
ಬೆಂಗಳೂರು, ಜನವರಿ 13: ಜೆ.ಪಿ. ನಗರ, ಹೊಸಕೆರೆಹಳ್ಳಿ, ನಾಗರಭಾವಿ ಜನರಿಗೆ ಬಿಎಂಆರ್ಸಿಎಲ್ ಗುಡ್ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಬಹು ನಿರೀಕ್ಷಿತ ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಲಾಗಿದ್ದು, ಜೆ.ಪಿ. ನಗರ 4ನೇ ಹಂತದಿಂದ ನಾಗರಭಾವಿವರೆಗಿನ ಕಾಮಗಾರಿಯನ್ನು ಇದು ಒಳಗೊಂಡಿದೆ. ಫೆಬ್ರವರಿ 20ರಿಂದ 25ರೊಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದ್ದು, ಮೂರು ಪ್ಯಾಕೇಜ್ನಲ್ಲಿ BMRCL ಸಿವಿಲ್ ಟೆಂಡರ್ ಕರೆದಿದೆ. ಮೂರು ಪ್ಯಾಜೇಜ್ಗಳಿಗೂ ಪ್ರತ್ಯೇಕ ಬಜೆಟ್ ನೀಡಲಾಗಿದೆ.
ಪ್ಯಾಕೇಜ್ 1 ಜೆ.ಪಿ ನಗರ 4ನೇ ಹಂತದಿಂದ ಕಾಮಾಕ್ಯವರೆಗೆ ಡಬಲ್ ಡೆಕ್ಕರ್ ಹಾಗೂ ಡಾಲರ್ಸ್ ಕಾಲೋನಿ ಫ್ಲೈಓವರ್ ತೆರವು ಒಳಗೊಂಡು ಒಟ್ಟು ಜೆ.ಪಿ. ನಗರ 5ನೇ ಹಂತ, ಜೆ.ಪಿ. ನಗರ, ಕಾದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್ ನಿಲ್ದಾಣಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ನ ಮೊತ್ತ 1,375 ಕೋಟಿ ರೂಪಾಯಿಗಳು. ಹೊಸಕೆರಹಳ್ಳಿಯಿಂದ ನಾಗರಭಾವಿ ಸರ್ಕಲ್‌ವರೆಗೆ ಡಬಲ್ ಡೆಕ್ಕರ್ನ ಪ್ಯಾಕೇಜ್ 2 ಒಳಗೊಂಡಿದೆ. 1,396 ಕೋಟಿ ಮೊತ್ತದ ಈ ಪ್ಯಾಕೇಜ್ ಹೊಸಕೆರಹಳ್ಳಿ, ದ್ವಾರಕಾನಗರ, ಮೈಸೂರು ರಸ್ತೆ ಮತ್ತು ನಾಗರಭಾವಿ ಸರ್ಕಲ್ ನಿಲ್ದಾಣಗಳು ಸೇರಿವೆ.
ಇದನ್ನೂ ಓದಿ: ಆರೆಂಜ್ ಲೈನ್ಗಾಗಿ 6500 ಮರ ಕಡಿಯಲು ಮುಂದಾದ ನಮ್ಮ ಮೆಟ್ರೋ; ಪರಿಸರ ಹೋರಾಟಗಾರರ ಜತೆ ಅಧಿಕಾರಿಗಳ ಸಭೆ
ಪ್ಯಾಕೇಜ್ 3ರ ಕಾರಿಡಾರ್ 1 ವಿನಾಯಕ ಲೇಔಟ್‌ನಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ವರೆಗೆ ಒಟ್ಟು 3 ನಿಲ್ದಾಣಗಳನ್ನು ಒಳಗೊಂಡಿದೆ. ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, BDA ಕಾಂಪ್ಲೆಕ್ಸ್ ನಾಗರಭಾವಿ ನಿಲ್ದಾಣ ಇದರಲ್ಲಿ ಸೇರಿವೆ. ಹಾಗೆಯೇ ಪ್ಯಾಕೇಜ್ 3ರ ಕಾರಿಡಾರ್ 2 ಸುಂಕದಕಟ್ಟೆ ನಿಲ್ದಾಣ , ಸುಂಕದಕಟ್ಟೆ ಡಿಪೋ ಪ್ರವೇಶ ಮಾರ್ಗ ಮತ್ತು ನಿರ್ಗಮನ ಮಾರ್ಗ ಒಳಗೊಂಡಿದ್ದು, ಇದರ ಒಟ್ಟು ಮೊತ್ತ 1415 ಕೋಟಿ ರೂಪಾಯಿಗಳಾಗಿವೆ.
ನಮ್ಮ ಮೆಟ್ರೋದ ಮೂರನೇ ಹಂತದ ಪ್ರಾಜೆಕ್ಟ್ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರೂ ಯೋಜನೆ ಮಾತ್ರ ಇನ್ನೂ ಆರಂಭವಾಗಿರಲಿಲ್ಲ. 2024ರ ಆಗಸ್ಟ್ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇನ್ನೂ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿಲ್ಲ ಎಂಬ ಬೇಸರ ಸಿಲಿಕಾನ್ ಸಿಟಿ ಮಂದಿಯನ್ನು ಕಾಡಿತ್ತು. ಈ ನಡುವೆ BMRCL ಶುಭ ಸುದ್ದಿ ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.