಿದ್ದ ಮಗುವಿನ ಕರಳುಗಳನ್ನು ಹೊಟ್ಟೆಯ ಮೇಲೆ ಟವೆಲ್‌ನಿಂದ ಕಟ್ಟಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಮಗು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಸ್ಥಳಕ್ಕೆ ಮಂಡ್ಯ ಜಿಲ್ಲಾ ಎಸ್‌ಪಿ ಭೇಟಿ: ಗನ್ ವಶಕ್ಕೆ ಪಡೆದು ತನಿಖೆ

ಆಕಸ್ಮಿಕ ಫೈರಿಂಗ್​ನಿಂದ ಮಗು ಸಾವನಪ್ಪಿದ ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಗನ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮಂಡ್ಯ: ಇಲ್ಲಿ ಆಸ್ತಿಗಾಗಿ ತಮ್ಮನ ಕೊಲೆಗೆ ಸುಪಾರಿ ನೀಡಿ ಪ್ರಯಾಗ್​ರಾಜ್ ಕುಂಭಮೇಳದಲ್ಲಿ ಅಣ್ಣನಿಂದ ಪುಣ್ಯಸ್ನಾನ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Mon, 17 February 25