ಬೆಂಗಳೂರು: ರೈತ ಸಂಘ ಮತ್ತು ಹಸಿರು ಸೇನೆಯ ನಿಕಟಪೂರ್ವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekhar) ಅವರನ್ನು ಆಮ್ ಆದ್ಮಿ ಪಕ್ಷಕ್ಕೆ (Aam Aadmi Party – AAP) ಸೇರ್ಪಡೆ ಮಾಡಿಕೊಂಡ ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರ ನಡೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಘಟಕದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಇತ್ತೀಚೆಗಷ್ಟೇ ಅರವಿಂದ್ ಕೇಜ್ರಿವಾಲ್ ಆಪ್ಗೆ ಸೇರಿಸಿಕೊಂಡಿದ್ದರು. ಆದರೆ ಈ ವಾರ ಅದೇ ರೈತ ಸಂಘಟನೆಯು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹೊರಗೆ ಹಾಕಿದೆ. 2021ರಲ್ಲಿ ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ನೌಕರರ ಮುಷ್ಕರವನ್ನು ಕೊನೆಗೊಳಿಸಲು ಕೋಡಿಹಳ್ಳಿ ಚಂದ್ರಶೇಖರ್ ₹ 35 ಕೋಟಿ ಬೇಡಿಕೆ ಇರಿಸಿದ್ದರು ಎಂಬುದು ಟಿವಿ ವಾಹಿನಿಯೊಂದರ ಸ್ಟಿಂಗ್ ಆಪರೇಷನ್ ವೇಳೆ ಬೆಳಕಿಗೆ ಬಂದಿತ್ತು. ಕೋಡಿಹಳ್ಳಿ ಅವರ ಪ್ರಾಮಾಣಿಕತೆಯ ಬಗ್ಗೆ ಯಾರೇ ಪ್ರಮಾಣ ಪತ್ರ ನೀಡುವುದೂ ಒಂದು ತಮಾಷೆಯಾಗುತ್ತದೆ ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ.
Recently in Karnataka, Arvind Kejriwal inducted Kodihalli Chandrashekhar in AAP.
This week, farmer’s union expelled the same Chandrashekhar, after a TV sting showed him demanding 35 crore to end KSRTC employees’ strike, he led in 2021.
Kejriwal’s honesty certificate is a joke! pic.twitter.com/oQwe7UdwoH
— Amit Malviya (@amitmalviya) June 2, 2022
ಕೋಡಿಹಳ್ಳಿ ಚಂದ್ರಶೇಖರ್ ವಜಾ
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಇತ್ತೀಚೆಗೆ ತುರ್ತು ಸಭೆ ನಡೆಸಿದ್ದ ರೈತ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾ ಮಾಡಲು ಒಮ್ಮತದ ನಿರ್ಧಾರ ತೆಗೆದುಕೊಂಡರು. ಬಳಿಕ ಎಚ್.ಆರ್.ಬಸವರಾಜಪ್ಪ ಅವರನ್ನು ನೂತನ ಅಧ್ಯಕ್ಷರಾಗಿ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ನೂತನ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ‘ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಮೂಲ ಸ್ಥಾಪಕರಾದ ಎಚ್.ಎಸ್.ರುದ್ರಪ್ಪ, ಡಾ.ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಎನ್.ಡಿ. ಸುಂದರೇಶ್, ಪ್ರೊ.ನಂಜುಂಡಸ್ವಾಮಿ ಅವರ ತತ್ವ-ಸಿದ್ಧಾಂತ, ಆಶಯಗಳನ್ನು ಅನುಸರಿಸಿ, ಸಂಘಟನೆಯನ್ನು ಮುನ್ನಡೆಸಲಾಗುವುದು’ ಎಂದು ಹೇಳಿದರು.
‘ಆರೋಪದ ಬಗ್ಗೆ ಸತ್ಯಶೋಧನಾ ಸಮಿತಿ ತನಿಖೆ ನಡೆಸಲಿದೆ. ಭ್ರಷ್ಟಾಚಾರದ ಆರೋಪ ಸಾಬೀತಾದರೆ ಸಂಘಟನೆಯಿಂದಲೇ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಉಚ್ಚಾಟಿಸಲಾಗುವುದು. ಹಿಂದೆ ರಾಜಕಾರಣಿಗಳು ತಮ್ಮ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಕೋಡಿಹಳ್ಳಿ ಸಹ ಆರೋಪ ಕೇಳಿ ಬಂದಾಗ ರಾಜೀನಾಮೆ ಕೊಡಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ