ಬೆಂಗಳೂರಿನಲ್ಲಿ ಅಮಿತ್ ಶಾ: ಯಡಿಯೂರಪ್ಪ ಜೊತೆ ಉಪಹಾರ, ಆರಗ ಜ್ಞಾನೇಂದ್ರಗೆ ಕ್ಲಾಸ್, ಉದ್ಯಮಿಗಳಿಗೆ ಉಪನ್ಯಾಸ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 04, 2022 | 2:25 PM

ಯಡಿಯೂರಪ್ಪ ಅವರೊಂದಿಗೆ ಉಪಾಹಾರ ಸ್ವೀಕರಿಸಿದ ಅಮಿತ್ ಶಾ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಬೆಂಗಳೂರಿನಲ್ಲಿ ಅಮಿತ್ ಶಾ: ಯಡಿಯೂರಪ್ಪ ಜೊತೆ ಉಪಹಾರ, ಆರಗ ಜ್ಞಾನೇಂದ್ರಗೆ ಕ್ಲಾಸ್, ಉದ್ಯಮಿಗಳಿಗೆ ಉಪನ್ಯಾಸ
ಕೇಂದ್ರ ಗೃಹ ಸಚಿವ ಅಮಿತ್ ಶಾ


ಬೆಂಗಳೂರು: ಭಾರತೀಯ ಜನತಾ ಪಕ್ಷದ (BJP) ಚಾಣಕ್ಯ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗುರುವಾರ ಬೆಂಗಳೂರಿನಲ್ಲಿ ಹಲವು ನಾಯಕರನ್ನು ಭೇಟಿಯಾದರು. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಂತೂರು ಮತ್ತು ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರನ್ನು ಅಮಿತ್ ಶಾ ಭೇಟಿಯಾಗಿ ಚರ್ಚಿಸಿದರು.

ಯಡಿಯೂರಪ್ಪ ಅವರೊಂದಿಗೆ ಉಪಾಹಾರ ಸ್ವೀಕರಿಸಿದ ಅಮಿತ್ ಶಾ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಹೊಟೆಲ್​ನಲ್ಲಿ ತಮ್ಮನ್ನು ಭೇಟಿಯಾಗುವಂತೆ ಯಡಿಯೂರಪ್ಪ ಅವರಿಗೆ ನಿನ್ನೆಯೇ ಅಮಿತ್ ಶಾ ಕಡೆಯಿಂದ ಸಂದೇಶ ರವಾನೆಯಾಗಿತ್ತು. ಅಮಿತ್ ಶಾ ವಾಸ್ತವ್ಯ ಹೂಡಿದ್ದ ತಾಜ್ ವೆಸ್ಟ್​ ಎಂಡ್ ಹೊಟೆಲ್​ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಹೋಟೆಲ್​ ಒಳಗೆ ಮತ್ತು ಹೊರಗೆ ಬಂದೋಬಸ್ತ್​ಗಾಗಿ 1,000ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಆರಗ ಜ್ಞಾನೇಂದ್ರಗೆ ಕ್ಲಾಸ್

ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಮಾತನಾಡಿದ ಅಮಿತ್ ಶಾ, ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಯ ಬಗ್ಗೆ ಮಾಹಿತಿ ಕೇಳಿದರು. ಆರಗ ಜ್ಞಾನೇಂದ್ರ ನೀಡಿದ ವಿವರಣೆಯ ಬಗ್ಗೆ ಅಮಿತ್ ಶಾ ಅತೃಪ್ತಿ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ. ‘ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಮುಖ್ಯವಲ್ಲ. ಇಂಥ ಪ್ರಕರಣಗಳ ಸಮಗ್ರ ವಿವರ ನಿಮಗೆ ಗೊತ್ತಿರಬೇಕು. ಗೃಹ ಇಲಾಖೆಯ ನಿರ್ವಹಣೆ ಬಿಗಿಯಾಗಿರಬೇಕು’ ಎಂದು ಅಮಿತ್ ಶಾ ತಾಕೀತು ಮಾಡಿದರು ಎಂದು ಮೂಲಗಳು ಹೇಳಿವೆ.

ಕೊವಿಡ್​ಗೆ ಅಂಜದೆ ಆರ್ಥಿಕ ಪ್ರಗತಿ

ಬಿಜೆಪಿ ನಾಯಕರು ಮತ್ತು ಸಚಿವ ಭೇಟಿಯ ನಂತರ ಭಾರತೀಯ ಕೈಗಾರಿಕೆಗಳ ಒಕ್ಕೂಟ (Confederation of Indian Industry – CII) ಆಯೋಜಿಸಿದ್ದ ‘ಸಂಕಲ್ಪ್​ ಸೆ ಸಿದ್ಧಿ’ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಂಡರು. ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು. ಕೊವಿಡ್ ಸಂಕಷ್ಟ ಪರಿಸ್ಥಿತಿ ಆವರಿಸಿದ್ದಾಗ ಲಸಿಕೆಗಳನ್ನು ಉಚಿತವಾಗಿ ಕೊಟ್ಟೆವು. ಲಸಿಕೆ ಪಡೆದವರು ಪ್ರಮಾಣ ಪತ್ರಕ್ಕಾಗಿ ಕಷ್ಟಪಡಬೇಕಾದ ಪರಿಸ್ಥಿತಿ ಇರಲಿಲ್ಲ. ಆರ್ಥಿಕ ಅಭಿವೃದ್ಧಿಗಾಗಿಯೂ ಇದೇ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿದೆವು ಎಂದು ಹೇಳಿದರು.

ಸ್ವಚ್ಛ ಭಾರತ್ ಮತ್ತು ಸ್ವಸ್ಥ್ ಭಾರತ್ ಅಭಿಯಾನಗಳು ನಿರೀಕ್ಷಿತ ಫಲಿತಾಂಶ ನೀಡಿದವು. ನೇರ ನಗದು ವರ್ಗಾವಣೆ, ಜಿಎಸ್​ಟಿ, ಉಜ್ವಲಾ, ಡಿಸ್ಕಾಂ ಸೇರಿದಂತೆ ಆರ್ಥಿಕ ವ್ಯವಸ್ಥೆ ಸದೃಢಗೊಳಿಸಲು ಹಲವು ರೀತಿಯಲ್ಲಿ ಯತ್ನಿಸಿದೆವು. ನಾವು ಎಂಥ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆ ಎಂಬುದನ್ನು ಕೈಗಾರಿಕೋದ್ಯಮಗಳು ಗುರುತಿಸಬೇಕು. ಸಪ್ಲೈ ಚೈನ್​ನಲ್ಲಿ ನಾಪತ್ತೆಯಾಗಿರುವ ವಸ್ತುಗಳನ್ನು ಗುರುತಿಸಿ, ಅದು ಭಾರತದಲ್ಲಿಯೇ ತಯಾರಾಗುವಂತೆ ಮಾಡುವ ಕಡೆಗೆ ಗಮನ ನೀಡಬೇಕು ಎಂದು ಸಲಹೆ ಮಾಡಿದರು.

ಕೈಗಾರಿಕೆಗಳು ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ದೇಶದ ಆಶೋತ್ತರಗಳನ್ನು ಅರಿತುಕೊಂಡು ಸ್ಪಂದಿಸಬೇಕು. ದೇಶವನ್ನು ಸ್ವಾವಲಂಬಿಯಾಗಿಸಲು ಉದ್ಯಮಿಗಳು ಮುಂದೆ ಬರಬೇಕು. ರಕ್ಷಣೆ ಸೇರಿದಂತೆ ಅಗತ್ಯ ಕ್ಷೇತ್ರಗಳಿಗೆ ಆದ್ಯತೆ ಸಿಗಬೇಕು ಎಂದು ನುಡಿದರು.

ಸಿಐಐ ಕಾರ್ಯಕ್ರಮದ ನಂತರ ಯಲಹಂಕದ ಕೆಎಂಎಫ್ ಮದರ್ ಡೇರಿಗೆ ಭೇಟಿ ನೀಡಲಿರುವ ಅಮಿತ್ ಶಾ, ಪೂರ್ವ ನಿಗದಿಯಂತೆ ಎಚ್​ಎಎಲ್ ಏರ್​ಪೋರ್ಟ್ ಬದಲಾಗಿ ಯಲಹಂಕ ಏರ್ ಫೋರ್ಸ್ ಸ್ಟೇಷನ್​ನಿಂದಲೇ ವಿಶೇಷ ವಿಮಾನದ ಮೂಲಕ ದೆಹಲಿಗೆ ನಿರ್ಗಮಿಸಲಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada