AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮುಂದುವರಿದ ತಾಪಮಾನ: ವೇತನ ಸಹಿತ ಅರ್ಧ ದಿನ ರಜೆಗೆ ಪೌರಕಾರ್ಮಿಕರ ಆಗ್ರಹ

ಬೆಂಗಳೂರಿನಲ್ಲಿ ಹೆಚ್ಚಿರುವ ಉಷ್ಣಾಂಶ ಹಾಗೂ ಬಿಸಿಗಾಳಿ ಪೌರಕಾರ್ಮಿಕರನ್ನು ಬಸವಳಿಯುವಂತೆ ಮಾಡಿದೆ. ಹೆಚ್ಚುತ್ತಿರುವ ಬಿಸಿಲಿನ ಝಳದಿಂದ ಕಂಗಾಲಾಗಿರುವ ಪೌರಕಾರ್ಮಿಕರು, ಬೇಸಗೆಯ ಉಳಿದ ಅವಧಿಗೆ ವೇತನ ಸಹಿತ ಅರ್ಧ ದಿನ ರಜೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮುಂದುವರಿದ ತಾಪಮಾನ: ವೇತನ ಸಹಿತ ಅರ್ಧ ದಿನ ರಜೆಗೆ ಪೌರಕಾರ್ಮಿಕರ ಆಗ್ರಹ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Apr 09, 2024 | 10:31 AM

Share

ಬೆಂಗಳೂರು, ಏಪ್ರಿಲ್ 9: ಬೆಂಗಳೂರು ನಗರದಲ್ಲಿ ತಾಪಮಾನ (Bangalore Temperature) ಹೆಚ್ಚಳ ಪರಿಸ್ಥಿತಿ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಹೀಗಾಗಿ ಸಂಭಾವ್ಯ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ವೇತನ ಕಡಿತ ಮಾಡದೆ ಅರ್ಧ ದಿನ ರಜೆ ನೀಡಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟವು (AICCTU) ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಪತ್ರ ಬರೆದಿದೆ. ಪೌರಕಾರ್ಮಿಕರಿಗೆ ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳಲು ಹೆಚ್ಚುವರಿ ವಿರಾಮದೊಂದಿಗೆ ಕುಡಿಯುವ ನೀರು, ಒಆರ್‌ಎಸ್ ಮತ್ತು ಮಜ್ಜಿಗೆ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಶುದ್ಧ ನೀರು ಮತ್ತು ನೈರ್ಮಲ್ಯದ ಶೌಚಾಲಯಗಳಿಂದ ವಂಚಿತರಾಗಿರುವ ಪೌರಕಾರ್ಮಿಕರು ಶಾಖ-ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಕೆಲವು ವಾರಗಳಿಂದ ತೀವ್ರತರವಾದ ಶಾಖದಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ದಣಿವಾಗುತ್ತಿದೆ. ಕೆಲವರಿಗೆ ಕೆಲಸದ ವೇಳೆ ಆಯಾಸ, ತಲೆತಿರುಗುವಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಬೇಸಗೆಯ ಮಟ್ಟಿಗೆ ಕೆಲಸದ ಅವಧಿ ಕಡಿಮೆ ಮಾಡಿ ವಿರಾಮ ನೀಡುವ ಅಗತ್ಯವಿದೆ ಎಂದು ಹಲವು ಮಂದಿ ಪೌರಕಾರ್ಮಿಕರು ಅಭಿಪ್ರಾಯಪಟ್ಟಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಪೌರಕಾರ್ಮಿಕರು ಬೆಳಿಗ್ಗೆ 6 ಗಂಟೆಗೆ ಕೆಲಸ ಪ್ರಾರಂಭಿಸುತ್ತಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಇದನ್ನು ಮಧ್ಯಾಹ್ನ 2.30 ರವರೆಗೆ ವಿಸ್ತರಿಸಲಾಗುತ್ತದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಧ್ಯಾಹ್ನ 11ರಿಂದ 3 ಗಂಟೆಯ ಅವಧಿಯಲ್ಲಿ ಮನೆಯೊಳಗೆ ಇರಲು ಸೂಚನೆ ನೀಡಿರುವುದನ್ನು ಉಲ್ಲೇಖಿಸಿ, ಕೆಲಸದ ಸಮಯವನ್ನು ಬೆಳಿಗ್ಗೆ 11 ಕ್ಕೆ ಕಡಿತಗೊಳಿಸಬೇಕೆಂದು ಒಕ್ಕೂಟ ಮನವಿ ಮಾಡಿದೆ.

ವಿಪತ್ತು ಪ್ರಾಧಿಕಾರದ ಸುತ್ತೋಲೆಯಲ್ಲಿ ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವಂತೆ ಸಲಹೆ ನೀಡಲಾಗಿದೆ. ಆದರೆ, ಸದ್ಯ ಪೌರಕಾರ್ಮಿಕರಿಗೆ ನೀಡಲಾದ ಸಮವಸ್ತ್ರದ ಬಟ್ಟೆಯು ಹೆಚ್ಚಿನ ತಾಪಮಾನಕ್ಕೆ ಸೂಕ್ತವಲ್ಲ ಎಂಬ ಕಾರ್ಮಿಕರೊಬ್ಬರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಇಂದು ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ 9 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕಳೆದ ವರ್ಷ ಬೇಸಗೆಯಲ್ಲಿ ರಾಜ್ಯ ಸರ್ಕಾರವು ಪೌರಕಾರ್ಮಿಕರಿಗೆ ವೇತನ ಸಹಿತ ಅರ್ಧ ದಿನದ ಕೆಲಸ ಘೋಷಣೆ ಮಾಡಿತ್ತು. ಈ ಬಾರಿಯೂ ಹೆಚ್ಚಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಅದೇ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಿದ್ದೇವೆ ಎಂದು ಎಐಸಿಸಿಟಿಯು ಸದಸ್ಯೆ ನಿರ್ಮಲಾ ಎಂ ತಿಳಿಸಿದ್ದಾರೆ.

2-3 ದಿನಗಳಲ್ಲಿ ಉಷ್ಣಗಾಳಿ

ಬೆಂಗಳೂರು ನಗರದಲ್ಲಿ ಸೋಮವಾರ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇಂದು ಕೂಡ 37 ರಿಂದ 38 ಸೆಲ್ಸಿಯಸ್ ಒಳಗೆ ಗರಿಷ್ಠ ಉಷ್ಣಾಂಶ ಇರಲಿದೆ. ಕನಿಷ್ಠ ಉಷ್ಣಾಂಶ 23 ರಿಂದ 24 ದಾಖಲಾಗುವ ಸಾಧ್ಯತೆ ಇದೆ. ಮುಂದಿನ ಎರಡ್ಮೂರು ದಿನಗಳಲ್ಲಿ ರಾಜ್ಯದಲ್ಲಿ ಉಷ್ಣ ಅಲೆ ಮುಂದು ವರೆಯಲಿದೆ. ಬೆಂಗಳೂರಿನಲ್ಲಿ ಬಿಸಿ ಮತ್ತು ಆರ್ದ್ರ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಉಷ್ಣ ಅಲೆ ಪ್ರದೇಶಗಳಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ