ಬೆಂಗಳೂರು, (ಏಪ್ರಿಲ್ 08): ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಹೀಗಾಗಿ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದು, ಇಂದು(ಏಪ್ರಿಲ್ 08) ಏಕಾಏಕಿ ಕೆಪಿಸಿಸಿ ಕಚೇರಿ ಬಳಿ ಬಂದಿದ್ದಾರೆ. ಇದನ್ನು ನೋಡಿದ ಡಿಕೆ ಶಿವಕುಮಾರ್ ಕೂಡಲೇ ನಿಶಾ ಅವರನ್ನ ಕರೆದು ಮಾತನಾಡಿಸಿದ್ದಾರೆ. ಈ ವೇಳೆ ನಿಶಾ ಅವರು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಡಿಕೆ ಶಿವಕುಮಾರ್ ಮುಂದೆ ಕಣ್ಣೀರಿಟ್ಟಿದ್ದಾರೆ. ಆದ್ರೆ, ಇದನ್ನು ಡಿಕೆ ಶಿವಕುಮಾರ್ ತಿರಸ್ಕರಿಸಿದ್ದು, ತಲೆಯಲ್ಲಿ ಏನೋ ಇದೆ, ನೋಡುತ್ತೇನೆ ಹೋಗಮ್ಮಾ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ, ನಿಶಾ ಯೋಗೇಶ್ವರ್ ಮಾತ್ರ ತಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದು ಕಣ್ಣೀರಿಟ್ಟಿದ್ದಾರೆ.
ಇತ್ತೀಚೆಗಷ್ಟೇ ಯೋಗೇಶ್ವರ್ ಪುತ್ರಿ ನಿಶಾ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು. ಇದರಿಂದ ಈ ಬಗ್ಗೆ ನಿಶಾ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಸದ್ಯಕ್ಕೆ ಯಾವ ಪಕ್ಷದಲ್ಲಿಯೂ ಇಲ್ಲ, ನಾನು ಯಾವುದೇ ಪಕ್ಷವನ್ನ ಸೇರಿಲ್ಲ. ಕಾಂಗ್ರೆಸ್ ಸೇರಲು ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ಮುಂದೆ ನಾನು ಉತ್ತರ ಕೊಡುತ್ತೇನೆ ಎಂದಿದ್ದರು. ಇನ್ನು ನಿಶಾ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಡಿಕೆ ಶಿವಕುಮಾರ್, ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವುದಾಗಿ ಭೇಟಿಯಾಗಿದ್ದರು. ಪಾಪ ಧೈರ್ಯವಂತ ಹೆಣ್ಣು ಮಗಳು. ಈಗ ಏನೋ ಧೈರ್ಯ ಮಾಡಿದ್ದಾಳೆ. ಆದರೆ, ಅಪ್ಪ, ಮಗಳನ್ನು ದೂರ ಮಾಡಬಾರದು ಎಂದು ನಾನು ಸುಮ್ಮನೆ ಇದ್ದೇನೆ ಎಂದು ಹೇಳಿದ್ದರು. ನೀವೇಕೆ ಅಪ್ಪ ಮಗಳನ್ನು ದೂರ ಮಾಡಿದಿರಿ ಎಂದು ಜನ ನನ್ನನ್ನು ಪ್ರಶ್ನೆ ಕೇಳಬಾರದಲ್ಲವೇ? ಆ ಕಾರಣಕ್ಕಾಗಿಯೇ ನಾನು ಸುಮ್ಮನೆ ಇದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.
ನಾನು ಎಲ್ಲಿ ಹೋದರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಕ್ಕೆ ಅಭಿನಂದನೆ ಎಂದು ಹೇಳ್ತಿದ್ದಾರೆ, ಆದರೆ ಇದು ನಿಜ ಅಲ್ಲ. ನಾನು ನನ್ನ ಜನರನ್ನು ಕತ್ತಲೆಯಲ್ಲಿಡೋದಕ್ಕೆ ಇಷ್ಟ ಪಡೋದಿಲ್ಲ. ಅದಕ್ಕೆ ಈ ಸ್ಪಷ್ಟನೆಯನ್ನು ನೋಡ್ತಿದ್ದೇನೆ. ನಾನು ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗಿಲ್ಲ, ಯಾವುದೇ ಪಾರ್ಟಿಯಲ್ಲೂ ನಾನು ಇಲ್ಲ. ನೀವು ನನ್ನನ್ನು ಯಾವುದೇ ಪಕ್ಷದ ಕಚೇರಿ ಅಥವಾ ಅಭ್ಯರ್ಥಿ, ಪಕ್ಷದ ಪರ ಪ್ರಚಾರ ಮಾಡೋದನ್ನು ನೋಡಿಲ್ಲ. ನಾನು ಜನರ ನಡುವೆ ಇದ್ದೇನೆ ಅಷ್ಟೇ. ನಾನು ಪಕ್ಷಕ್ಕೆ ಸೇರ್ಪಡೆಯಾಗಲು ಹಲವು ಕಡೆಯಿಂದ ಪ್ರಯತ್ನ ಮಾಡಿದ್ದೆ, ಸದ್ಯಕ್ಕೆ ನಾನು ಯಾವುದೇ ಪಕ್ಷದಲ್ಲೂ ಇಲ್ಲ. ನಿಮಗೆ ಹಲವು ಪ್ರಶ್ನೆಗಳು ನನ್ನನ್ನು ಕೇಳಬೇಕು ಅನಿಸಬಹುದು ಅದೇ ರೀತಿ ನನ್ನ ಬಳಿಯೂ ಸಾವಿರಾರು ಪ್ರಶ್ನೆಗಳಿವೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ, ನಿಮ್ಮ ಕಾಳಜಿಗೆ ನಾನು ಸದಾ ಅಭಾರಿಯಾಗಿರುತ್ತೇನೆ ಎಂದು ನಿಶಾ ಹೇಳಿದ್ದರು.
ಇಷ್ಟಾದ ಮೇಲೂ ಇದೀಗ ನಿಶಾ ಅವರು ಮತ್ತೆ ಇಂದು ದಿಢೀರ್ ಕೆಪಿಸಿಸಿ ಕಚೇರಿ ಬಳಿ ಬಂದು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಡಿಕೆ ಶಿವಕುಮಾರ್ ಮುಂದೆ ಕಣ್ಣೀರು ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:31 pm, Mon, 8 April 24