3 ದಿನದಿಂದ ಒಂದೇ ಸಾಂಬಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರಿನ ಮಹಿಳೆ

ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ದುರಂತದಲ್ಲಿ ಅಂತ್ಯಗೊಂಡ ಹಲವು ಘಟನೆಗಳು ನಡೆದಿವೆ. ಇದೀಗ ಬೆಂಗಳೂರಿನಲ್ಲಿ ನಡೆದ ಈ ಘಟನೆ ಹಲವರನ್ನು ಬೆಚ್ಚಿ ಬೀಳಿಸಿದೆ. ಒಂದು ಸಣ್ಣ ಊಟದ ವಿಚಾರಕ್ಕೆ ಬಾಂಧವ್ಯ ಕಡಿದುಹೋಗಿದೆ. ಜೊತೆಗೆ ಚಿಕ್ಕ ಮಗು ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

3 ದಿನದಿಂದ ಒಂದೇ ಸಾಂಬಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರಿನ ಮಹಿಳೆ
Kavya

Updated on: Mar 07, 2026 | 5:28 PM

ಬೆಂಗಳೂರು, (ಮಾರ್ಚ್ 07) : ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ಜಗಳವೊಂದು ಅಂತಿಮವಾಗಿ ಗೃಹಿಣಿಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮೂರು ದಿನದ ಹಳೇ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದಾಳೆ. ಮೃತ ಮಹಿಳೆಯನ್ನು ಕಾವ್ಯ (27) ಎಂದು ಗುರುತಿಸಲಾಗಿದೆ. ಈಕೆ ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಆದ್ರೆ, ಇದೀಗ ತಾಯಿಯನ್ನು ಕಳೆದುಕೊಂಡ ಮಗು ಅನಾಥವಾಗಿದೆ.

ಪತಿಗೆ ಕಳೆದ ಮೂರು ದಿನಗಳಿಂದ ಒಂದೇ ಸಾಂಬಾರು ಬಡಿಸಿದ್ದಾಳೆ. ಫ್ರಿಡ್ಜ್‌ನಲ್ಲಿಟ್ಟು ತೆಗೆದು ಬಿಸಿ ಮಾಡಿ ಅದೇ ಸಾರನನ್ನು ಮೂರು ದಿನದಿಂದ ಬಡಿಸಿದ್ದಾಳೆ. ಎರಡು ದಿನ ಸಹಿಸಿಕೊಂಡ ಗಂಡ ಮೂರನೇ ದಿನ ಆಕ್ರೋಶಗೊಂಡಿದ್ದು, ಮೂರು ದಿನದ ಹಿಂದಿನ ಸಾರನ್ನು ಬಡಿಸುತ್ತಿದ್ದಿಯಾ ಎಂದು ಪತ್ನಿ ವಿರುದ್ದ ಜಗಳಕ್ಕೆ ನಿಂತಿದ್ದಾನೆ. ಅಲ್ಲದೇ ಪತ್ನಿಗೆ ಹಿಗ್ಗಾಮುಗ್ಗ ಬೈದಿದ್ದಾನೆ. ಪತಿಯ ಆಕ್ರೋಶಭರಿತ ಬೈಗುಳಕ್ಕೆ ನೊಂದ ಪತ್ನಿ ಬದುಕನ್ನೇ ಅಂತ್ಯಗೊಳಿಸಿದ್ದಾಳೆ.

ಇದನ್ನೂ ಓದಿ: 3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

ಪತಿಯ ನಿಂದನೆ ಹಾಗೂ ಹಲ್ಲೆಯ ಯತ್ನದಿಂದ ತೀವ್ರವಾಗಿ ಮನನೊಂದ ಕಾವ್ಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಕಾವ್ಯ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಮಾರ್ಗಮಧ್ಯದಲ್ಲೇ ಕಾವ್ಯ ಕೊನೆಯುಸಿರೆಳೆದಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಂಗಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us