ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿಗೆ ಚಾಲನೆ, ಎಲ್ಲಿ ಸಿಗುತ್ತೆ ಈ ಅಕ್ಕಿ? ಬೆಲೆ ಎಷ್ಟು? ಇಲ್ಲಿದೆ ವಿವರ
Bharat Brand Rice: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರ ಮಾರಾಟ ಮಾಡಲು ತೀರ್ಮಾನಿಸಿರುವ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಈ ಭಾರತ್ ಅಕ್ಕಿ ಇಂದಿನಿಂದ ದೇಶದದ್ಯಾಂತ ಲಭ್ಯವಿದೆ. ಹಾಗಾದ್ರೆ, ಈ ಭಾರತ್ ಬ್ರಾಂಡ್ ಅಕ್ಕಿ ಎಲ್ಲೆಲ್ಲಿ ಸಿಗುತ್ತೆ? ಒಂದು ಕೆಜಿಗೆ ಎಷ್ಟು ಬೆಲೆ? ಎನ್ನುವ ವಿವರ ಈ ಕೆಳಗಿನಂತಿದೆ.
ಬೆಂಗಳೂರು, (ಫೆಬ್ರವರಿ 06): ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ (Bharat Brand Rice)ಯೋಜನೆಗೆ ಇಂದು(ಫೆಬ್ರವರಿ 06) ಚಾಲನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಈ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದರು. ಮತ್ತೊಂದೆಡೆ ವಸಂತ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ನೆಫೆಡ್ ಕಚೇರಿ ಮುಂಭಾಗದಲ್ಲಿ ಭಾರತ್ ಅಕ್ಕಿ ಮಾರಟ ವಾಹನಗಳಿಗೆ ಚಾಲನೆ ನೀಡಲಾಗಿದೆ. ಎಫ್‌ಸಿಐ ಚೆರ್ಮನ್ ಭೂಪೇಂದ್ರ ಸಿಂಗ್ ಬಾಟಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಒಟ್ಟು 7 ವಾಹನಗಳಿಗೆ ಚಾಲನೆ ನೀಡಿದರು.
ಭಾರತ್ ಅಕ್ಕಿ ಯೋಜನೆಗೆ ಚಾಲನೆ ನೀಡದ ಬಳಿಕ ಮಾತನಾಡಿದ ಬಿಎಸ್ವೈ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. 29 ರೂಪಾಯಿಗೆ ಕೆಜಿ ಅಕ್ಕಿ, ಗೋದಿ 50 ರೂ., ಹೆಸರು ಕಾಳು 90 ರೂ., ತೊಗರಿ ಬೇಳೆ 60 ರೂ. ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಹೆಮ್ಮೆ ಇದೆ. ದೇಶದ ಇತಿಹಾಸದಲ್ಲಿ ಬಡವರು ಮತ್ತು ಮಧ್ಯಮ ವರ್ಗಕ್ಕೆ ಯೋಜನೆ ತಲುಪಲಿದೆ. ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಹತ್ತು ಕೆಜಿ ಅಕ್ಕಿ ಉಚಿತ ನೀಡುವುದಾಗಿ ಹೇಳಿ ಕೇಂದ್ರದ ಐದು ಕೆಜಿ ಅಕ್ಕಿ ಹೊರತುಪಡಿಸಿ ಒಂದು ಕೆಜಿಯೂ ಅಕ್ಕಿ ಕೊಟ್ಟಿಲ್ಲ. ಜನರಿಗೆ ಅನುಕೂಲ ಆಗುವಂತೆ ಕಡಿಮೆ ದರದಲ್ಲಿ ಅಕ್ಕಿ ದೊರೆಯುತ್ತಿದೆ ಎಂದು ಹೇಳಿದರು.
ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮತ್ತಷ್ಟು ನೆರವು ನೀಡುವ ನಿಟ್ಟಿನಲ್ಲಿ, ಇಡೀ ದೇಶದಲ್ಲಿ ಒಂದೇ ಬ್ರ್ಯಾಂಡಿನಡಿಯಲ್ಲಿ ಅಗತ್ಯ ಆಹಾರ ಸಾಮಗ್ರಿಗಳನ್ನು ರಿಯಾಯತಿ ದರದಲ್ಲಿ ನೀಡುವ ಮಹತ್ವಾಕಾಂಕ್ಷಿ ಉಪಕ್ರಮವನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು, ಅದರ ಅಂಗವಾಗಿ ಇಂದಿನಿಂದ ಕೆಜಿಗೆ 29 ರೂ.ಗೆ ದೊರೆಯುವ ʼಭಾರತ್ ಅಕ್ಕಿʼ ವಿತರಣೆ… pic.twitter.com/xYrAhgL6x8
— B.S.Yediyurappa (@BSYBJP) February 6, 2024
5 ಕೆಜಿ, 10 ಕೆಜಿ ಬ್ಯಾಗ್ಗಳಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಲಭ್ಯ
ಅಕ್ಕಿ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. ನಾಫೆಡ್-ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಇಂದು ನಾಫೆಡ್ನ 7 ಸಂಚಾರಿ ವಾಹನಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತದೆ. ಭಾರತ್ ಅಕ್ಕಿ ಯೋಜನೆಯಡಿ ಕೆಜಿ ಭಾರತ್ ಅಕ್ಕಿಗೆ 29 ರೂ. ನಿಗದಿ ಪಡಿಸಲಾಗಿದ್ದು, 5 ಕೆಜಿ, 10 ಕೆಜಿ ಬ್ಯಾಗ್ಗಳಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಲಭ್ಯವಿದೆ. ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದ್ದು, ನಾಳೆಯಿಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಲಭ್ಯವಾಗಲಿದೆ. ಇನ್ನು ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿ ಒಂದು ಬಾರಿ 10 ಕೆಜಿ ಅಕ್ಕಿ ಪಡೆಯಬಹುದು. ಈ ಅಕ್ಕಿ ಕೊಂಡುಕೊಳ್ಳಲು ಯಾವುದೇ ಬಿಪಿಎಲ್, ಎಪಿಎಲ್ ರೇಷನ್ ಕಾರ್ಡ್ ಅವಶ್ಯಕತೆ ಇಲ್ಲ.
ಎಲ್ಲೆಲ್ಲಿ ಸಿಗದೆ ಭಾರತ್ ಬ್ರ್ಯಾಂಡ್ ಅಕ್ಕಿ?
ಇನ್ನು ಕೇಂದ್ರದ ಭಾರತ್ ಬ್ರ್ಯಾಂಡ್ ಅಕ್ಕಿ ರಿಲಯನ್ಸ್, ಫ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್ ಅಷ್ಟೇ ಅಲ್ಲದೆ ಆನ್ಲೈನ್ನಲ್ಲೂ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದು. ಇನ್ನೊಂದು ವಾರದಲ್ಲಿ ಇತರೆ ಸ್ಟೋರ್ಗಳಲ್ಲೂ ಭಾರತ್ ಅಕ್ಕಿ ಲಭ್ಯವಾಗಲಿದೆ. ಎನ್‌ಸಿಸಿಎಫ್‌ನ ಮುಖ್ಯ ಗೋಡಾನ್ ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಏರಿಯಾಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ಅಕ್ಕಿ ತಲುಪಿಸಲು ಸಹ ಸಿದ್ಧತೆ ನಡೆದಿದೆ.
ಅಮೆಜಾನ್, ಫ್ಲಿಪ್‌ಕಾರ್ಟ್ ಮುಂತಾದ ಇ – ಕಾಮರ್ಸ್ ತಾಣಗಳಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ. ‘ಭಾರತ್’ ಅಕ್ಕಿ 5 ಕೆ.ಜಿ, 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ಮಾರಾಟಗೊಳ್ಳಲಿದ್ದು, ಪ್ರತಿ ಕಿ.ಲೋಗೆ 29 ರೂ. ನಿಗದಿ ಪಡಿಸಲಾಗಿದೆ ಎಂದು ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:55 pm, Tue, 6 February 24