ಸೊಂಟದಲ್ಲಿ ಪಿಸ್ತೂಲ್ ಇಟ್ಕೊಂಡು ಬಂದು ಸಿಎಂಗೆ ಹಾರ ಹಾಕಿದ ವ್ಯಕ್ತಿ ಯಾರು? ಪತ್ತೆ ಹಚ್ಚಿದ ಪೊಲೀಸ್ರು ಹೇಳಿದ್ದೇನು?
ವ್ಯಕ್ತಿಯೋರ್ವ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೂವಿನ ಹಾರ ಹಾಕಿ ತೆರಳಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಾರ ಹಾಕುವಾಗ ಸೊಂಟದಲ್ಲಿ ಪಿಸ್ತೂಲ್ ಇರುವುದು ಕಂಡುಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಇನ್ನು ಗನ್ನೊಂದಿಗೆ ಬಂದು ಸಿಎಂಗೆ ಹಾರ ಹಾಕಿದ್ಯಾರು? ಪೊಲೀಸರು ಹೇಳಿದ್ದೇನು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಏಪ್ರಿಲ್ 08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಏಪ್ರಿಲ್ 08) ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಭರ್ಜರಿ ಪ್ರಚಾರ ಮಾಡಿದರು. ಈ ವೇಳೆ ವ್ಯಕ್ತಿಯೋರ್ವ ಗನ್ ಇಟ್ಟುಕೊಂಡು ಬಂದು ಸಿದ್ದರಾಮಯ್ಯಗೆ ಹೂವಿನ ಹಾರ ಹಾಕಿ ತೆರಳಿದ್ದಾನೆ. ಕ್ಯಾಂಪೇನ್ ವಾಹನ ಏರಿ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ್ದು, ಈ ವೇಳೆ ವ್ಯಕ್ತಿ ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡಿರುವುದು ಕಂಡುಬಂದಿದೆ. ಇದರಿಂದ ಪೊಲೀಸರ ಭದ್ರತಾ ಲೋಪ ಎಂದು ಹೇಳಲಾಗುತ್ತಿದೆ. ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆಯೇ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸದ್ಯ ಗನ್ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗನ್ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ್ದು ರಿಯಾಜ್ ಎಂದು ಗೊತ್ತಾಗಿದ್ದು, ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಜೀವಭಯವಿದೆ ಎಂದು ರಿಯಾಜ್ ಅರ್ಜಿ ನೀಡಿ ಗನ್ ಪಡೆದುಕೊಂಡಿದ್ದ. ಅಲ್ಲದೇ ಎಲೆಕ್ಷನ್ ಟೈಮಲ್ಲಿ ಗನ್ ಸರೆಂಡರ್ ಮಾಡದಿರಲು ಸಹ ಅನುಮತಿ ಪಡೆದಿದ್ದ. ಆದ್ರೆ ಸಿಎಂ ಬಳಿ ಹೋಗುವಾಗ ಗನ್ ತೆಗೆದುಕೊಂಡು ಹೋಗಬಾರದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ರಿಯಾಜ್ನನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಕರೆಯಿಸಿಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಹ ಸಿದ್ದಾಪುರ ಠಾಣೆ ಎನ್.ಸತೀಶ್ ಭೇಟಿ ನೀಡಿ ರಿಯಾಜ್ನನ್ನು ಗನ್ ಇಟ್ಟುಕೊಂಡು ಸಿಎಂ ಬಳಿಗೆ ಹೋಗಿದ್ಯಾಕೆ ಎಂಬ ಆಯಾಮದಲ್ಲಿ ವಿಚಾರಣೆ ನಡೆಸಿದ್ದಾರೆ. ನಂತರ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಸಹ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಗನ್ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ ಅನಾಮಿಕ, ಆತಂಕ ಮೂಡಿಸಿದ ವ್ಯಕ್ತಿ!
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹೇಳಿದ್ದೇನು?
ರಿಯಾಜ್ ಗನ್ ಪ್ರಕರಣದ ಮಾಹಿತಿ ಪಡೆದ ಬಳಿಕ ಠಾಣೆಯಿಂದ ಹೋಗುವಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಘಟನೆ ಸಂಬಂಧ ರಿಯಾಜ್ ಎಂಬಾತನನ್ನು ವಿಚಾರಣೆ ನಡೆಸುತ್ತಿದ್ದೇವೆ. ಈ ಹಿಂದೆ ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ದೂರು ನೀಡಿದ್ದ. ಅಲ್ಲದೇ ತನಗೆ ಜೀವಬೆದರಿಕೆ ಇದೆ, ಹಾಗಾಗಿ ಗನ್ ಇಟ್ಟುಕೊಳ್ಳಲು ಮನವಿ ಮಾಡಿದ್ದ. ಚುನಾವಣೆ ಸಂದರ್ಭದಲ್ಲೂ ಜೀವಭಯವಿದೆ ಎಂದು ಉಲ್ಲೇಖಿಸಿ ಪೊಲೀಸರ ಬಳಿ ಅನುಮತಿ ಪಡೆದುಕೊಂಡಿದ್ದಾನೆ. ಆದ್ರೆ, ಈಗ ಗನ್ ಇಟ್ಟುಕೊಂಡು ಸಿಎಂ ಬಳಿ ಹೋದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:53 pm, Mon, 8 April 24