ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ಇತ್ತೀಚೆಗೆ ಕಾರ್ಯಾರಂಭ ಮಾಡಿದ್ದು, ಕೆಲವು ವಿಮಾನಯಾನ ಸಂಸ್ಥೆಗಳು ಟರ್ಮಿನಲ್ 2 ಮೂಲಕ ಸೇವೆ ನೀಡುತ್ತಿವೆ. ಪ್ರಸ್ತುತ ಏರ್ ಏಷ್ಯಾ, ಸ್ಟಾರ್ ಏರ್ವೇಸ್, ವಿಸ್ತಾರ (Vistara) ವಿಮಾನಯಾನ ಸಂಸ್ಥೆಗಳು ಟರ್ಮಿನಲ್ 2 ಮೂಲಕ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. 2023ರ ಜನವರಿ 15ರಂದು ಸ್ಟಾರ್ ಏರ್ವೇಸ್ ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ತೆರಳುವ ಮೂಲಕ ಟರ್ಮಿನಲ್ 2ರಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ಆದರೆ, ಟರ್ಮಿನಲ್ 2 ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡುವುದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಸಂದೇಶದಲ್ಲೇ (ಕನ್ನಡ) ತಪ್ಪು ಮಾಹಿತಿ ನೀಡಲಾಗಿದೆ.
ವಿಮಾನ ವೇಳಾಪಟ್ಟಿಯ ಬಗ್ಗೆ ತಿಳಿಯಲು ಭೇಟಿ ನೀಡಬೇಕಾಗಿರುವ ವೆಬ್ಸೈಟ್ ಲಿಂಕ್ ಅನ್ನು ವಿಮಾನ ನಿಲ್ದಾಣ ಆಡಳಿತ ಟ್ವೀಟ್ ಮಾಡಿದೆ. ಜತೆಗೆ ಸಹಾಯವಾಣಿ ಸಂಖ್ಯೆಗಳನ್ನೂ (080 -22012001/66785555 ಅಥವಾ ವಾಟ್ಸ್ಆ್ಯಪ್ ಮೂಲಕ ಚಾಟ್ ಮಾಡಲು – 8884998888) ನೀಡಿದೆ. ಜತೆಗೆ ಸಂದೇಶವೊಂದನ್ನು ಲಗತ್ತಿಸಲಾಗಿದ್ದು, ‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈಗ ಎರಡು ಟರ್ಮಿನಲ್ಗಳಿವೆ. ದಯವಿಟ್ಟು ನಿಮ್ಮ ಏರ್ಲೈನ್ ಟಿಕೆಟ್ ಅಥವಾ ಬೋರ್ಡಿಂಗ್ ಪಾಸ್ನಲ್ಲಿ ಟರ್ಮಿನಲ್ ಸಂಖ್ಯೆಯನ್ನು (ಟಿ1 ಅಥವಾ ಟಿ1) ತಪ್ಪದೇ ಪರಿಶೀಲಿಸಿ’ ಎಂದು ಉಲ್ಲೇಖಿಸಲಾಗಿದೆ. ಇಂಗ್ಲಿಷ್ನಲ್ಲಿ ನೀಡಿರುವ ಸಂದೇಶದಲ್ಲಿ (T1 or T2) ಎಂದು ಸರಿಯಾಗಿಯೇ ನಮೂದಿಸಲಾಗಿದೆ. ಆದರೆ, ಕನ್ನಡದ ಸಂದೇಶದಲ್ಲಿ ಟಿ1 ಅಥವಾ ಟಿ1 ಎಂದು ಉಲ್ಲೇಖಿಸಲಾಗಿದೆ. ನಿಜವಾಗಿ ಇದು ಟಿ2 ಆಗಬೇಕಿತ್ತು.
To know more about your flight schedule visit https://t.co/wbHvF4fpry
Call us for assistance at 080 -22012001/66785555 or chat with us on WhatsApp – 8884998888 #BLRAirport #MakeYourTravelSmooth pic.twitter.com/JiZN15LpJe
— BLR Airport (@BLRAirport) March 22, 2023
ಟ್ವೀಟ್ ಮೂಲಕ ವಿಮಾನ ನಿಲ್ದಾಣ ಆಡಳಿತ ನೀಡಿರುವ ವೆಬ್ಸೈಟ್ಗೆ (https://www.bengaluruairport.com/travellers/flights/flight-information) ಭೇಟಿ ನೀಡಿ. ಅದರ ಮೇಲ್ಭಾಗದ ಎಡ ಬದಿಯ ಕಾರ್ನರ್ನಲ್ಲಿ ‘ಫ್ಲೈಟ್ಸ್’ ಎಂಬ ಆಯ್ಕೆ ಇದೆ. ಅದರ ಮೇಲೆ ಕರ್ಸರ್ ಇಟ್ಟಾಗ ‘ಏರ್ಲೈನ್ ಇನ್ಫಾರ್ಮೇಶನ್’ ಹಾಗೂ ‘ಫ್ಲೈಟ್ ಇನ್ಫಾರ್ಮೇಶನ್’ ಎಂಬ ಆಯ್ಕೆಗಳಿವೆ. ಈ ಪೈಕಿ ಇಟ್ಟಾಗ ‘ಏರ್ಲೈನ್ ಇನ್ಫಾರ್ಮೇಶನ್’ ಕ್ಲಿಕ್ ಮಾಡಿ. ಆಗ ವಿಮಾನದ ವೇಳಾಪಟ್ಟಿ ಕಾಣಿಸಿಕೊಳ್ಳುತ್ತದೆ. ಉಳಿದಂತೆ ವಿವಿಧ ಸೇವೆಗಳ ಮಾಹಿತಿ ಪಡೆಯುವ ಆಯ್ಕೆಗಳೂ ಈ ವೆಬ್ಸೈಟ್ನಲ್ಲಿವೆ.
2022ರ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟರ್ಮಿನಲ್ 2 ಅನ್ನು ಲೋಕಾರ್ಪಣೆಗೊಳಿಸಿದ್ದರು. ಭಾರತದ ಉದ್ಯಾನ ನಗರವಾಗಿ ಬೆಂಗಳೂರನ್ನು ಪ್ರದರ್ಶಿಸುವ ಥೀಮ್ನೊಂದಿಗೆ ಟರ್ಮಿನಲ್ 2 ಅನ್ನು ನಿರ್ಮಿಸಲಾಗಿದೆ. ಇತ್ತೀಚೆಗಷ್ಟೇ ಟರ್ಮಿನಲ್ 2 ಮೂಲಕ ವಿಸ್ತಾರ ಸೇವೆ ಆರಂಭಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ