AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಟ್ ಆಫ್ ಲಿವಿಂಗ್​ನ ಪರಿಶ್ರಮದಿಂದ ಮಹಿಮಾಪುರ ಗುಡ್ಡ ಈಗ ಹಸಿರುಮಯ

ಆರ್ಟ್ ಆಫ್ ಲಿವಿಂಗ್ ಮತ್ತು ಟಾರಸ್ ಪವರ್‌ಟ್ರಾನಿಕ್ಸ್ ಸಂಸ್ಥೆಗಳು ಬೆಂಗಳೂರಿನ ಕುಮುದ್ವತಿ ನದಿಯ ಪುನಶ್ಚೇತನಕ್ಕಾಗಿ ಜಂಟಿಯಾಗಿ ಕೆಲಸ ಮಾಡುತ್ತಿವೆ. ಮಹಿಮಾಪುರ ಗುಡ್ಡದಲ್ಲಿ 800ಕ್ಕೂ ಹೆಚ್ಚು ಸ್ಥಳೀಯ ಸಸಿಗಳನ್ನು ನೆಟ್ಟಿದ್ದು, ನೀಲಗಿರಿ ಮರಗಳನ್ನು ತೆಗೆದು ಸ್ಥಳೀಯ ಸಸ್ಯಗಳನ್ನು ನೆಡುವ ಮೂಲಕ ನದಿ ಪುನಶ್ಚೇತನಗೊಂಡಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿದೆ ಮತ್ತು ಜೈವಿಕ ವೈವಿಧ್ಯತೆಯೂ ಹೆಚ್ಚಾಗಿದೆ.

ಆರ್ಟ್ ಆಫ್ ಲಿವಿಂಗ್​ನ ಪರಿಶ್ರಮದಿಂದ ಮಹಿಮಾಪುರ ಗುಡ್ಡ ಈಗ ಹಸಿರುಮಯ
ಆರ್ಟ್​ ಆಫ್​ ಲಿವಿಂಗ್​ವತಿಯಿಂದ ಸಸಿ ನೆಡುತ್ತಿರುವುದು
ವಿವೇಕ ಬಿರಾದಾರ
|

Updated on:Aug 09, 2025 | 6:53 PM

Share

ಬೆಂಗಳೂರು, ಆಗಸ್ಟ್​ 09: ಆರ್ಟ್ ಆಫ್ ಲಿವಿಂಗ್ (Art of living) ಮತ್ತು ಟಾರಸ್ ಪವರ್‌ಟ್ರಾನಿಕ್ಸ್ ಸಂಸ್ಥೆಗಳು ಕುಮುದ್ವತಿಯ ಪುನಶ್ಚೇತನಕ್ಕಾಗಿ ಜಂಟಿಯಾಗಿ ಕೆಲಸ ಮಾಡುತ್ತಿದ್ದು, ಮಹಿಮಾಪುರ ಗುಡ್ಡವನ್ನು ಸ್ಥಳೀಯ ಕಾಡಾಗಿ ಮಾರ್ಪಡಿಸಿವೆ.

ಈ ವಾರದ ಕೊನೆಯಲ್ಲಿ ಕುಡುವನಹಳ್ಳಿ ಗ್ರಾಮಪಂಚಾಯತಿಯು 200ಕ್ಕಿಂತಲೂ ಹೆಚ್ಚು ಸ್ವಯಂಸೇವಕರಿಂದ ತುಂಬಿತ್ತು. ಇವರು ಕುಮುದ್ವತಿ ನದಿಪಾತ್ರದಲ್ಲಿರುವ ಮಹಿಮಾಪುರ ಗುಡ್ಡದ ಇಳಿಜಾರಿನಲ್ಲಿ 800 ಸಸಿಗಳನ್ನು ನೆಟ್ಟರು. ಆರ್ಟ್ ಆಫ್ ಲಿವಿಂಗ್ ಮತ್ತು ಟಾರಸ್ ಪವರ್‌ ಟ್ರಾನಿಕ್ಸ್​ರವರ ಜಂಟಿ ಯತ್ನದಿಂದ ಕಾರ್ಪೊರೇಟ್ ಸ್ವಯಂಸೇವಕರು, ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳು ಕುಮುದ್ವತಿ ನದಿಯ ಉಳಿವಿನ ಒಂದೇ ಒಂದು ಗುರಿಯನ್ನು ಹೊತ್ತು ಒಂದಾಗಿ ಸೇರಿದರು.

ತನ್ನ ಎಂಟನೆಯ ವರ್ಷದಲ್ಲಿರುವ ಟಾರಸ್ ಟಾರಸ್ ಪವರ್‌ಟ್ರಾನಿಕ್ಸ್ ಅವಶ್ಯಕವಾದ ಸಾರಿಗೆ, ಮತ್ತು ಸ್ಥಳದಲ್ಲಿ ಅವಶ್ಯಕವಾದ ಎಲ್ಲಾ ಸವಲತ್ತುಗಳನ್ನೂ ಒದಗಿಸಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸ್ಥಳವನ್ನು ಗುರುತಿಸಿ, ಭೂಮಿಯನ್ನು ಸಿದ್ಧಪಡಿಸಿ, ಸಸಿನೆಡುವಿಕೆಯ ಮಾರ್ಗದರ್ಶನವನ್ನು ಮಾಡಿತು. ಜಾಗತಿಕ ಮಾನವತಾವಾದಿಗಳೂ, ಆಧ್ಯಾತ್ಮಿಕ ಗುರುಗಳೂ ಆಗಿರುವ ಗುರುದೇವ್ ಶ್ರೀ ಶ್ರೀ ರವಿ ಶಂಕರ್ ರವರ ನೇತೃತ್ವದಲ್ಲಿ, ಕರ್ನಾಟಕದ ಜಲದ ಕೊರತೆಯನ್ನು ನೀಗಿಸಲು ಆರಂಭಿಸಲಾದ ಕುಮುದ್ವತಿ ನದಿಯ ಪುನಶ್ಚೇತನ ಕಾರ್ಯದ ಒಂದು ಭಾಗವೇ ಈ ಚಟುವಟಿಕೆ.

ಈ ಸಂದರ್ಭದಲ್ಲಿ ಮಾತನಾಡುತ್ತಾ ಟಾರಸ್ ಟಾರಸ್ ಪವರ್‌ಟ್ರಾನಿಕ್ಸ್​ನ ಅಧ್ಯಕ್ಷ ರವಿ ನಾರಾಯಣ್​ರವರು ಮಾತನಾಡಿ, “ನಮ್ಮ ಸಿಎಸ್​ಆರ್​ನ ಒಂದು ಪ್ರಮುಖ ಚಟುವಟಿಕೆಯೆಂದರೆ ಗಿಡಗಳನ್ನು ನೆಡುವುದು. ಗಿಡಗಳನ್ನು ನೆಡುವಾಗ, ನಾವು ಮಾಡುವ ಕಾರ್ಯದಲ್ಲೂ ಒಂದು ಅರ್ಥವಿರಬೇಕೆಂದು ಅಂದುಕೊಂಡೆವು. ಆ ಸಮಯದಲ್ಲಿ ಆರ್ಟ್ ಆಫ್ ಲಿವಿಂಗ್ ಮಾಡುತ್ತಿರುವ ಕೆಲಸದ ಬಗ್ಗೆ ತಿಳಿದುಕೊಂಡೆವು. ಕುಮುದ್ವತಿ ನದಿಯ ಪುನಶ್ಚೇತನದ ಸದುದ್ದೇಶವನ್ನು ಅವರು ಹೊಂದಿದ್ದರು. ಆರ್ಟ್ ಆಫ್ ಲಿವಿಂಗ್ ಸೂಚಿಸಿದ ಸ್ಥಳಗಳಲ್ಲಿ ನಾವು ಗಿಡಗಳನ್ನು ನೆಡುತ್ತಾ ಬಂದೆವು. ಕೆಲ ವರ್ಷಗಳ ನಂತರ ಅಲ್ಲಿಗೆ ಭೇಟಿ ನೀಡಿದಾಗ, ಅವುಗಳು ಚೆನ್ನಾಗಿ ಬೆಳೆದಿದ್ದವು. ಆ ಮರಗಳನ್ನು ನೋಡಿ ನಮಗೆಲ್ಲ ಬಹಳ ಸಂತೋಷವಾಯಿತು. ನದಿಯೂ ಪುನಶ್ಚೇತನಗೊಳ್ಳುತ್ತಿದೆಯೆಂದೂ ಮತ್ತು ಗಿಡಗಳನ್ನು ನೆಟ್ಟಿದ್ದು ಅದಕ್ಕೆ ಸಹಾಯವಾಯಿತೆಂದೂ ನನಗೆ ಈಗ ಆರ್ಟ್ ಆಫ್ ಲಿವಿಂಗ್​ ಮೂಲಕ ತಿಳಿದುಬಂದಿತು. ಇದು ನಮಗೆ ಬಹಳ ತೃಪ್ತಿಕರವಾಗಿದೆ” ಎಂದರು.

ಏಕರೀತಿಯ ನೀಲಗಿರಿ ಮರಗಳಿಂದ ಈಗ ಸ್ಥಳೀಯ ಕಾಡಾಗಿ ಮಾರ್ಪಟ್ಟಿದೆ

ಕೆಲಕಾಲದ ಹಿಂದೆ 30 ಎಕರೆಗಳ ಈ ಮಹಿಮಾಪುರ ಗುಡ್ಡವು 6000 ದಿಂದ 8000 ನೀಲಗಿರಿ ಮರಗಳಿಂದ ಆವೃತವಾಗಿತ್ತು. ಈ ಮರಗಳು ಎಲ್ಲ ಅಂತರ್ಜಲ ನೀರನ್ನೂ ಹೀರಿಕೊಂಡು, ಮತ್ತೆ ಭೂಮಿಗೆ ಏನನ್ನೂ ನೀಡದಿರುವ ಗುಣವುಳ್ಳಂತಹ ಮರಗಳು. ನೀರನ್ನು ಹೀರಿಬಿಡುವ ಈ ಜಾತಿಯ ಮರವನ್ನು ತೆಗೆಯಲು ಸರ್ಕಾರವು ಅನುಮತಿಯನ್ನು ನೀಡಿದಾಗ ಈ ಸಮಸ್ಯೆಯು ಒಂದು ತಿರುವನ್ನು ಪಡೆದುಕೊಂಡಿತು. ಗ್ರಾಮಸ್ಥರು ಒಂದು ಸಮಿತಿಯನ್ನು ರಚಿಸಿ ಆರ್ಟ್ ಆಫ್ ಲಿವಿಂಗ್ ಮತ್ತು ಐಎಹೆಚ್​ವಿಯೊಂದಿಗೆ ಕೆಲಸ ಮಾಡಿ, ಆ ಮರಗಳ ಬದಲಿಗೆ ಸ್ಥಳೀಯ ಜಾತಿ ವೃಕ್ಷಗಳಾದ ಸೀಬೆಕಾಯಿ, ನೇರಳೆ, ಕಾಡುಬಾದಾಮಿ, ಕಾಡು ಮಾವು, ಹಲಸಿನಹಣ್ಣು, ಚೆರ್ರಿ, ಇತ್ಯಾದಿ ವೃಕ್ಷಗಳನ್ನು ನೆಟ್ಟರು.

  • ನೀರಿನ ಮೇಲೆ ಮತ್ತು ಕಾಡುಪ್ರಾಣಿಗಳ ಮೇಲಿನ ಪ್ರಭಾವ
  • ಬೆಟ್ಟದ ತಪ್ಪಲಿನಲ್ಲಿರುವ ಬೋರ್‌ವೆಲ್‌ಗಳು ಪುನರ್ಭರ್ತಿಯಾಗಿದ್ದು, ಅತೀ ಸಣ್ಣದಾಗಿ ಬರುತ್ತಿದ್ದ ನೀರಿನ ಹರಿವು, ಈಗ ಒಂದರಿಂದ ಎರಡಿಂಚಷ್ಟು ಬರತೊಡಗಿದೆ.
  • ಸ್ಥಳೀಯ ವೃಕ್ಷಗಳು ಈಗ ಪ್ರಾಕೃತಿಕ ಅಂತರ್ಜಲ ರೀಚಾರ್ಜ್ ವ್ಯವಸ್ಥೆಯಂತೆ ಕೆಲಸ ಮಾಡಿ, ಕುಮುದ್ವತಿ ನದಿಗೆ ನೀರನ್ನು ಹರಿಸುತ್ತಿವೆ.
  • ಮೊಲಗಳು, ನವಿಲುಗಳು ಮತ್ತು ಇನ್ನಿತರ ಹಕ್ಕಿಗಳು ಇಲ್ಲಿಗೆ ಮರಳಿ ಬಂದಿದ್ದು, ಇವು ಹಕ್ಕಿ ವೀಕ್ಷಕರನ್ನು ತಮ್ಮೆಡೆಗೆ ಸೆಳೆದಿವೆ.

ಆಯ್ಕೆ ಮಾಡಲಾದ ಸಸಿಗಳ ಬಗ್ಗೆ ಮಾತನಾಡಿದ, ಆರ್ಟ್ ಆಫ್ ಲಿವಿಂಗ್​ನ ನದಿಗಳ ಪುನಶ್ಚೇತನ ಯೋಜನೆಗಳ ನಿರ್ದೇಶಕರಾದ ಡಾ.ಲಿಂಗರಾಜು ಯಾಲೆಯವರು, “ಸ್ಥಳೀಯ ವೃಕ್ಷಗಳನ್ನೇ ನಾವು ವೈಜ್ಞಾನಿಕವಾಗಿ ಆಯ್ಕೆ ಮಾಡಿಕೊಂಡೆವು. ಇವು ನೀರಿನ ಲಭ್ಯತೆಯನ್ನು ಹೆಚ್ಚಿಸುವುದಲ್ಲದೆ, ಹಕ್ಕಿಗಳನ್ನೂ ಆಕರ್ಷಿಸುತ್ತವೆ. ಪವಿತ್ರ ವೃಕ್ಷಗಳಾದ ಆಲದಮರ ಮತ್ತು ಅರಳಿಮರಗಳನ್ನು ಇಲ್ಲಿ ನೆಟ್ಟಿರುವುದರಿಂದ ಅವುಗಳನ್ನು ಸಂರಕ್ಷಿಸಲಾಗುತ್ತದೆ. ಉದಾಹರಣೆಗೆ ಇಲ್ಲಿರುವ ಒಂದು ರೀತಿಯ ಬೇವಿನ ಮರ ಈಗ ಬಹಳ ಗಿಣಿಗಳನ್ನು ಆಕರ್ಷಿಸುತ್ತಿದೆ” ಎನ್ನುತ್ತಾರೆ.

2013ರಿಂದ ಕುಮುದ್ವತಿ ನದಿ ಪುನಶ್ಚೇತನ ಯೋಜನೆಯಿಂದಾಗಿ, ಒಮ್ಮೆ ಒಣಗಿಹೋಗಿದ್ದ ಈ ನದಿಪಾತ್ರವು, ಸಮುದಾಯದ ಸಹಕಾರದಿಂದ, ಚೆಕ್ ಬೌಲ್ಡರ್​ಗಳು, ಪುನರ್ಜಲೀಕರಣ ಬಾವಿಗಳಂತಹ 3000 ನೀರಿನ ಮರುಪೂರಣ ರಚನೆಗಳ ನಿರ್ಮಾಣ, ಟ್ಯಾಂಕ್​ಗಳಿಂದ ಹೂಳು ತೆಗೆಯುವಂತಹ ವೈಜ್ಞಾನಿಕ ಕ್ರಮಗಳಿಂದ ಮತ್ತು ಬೃಹತ್ ಪ್ರಮಾಣದಲ್ಲಿ ಗಿಡಗಳನ್ನು ನೆಡುವುದರಿಂದ ಮತ್ತೆ ಪುನಶ್ಚೇತನಗೊಂಡಿದೆ. ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದ್ದು, ಇಂದು ಇದು 270 ಹಳ್ಳಿಗಳನ್ನು ವ್ಯಾಪಿಸಿದೆ, ಸಾವಿರಾರು ಸ್ವಯಂಸೇವಕರ ಪರಿಶ್ರಮದಿಂದ ನೀರಿನ ಅಭಾವ ನೀಗಿದೆ, ಜೈವಿಕ ವೈವಿಧ್ಯತೆ ಹೆಚ್ಚಿದೆ ಮತ್ತು ಪಾಕೃತಿಕ ಸಂಪನ್ಮೂಲಗಳ ಮೇಲೆ ಸ್ಥಳೀಯ ಸಮುದಾಯಗಳು ಜವಾಬ್ದಾರಿಯನ್ನು ಹೊಂದಿವೆ. ವರದಿಗಳ ಪ್ರಕಾರ, ನೀರಿನ ಮರುಪೂರಣದಲ್ಲಿ ಶೇ.20 ರಷ್ಟು ಸುಧಾರಣೆ ಕಂಡುಬಂದಿದೆ. 2012 ರ ಮೊದಲು ನೀರಿನ ಮಟ್ಟ 800-1000 ಅಡಿಗಳಷ್ಟು ಇತ್ತು. ಈಗ ನದಿಪಾತ್ರದ ಎಲ್ಲಾ ಹಳ್ಳಿಗಳಲ್ಲೂ ನೀರು 400 ಅಡಿಗಳಿಗೇ ಸಿಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Sat, 9 August 25