ಈ ಅಮೃತ ಗಳಿಗೆಗಾಗಿ 5 ಶತಮಾನದಿಂದ ಕಾಯುತ್ತಿದ್ದೆವು: ಕೆಂಪೇಗೌಡ ಥೀಮ್​ ಪಾರ್ಕ್​ಗೆ ನಮ್ಮ ಸಹಕಾರವಿದೆ ಎಂದ ನಿರ್ಮಲಾನಂದನಾಥ ಸ್ವಾಮೀಜಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 21, 2022 | 2:54 PM

ನ 11ರಂದು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.

ಈ ಅಮೃತ ಗಳಿಗೆಗಾಗಿ 5 ಶತಮಾನದಿಂದ ಕಾಯುತ್ತಿದ್ದೆವು: ಕೆಂಪೇಗೌಡ ಥೀಮ್​ ಪಾರ್ಕ್​ಗೆ ನಮ್ಮ ಸಹಕಾರವಿದೆ ಎಂದ ನಿರ್ಮಲಾನಂದನಾಥ ಸ್ವಾಮೀಜಿ
ವಿಧಾನಸೌಧದ ಎದುರು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
Follow us on

ಬೆಂಗಳೂರು: ಕಳೆದ ಐದು ಶತಮಾನಗಳಿಂದ ಇಂಥ ಅಮೃತಗಳಿಗೆಗಾಗಿ ಕಾಯುತ್ತಿದ್ದೆವು. ಏರ್​​ಪೋರ್ಟ್​​ನಲ್ಲಿ ಥೀಮ್ ಪಾರ್ಕ್ (Kempegowda Theme Park) ನಿರ್ಮಾಣ ಆಗುತ್ತಿದೆ. ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣವೂ ನಡೆಯಲಿದೆ. ಇದು ಉತ್ತಮ ಬೆಳವಣಿಗೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಹೇಳಿದರು. ವಿಧಾನಸೌಧದ ಎದುರು ನಡೆದ ‘ಮೃತ್ತಿಕೆ ಸಂಗ್ರಹ’ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸೌಧದ ಆವರಣದಲ್ಲಿ ಅನೇಕರ ಪ್ರತಿಮೆ ಇದೆ. ಇಲ್ಲಿ ಕೆಂಪೇಗೌಡರ ಪ್ರತಿಮೆಯೂ ಅನಾವರಣ ಆಗಲಿ. ಕೆಂಪೇಗೌಡರ 108 ಅಡಿ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವ ಸರ್ಕಾರವನ್ನು ನಾವು ಅಭಿನಂದಿಸುತ್ತೇವೆ ಎಂದರು.

ಬೆಂಗಳೂರಿನ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನೀಡಿದ್ದ ಹೇಳಿಕೆಯನ್ನು ನೆನಪಿಸಿಕೊಂಡ ಅವರು, ಬೆಂಗಳೂರನ್ನು ಅಮೆರಿಕ ಅಧ್ಯಕ್ಷ ಒಬಾಮಾ ಸಹ ಹಾಡಿ ಹೊಗಳಿದ್ದರು. ಬೆಂಗಳೂರು ನೋಡಿ ಕಲಿತುಕೊಂಡು ಬನ್ನಿ ಎಂದಿದ್ದರು. ಕೊಲಂಬಸ್ ಹೊಸ ಜಾಗ ಹುಡುಕಿಕೊಂಡು ಹತ್ಯೆಗಳನ್ನು ಮಾಡುತ್ತಿದ್ದ ಆದೆ ನಮ್ಮ ಕೆಂಪೇಗೌಡರು ನಾಡು ಕಟ್ಟುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ನ 11ರಂದು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಕೆಲವರು ಕೆಂಪೇಗೌಡರ ಬಗ್ಗೆ‌ ಹಗುರವಾಗಿ ಮಾತನಾಡುತ್ತಾರೆ. ಅವರೇನು ಚಕ್ರವರ್ತಿನಾ? ಅವರಿಗ್ಯಾಕೆ ಅಷ್ಟು ಮಹತ್ವ ಎಂದೆಲ್ಲಾ ಪ್ರಶ್ನಿಸುತ್ತಾರೆ. ಕೆಂಪೇಗೌಡರ ಅಧೀನದಲ್ಲಿದ್ದ ಭೂಪ್ರದೇಶ ಎಷ್ಟು ದೊಡ್ಡದಾಗಿತ್ತು ಎನ್ನುವುದು ಮುಖ್ಯವಲ್ಲ. ಅವರು ಎಂಥ ಕೆಲಸ ಮಾಡಿದ್ದರು ಎನ್ನುವುದು ಮುಖ್ಯ. ಬೆಂಗಳೂರು ಸೃಷ್ಟಿಯಾಗಿರುವುದು ಕೆಂಪೇಗೌಡರಿಂದ. ಹಲವು ಸರ್ಕಾರಗಳು ಬಂದು ಹೋದರೂ ಅವರಿಗೆ ಸಿಗಬೇಕಾದಷ್ಟು ಗೌರವ ಸಿಕ್ಕಿಲ್ಲ. ಆದರೆ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕೆಂಪೇಗೌಡರಿಗೆ ಗೌರವ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಕೆಂಪೇಗೌಡರ ಆಶೀರ್ವಾದದಿಂದ ಈ ನೀರು, ಈ ನೆಲ ಸಿಕ್ಕಿದೆ. ಕೆಂಪೇಗೌಡರಿಂದ ಬೆಂಗಳೂರು ಸೃಷ್ಟಿಯಾಗಿದೆ. ಪ್ರತಿಯೊಬ್ಬರೂ ಅವರಿಗೆ ನಮನ ಸಲ್ಲಿಸಲೇಬೇಕು. 75 ವರ್ಷ ಇಂತಹ ಕಾರ್ಯಕ್ರಮ ಯಾಕೆ ಮಾಡಲಿಲ್ಲ? ಏಕೆ ಅವರ ಒಂದೂ ಪ್ರತಿಮೆ ಅನಾವರಣಗೊಳಿಸಿಲ್ಲ? ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರಿಬ್ಬರಿಗೂ ಒಕ್ಕಲಿಗ ಸಮುದಾಯದ ವತಿಯಿಂದ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜ್ಯೋತಿ ಬೆಳಗಿ, ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಡಾ ಅಶ್ವತ್ಥ ನಾರಾಯಣ, ಡಾ ಸುಧಾಕರ, ಗೋಪಾಲಯ್ಯ, ಭೈರತಿ ಬಸವರಾಜ್, ಮುನಿರತ್ನ, ನಾರಾಯಣ ಗೌಡ, ಸುನೀಲ್ ಕುಮಾರ್, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಎಸ್.ಮುನಿಸ್ವಾಮಿ, ಲೇಹರ್ ಸಿಂಗ್, ಶಾಸಕರಾದ ಸುರೇಶ್ ಕುಮಾರ್, ಸಿ.ಪಿ.ಯೋಗೇಶ್ವರ್, ವೈ.ಎ.ನಾರಾಯಣಸ್ವಾಮಿ, ಗೋಪಿನಾಥ್ ರೆಡ್ಡಿ, ಎಂ.ಕೃಷ್ಣಪ್ಪ, ಪ್ರತಾಪಸಿಂಹ ನಾಯಕ್, ರವಿಸುಬ್ರಮಣ್ಯ, ಎ.ದೇವೇಗೌಡ ಉಪಸ್ಥಿತರಿದ್ದರು.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆಗೆ ಪ್ಲಾನ್

ನ 11ರಂದು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಪ್ರತಿಮೆ ಲೋಕಾರ್ಪಣೆ ಬಳಿಕ ಭಾಷಣ ಮಾಡಲಿರುವ ಮೋದಿ ಕರ್ನಾಟಕಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಬಲ ತುಂಬಲು ಈ ಕಾರ್ಯಕ್ರಮವನ್ನು ಬಿಜೆಪಿ ಬಳಸಿಕೊಳ್ಳಲಿದೆ. ಸಮಾವೇಶಕ್ಕೆ ಕನಿಷ್ಠ 3 ಲಕ್ಷ ಜನರನ್ನು ಸೇರಿಸಬೇಕು ಎಂದು ಬಿಜೆಪಿ ಆಶಯ ಇರಿಸಿಕೊಂಡಿದೆ. ಬೆಂಗಳೂರು ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಭೆಗೆ ಜನರನ್ನು ಕರೆತರಬೇಕು ಎಂದುಕೊಂಡಿರುವ ಬಿಜೆಪಿ ಈಗಾಗಲೇ ಪೂರ್ವಸಿದ್ಧತಾ ಸಭೆಗಳನ್ನು ನಡೆಸಿದೆ. ಕೆಂಪೇಗೌಡ ಥೀಮ್ ಪಾರ್ಕ್​ಗಾಗಿ ಪಾರಂಪರಿಕ ಮತ್ತು ಪವಿತ್ರ ಸ್ಥಳಗಳಿಂದ ಮಣ್ಣು ಸಂಗ್ರಹ ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಹಿಂದೂ, ಒಕ್ಕಲಿಗ ಮತಬ್ಯಾಂಕ್​​ ಗಟ್ಟಿಗೊಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಮೂಲಕ ಒಕ್ಕಲಿಗ ಮತ ಬ್ಯಾಂಕ್ ಸೆಳೆಯಲು ಬಿಜೆಪಿ ಚಿಂತನೆ ನಡೆಸಿದೆ.