ಬೈಕ್ ಟ್ಯಾಕ್ಸಿ ನಿಷೇಧದಿಂದ ಸ್ವಿಗ್ಗಿ, ಜೊಮೆಟೋ ಡೆಲಿವರಿ ಬಾಯ್​ಗಳಿಗೂ ಸಂಕಷ್ಟ

ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಅವುಗಳನ್ನು ಓಡಿಸುತ್ತಿದ್ದ ಯುವಕರು ಫುಡ್ ಡೆಲಿವರಿ, ಗ್ರೋಸರಿ, ಆನ್ಲೈನ್ ಐಟಮ್ಸ್ ಡೆಲಿವರಿ ಮೊರೆ ಹೋಗಿದ್ದಾರೆ. ಇತ್ತ ಕೇಂದ್ರ ಸರ್ಕಾರ ಆನ್ಲೈನ್ ಡೆಲಿವರಿ ಮಾಡುವ ಬೈಕ್​ಗಳಿಗೂ ಕಡಿವಾಣ ಹಾಕುವ ಚಿಂತನೆ ನಡೆಸಿದ್ದು, ಬೈಕ್ ಟ್ಯಾಕ್ಸಿ ಹುಡುಗರು ಮತ್ತು ಆನ್ಲೈನ್ ಡೆಲಿವರಿ ಮಾಡುತ್ತಿರುವವರಿಗೆ ದಿಕ್ಕು ತೋಚದಂತೆ ಮಾಡಿದೆ.

ಬೈಕ್ ಟ್ಯಾಕ್ಸಿ ನಿಷೇಧದಿಂದ ಸ್ವಿಗ್ಗಿ, ಜೊಮೆಟೋ ಡೆಲಿವರಿ ಬಾಯ್​ಗಳಿಗೂ ಸಂಕಷ್ಟ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Jun 26, 2025 | 7:35 AM

ಬೆಂಗಳೂರು, ಜೂನ್ 26: ಬೈಕ್ ಟ್ಯಾಕ್ಸಿ (Bike Taxi) ಕಾರ್ಯಾಚರಣೆಗೆ ಅವಕಾಶ ನಿರಾಕರಿಸಿ ಕರ್ನಾಟಕ ಹೈಕೋರ್ಟ್ ಈಗಾಗಲೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ‌ಇಲಾಖೆ ನೂರಾರು ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಿದೆ. ಹೀಗಾಗಿ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದವರು ಇದೀಗ ಸ್ವಿಗ್ಗಿ, ಜೊಮೆಟೋ, ಪೋರ್ಟರ್ ಸೇರಿದಂತೆ ಆನ್​ಲೈನ್ ಡೆಲಿವೆರಿ ಆ್ಯಪ್​​ಗಳ ಮೊರೆ ಹೋಗಿದ್ದಾರೆ. ಆದರೆ ಆನ್​ಲೈನ್ ಡೆಲಿವೆರಿ ಆ್ಯಪ್​ಗಳನ್ನು ಈಗಾಗಲೇ ಲಕ್ಷಾಂತರ ಯುವಕರು ಬಳಸಿ ಜೀವನ ನಡೆಸುತ್ತಿದ್ದಾರೆ. ಬೈಕ್ ಟ್ಯಾಕ್ಸಿ ಯುವಕರು ಈಗ ಆನ್​ಲೈನ್ ಡೆಲಿವರಿ ಆ್ಯಪ್​ಗಳಿಗೆ ಶಿಫ್ಟ್ ಆಗಿರುವುದರಿಂದ ಸರಿಯಾಗಿ ಆರ್ಡರ್ ಸಿಗದೆ ಕಂಗಲಾಗಿದ್ದಾರೆ.

ಬೈಕ್ ಟ್ಯಾಕ್ಸಿ ಹುಡುಗರನ್ನು ಕೇಳುವವರೇ ಇಲ್ಲ. ಸರ್ಕಾರ ಅನುಮತಿ ನೀಡುವ ಸಂದರ್ಭದಲ್ಲೇ ಇವೆಲ್ಲವನ್ನೂ ನೋಡಿ ಅನುಮತಿ ನೀಡಬೇಕಿತ್ತು. ಈಗ ಏಕಾಏಕಿ ಯೆಲ್ಲೋ ಬೋರ್ಡ್ ಬೇಕು ಅಂದರೆ ಕಷ್ಟ ಆಗುತ್ತದೆ. ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದವರು ಕಂಗಲಾಗಿದ್ದಾರೆ. ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದವರು ಫುಡ್ ಡೆಲಿವರಿ ಮಾಡಲು ಮುಂದಾಗಿದ್ದಾರೆ. ಇನ್ನೂ ಕೆಲವರು ಕೂಲಿ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ಡೆಲಿವರಿ ಬಾಯ್ಸ್ ಅಸೋಸಿಯೇಷನ್ ಹೇಳಿದೆ.

ಆನ್​ಲೈನ್ ಡೆಲಿವರಿ ಬೈಕ್​ಗಳಿಗೂ ಕಡಿವಾಣ?

ಬೈಕ್ ಟ್ಯಾಕ್ಸಿ ನಿಷೇಧದ ಬಳಿಕ ಸ್ವಿಗ್ಗಿ, ಜೊಮೆಟೋದಂಥ ಆನ್​​ಲೈನ್ ಡೆಲಿವರಿ ಮಾಡುವ ಬೈಕ್​ಗಳಿಗೂ ಕಡಿವಾಣ ಬೀಳಲಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಖಾಸಗಿ ಬೈಕ್ ಬಳಸದಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದರಿಂದ ಗಿಗ್ ಕಾರ್ಮಿಕರಲ್ಲಿ ಆತಂಕ ಶುರುವಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಜೊಮೆಟೋದಂಥ ಇ-ಕಾಮರ್ಸ್, ಕ್ವಿಕ್ ಕಾಮರ್ಸ್ ಉದ್ದೇಶಕ್ಕೆ ಖಾಸಗಿ ವಾಹನ ಬಳಸುವವರಿಗೂ ಸಮಸ್ಯೆ ಎದುರಾಗಲಿದೆಯಾ ಎಂಬ ಆತಂಕ ಶುರುವಾಗಿದೆ.

ಇದನ್ನೂ ಓದಿ
ಗ್ರಾಹಕರಿಗೆ ಮತ್ತೊಂದು ಶಾಕ್: ಬೆಸ್ಕಾಂ ವಿದ್ಯುತ್ ಬಿಲ್ ನೋಡಿ ಜನ ಬೇಸ್ತು
ಇನ್ಮುಂದೆ ಐದು ಖಾಸಗಿ ಆ್ಯಪ್​ಗಳ ಮೂಲಕವೂ ಖರೀದಿಸಬಹುದು ಮೆಟ್ರೋ ಟಿಕೆಟ್!
ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ತೀರ್ಪು
ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಕೇಂದ್ರ ಸರ್ಕಾರ ಹೇಳುವುದೇನು?

ಗಿಗ್ ಕಾರ್ಮಿಕರ ಅಪಾಯ ಮತ್ತು ಸಂಚಾರ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಸಂಚಾರ ನಿಯಮ ಉಲ್ಲಂಘನೆ, ಸಾರ್ವಜನಿಕ ಸುರಕ್ಷತಾ ಅಪಾಯ, ನಗರ ಸಂಚಾರ ದಟ್ಟಣೆ ಉಲ್ಲೇಖಿಸಿ, ಇ-ಕಾಮರ್ಸ್ ಮತ್ತು ಕ್ವಿಕ್ -ಕಾಮರ್ಸ್ ಪ್ಲಾಟ್‌ಫಾರ್ಮ್ ಗಿಗ್ ಕಾರ್ಮಿಕರು ಖಾಸಗಿ ವಾಹನ ಬಳಸುತ್ತಿರುವ ಕುರಿತು ಕೇಂದ್ರ ಸಾರಿಗೆ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ನೋವು ತೊಡಿಕೊಂಡ ಆನ್ಲೈನ್ ಡೆಲಿವರಿ ಬಾಯ್ ಒಬ್ಬರು, ನಿನ್ನೆ-ಮೊನ್ನೆಯಿಂದ ನಾವು ವೈಟ್ ಬೋರ್ಡ್ ಬೈಕ್​​ನಲ್ಲಿ ಆನ್​ಲೈನ್ ಡೆಲಿವೆರಿ ಮಾಡುತ್ತಿಲ್ಲ. ತುಂಬಾ ವರ್ಷಗಳಿಂದ ಮಾಡುತ್ತಿದ್ದೇವೆ. ಈಗ ದಿಢೀರಾಗಿ ಯೆಲ್ಲೋ ಬೋರ್ಡ್ ಬೇಕು ಅಂದರೆ ಎಲ್ಲಿಂದ ತರುವುದು. ಈಗಿರುವ ಬೈಕ್​ಗೆ ಮಾಡಿರುವ ಸಾಲವೇ ಇನ್ನೂ ಮುಗಿದಿಲ್ಲ. ಹೀಗಿರುವಾಗ ಹೊಸ ಬೈಕ್ ತೆಗೆದುಕೊಂಡರೆ ಅದಕ್ಕೂ ಸಾಲ ತೆಗೆದುಕೊಳ್ಳಬೇಕು. ಆರಂಭದಲ್ಲೇ ಹೇಳಿದ್ದರೆ ನಾವು ಯೆಲ್ಲೋ ಬೋರ್ಡ್ ಬೈಕ್ ಅನ್ನೇ ತೆಗೆದುಕೊಳ್ಳುತ್ತಿದ್ದೆವು. ಈ ಬೈಕ್ ಅನ್ನೇ ಉಚಿತವಾಗಿ ಯೆಲ್ಲೋ ಬೋರ್ಡ್ ಮಾಡಿಕೊಡಲಿ‌ ಇದರಿಂದ ನಮಗೆ ತುಂಬಾ ಸಹಾಯ ಆಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ಬೆಸ್ಕಾಂ: ವಿದ್ಯುತ್ ಬಿಲ್ ನೋಡಿ ಜನ ಬೇಸ್ತು

ರ್ಯಾಪಿಡೋ ಬ್ಯಾನ್ ಆಗುವ ಮೊದಲು ಪ್ರತಿದಿನ ಒಂದು ಸಾವಿರ ರುಪಾಯಿ ಆದಾಯ ಗಳಿಸುತ್ತಿದ್ದೆವು. ಬ್ಯಾನ್ ಆದ ಮೇಲೆ ಪ್ರತಿದಿನ 500 ರುಪಾಯಿ ಆದಾಯ ಬರುತ್ತಿದೆ. ರ್ಯಾಪಿಡೋ ಬ್ಯಾನ್ ಆಗಿರುವುದಕ್ಕೆ ಎಲ್ಲಾ ರ್ಯಾಪಿಡೋ ಹುಡುಗರು ಡೆಲಿವೆರಿ ಮಾಡಲು ಬಂದಿದ್ದಾರೆ. ಕಳೆದ ಎರಡು ವರ್ಷದಿಂದ ಸ್ವಿಗ್ಗಿಯಲ್ಲಿ ಡೆಲಿವೆರಿ ಮಾಡುತ್ತಿದ್ದೇನೆ ಎಂದು ಡೆಲಿವೆರಿ ಬಾಯ್ ಸೋಮಿತ್ರ ನಾಥ್‌ ಎಂಬವರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಬೈಕ್ ಓಡಿಸುತ್ತಿದ್ದ ಹುಡುಗರು ಆನ್​ಲೈನ್ ಡೆಲಿವರಿ ಮಾಡಲು ಮುಂದಾಗಿದ್ದಾರೆ. ಇದರಿಂದ ಅಲ್ಲೂ ಸರಿಯಾಗಿ ಆರ್ಡರ್ ಸಿಗದೆ, ಇತ್ತ ಬೈಕ್ ಟ್ಯಾಕ್ಸಿಯೂ ಇಲ್ಲದೆ ಕಂಗಲಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ