ಬೆಂಗಳೂರು, ಸೆ.03: ರಾಜಧಾನಿ ಬೆಂಗಳೂರಿನಲ್ಲಿ ಇಂದು ಮುಂಜಾನೆ ಸುಮಾರು 3.45ರಲ್ಲಿ ಭೀಕರ ಅಪಘಾತ (Accident) ಸಂಭವಿಸಿದೆ. ಯಶವಂತಪುರ ಸರ್ಕಲ್ನಲ್ಲಿ ಕಾರು ಬೈಕ್ಗೆ ಡಿಕ್ಕಿ ಹೊಡೆದು ಡಿವೈಡರ್ಗೆ ಡಿಕ್ಕಿಯಾಗಿ ಮೇಲ್ಸೇತುವೆಯಿಂದ ಬಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಶಬರೀಶ್(29) ಮೃತ ದುರ್ದೈವಿ.
ಮೃತ ಶಬರೀಶ್ ತಮಿಳುನಾಡಿನ ಸೇಲಂ ಮೂಲದ ನಿವಾಸಿ. ಈತ ವೀಸಾ ಪಡೆಯಲು ನಿನ್ನೆ ಸ್ನೇಹಿತ ಮಿಥುನ್ ಜೊತೆ ಬೆಂಗಳೂರಿಗೆ ಬಂದಿದ್ದ. ಇದೇ ವೇಳೆ ಬೆಂಗಳೂರಲ್ಲಿ ವಾಸವಿದ್ದ ಶಂಕರ್ ಮತ್ತು ಆತನ ಸೋದರಿ ಅನುಶ್ರೀ ಇಬ್ಬರನ್ನೂ ಭೇಟಿ ಮಾಡಿದ್ದ. ನಾಲ್ವರು ಸ್ನೇಹಿತರು ಸೇರಿಕೊಂಡು ಊಟಕ್ಕೆಂದು ಕಾರಿನಲ್ಲಿ ತುಮಕೂರು ರಸ್ತೆ ಕಡೆ ಬರುತ್ತಿದ್ದ ವೇಳೆ ಯಶವಂತಪುರ ಸರ್ಕಲ್ ಫ್ಲೈಓವರ್ ಮೇಲೆ ಕಾರು ಅಪಘಾತವಾಗಿದೆ.
ಉಳಿದ ಶಂಕರ್ ರಾಮ್ (29), ಅನುಶ್ರೀ(23), ಮಿಥುನ್ (28) ಹಾಗೂ ಬೈಕ್ ನಲ್ಲಿದ್ದ ವ್ಯಕ್ತಿ ಮಂಜುನಾಥ್ (38)ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಯಶವಂತಪುರ ಸರ್ಕಲ್ ನಲ್ಲಿ ಬೆಳಗ್ಗೆ 3.45ರ ಸುಮಾರಿಗೆ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆಗೆ ತೆರಳುತಿದ್ದ ವೊಕ್ಸ್ ವಾಗೇನ್ ವೆಂಟೋ ಕಾರು ಅಪಘಾತವಾಗಿದೆ. ತಮಿಳುನಾಡು ನೋಂದಣಿ TN37 DH9484 ಸಂಖ್ಯೆಯ ಕಾರು ಇದಾಗಿದೆ.
ಇದನ್ನೂ ಓದಿ: ಬೆಂಗಳೂರು: ಬೈಕ್ಗೆ ಗುದ್ದಿ ಫ್ಲೈಓವರ್ನಿಂದ ಕೆಳಗೆ ಬಿದ್ದ ಕಾರು, ಐವರಿಗೆ ಗಂಭೀರ ಗಾಯ
ಇನ್ನು ಪ್ರತ್ಯಕ್ಷದರ್ಶಿ ಪಾಲ್ ಹೇಳಿದಂತೆ, ಸದಾಶಿನಗರ ಕಡೆಯಿಂದ ಕಾರು ಬಂದಿತ್ತು. ಕಾರಿನಲ್ಲಿದ್ದವರು ಕುಡಿದಿದ್ರು, ಒಬ್ಬ ಹುಡುಗಿ, ಮೂವರು ಯುವಕರು ಇದ್ರು. ನಾವೇ ಆಸ್ಪತ್ರೆಗೆ ಸಾಗಿಸಿದ್ವಿ. ಮೇಲೆ ಬೈಕ್‌ನಲ್ಲಿ ಒಬ್ಬರೇ ಇದ್ರು, ಮೇಲೆ ಬಿದ್ದಿದ್ರು ಎಂದು ಪ್ರತ್ಯಕ್ಷದರ್ಶಿ ಪಾಲ್ ತಿಳಿಸಿದ್ದಾರೆ.
ಮತ್ತೊಂದೆಡೆ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಕುಡಿದು ವಾಹನ ಚಾಲನೆ ಮಾಡುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕಾರು ಚಾಲಕ ಮದ್ಯ ಸೇವಿಸಿ ಅತಿಯಾದ ಸ್ಪೀಡ್ನಲ್ಲಿ ಕಾರು ಚಾಲನೆ ಮಾಡಿಕೊಂಡು ಹೋಗ್ತಿದ್ದ. ತುಮಕೂರು ರಸ್ತೆ ಕಡೆ ಫ್ಲೈ ಓವರ್ ಮೂಲಕ ಹೋಗ್ತಿದ್ರು. ಈ ವೇಳೆ ಡಿವೈಡರ್ ದಾಟಿ ತುಮಕೂರು ರಸ್ತೆ ಕಡೆಯಿಂದ ಬರ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಈ ಪರಿಣಾಮ ಫ್ಲೈ ಓವರ್ ನ ಕೆಳಗೆ ಬಿದ್ದಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಐವರಿಗೆ ಗಾಯಗಳಾಗಿದ್ದವು. ಈ ಪೈಕಿ ಓರ್ವ ಮೃತಪಟ್ಟಿದ್ದು ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಯಶವಂತಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ