
ಬೆಂಗಳೂರು, ಜನವರಿ 14: ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಂಗಳವಾರ ಮಹತ್ವದ ಘೋಷಣೆ ಮಾಡಿದೆ. ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಸಲುವಾಗಿ BMRCL ಮೊಬೈಲ್ ಕ್ಯೂಆರ್ ಆಧಾರಿತ ಪಿರಿಯಾಡಿಕಲ್ ಪಾಸ್‌ಗಳನ್ನು ಪರಿಚಯಿಸಿದೆ. ಒಂದು, ಮೂರು ಹಾಗೂ ಐದು ದಿನಗಳ ಕಾಲ ಅನಿಯಮಿತ ಪ್ರಯಾಣಕ್ಕೆ ಅವಕಾಶ ನೀಡುವ ಈ ಹೊಸ ಪಾಸ್‌ಗಳು ಗುರುವಾರದಿಂದ (ಜ.15) ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿವೆ.
ಈವರೆಗೆ ಇಂತಹ ಅನಿಯಮಿತ ಪ್ರಯಾಣ ಪಾಸ್‌ಗಳನ್ನು ಕೇವಲ ಕಾನ್ಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್ (CSC) ರೂಪದಲ್ಲಿ ಮಾತ್ರ ನೀಡಲಾಗುತ್ತಿದ್ದು, ಅದಕ್ಕಾಗಿ ಪ್ರಯಾಣಿಕರು ರೂ.50 ಭದ್ರತಾ ಠೇವಣಿ ಪಾವತಿಸಬೇಕಾಗಿತ್ತು. ಇದೀಗ ಮೊಬೈಲ್ ಕ್ಯೂಆರ್ ಪಾಸ್ ಪರಿಚಯದೊಂದಿಗೆ ಭದ್ರತಾ ಠೇವಣಿ ಪಾವತಿ ಅಗತ್ಯವಿಲ್ಲದೆ, ಸಂಪೂರ್ಣ ಡಿಜಿಟಲ್ ಮಾಧ್ಯಮದ ಮೂಲಕ ಪಾಸ್ ಪಡೆಯಬಹುದಾಗಿದೆ.
ಪ್ರಯಾಣಿಕರು ಅಪ್ಲಿಕೇಶನ್ ಮೂಲಕ ಪಾಸ್ ಖರೀದಿಸಿ, ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸುವ ಕ್ಯೂಆರ್ ಕೋಡ್ ಅನ್ನು ಮೆಟ್ರೋ ನಿಲ್ದಾಣಗಳ ಸ್ವಯಂಚಾಲಿತ ಶುಲ್ಕ ಸಂಗ್ರಹಣಾ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪ್ರವೇಶ ಮತ್ತು ನಿರ್ಗಮನ ಎರಡಕ್ಕೂ ಈ ಕ್ಯೂಆರ್ ಬಳಸಬಹುದು. ಇದರಿಂದ ಸಂಪರ್ಕರಹಿತ ಹಾಗೂ ಸುಗಮ ಪ್ರಯಾಣ ಸಾಧ್ಯವಾಗಲಿದೆ.
ಒಂದು ದಿನದ ಅನಿಯಮಿತ ಪ್ರಯಾಣ ಪಾಸ್ 250 ರೂ.ಆಗಿದ್ದು, ಇದು ಸ್ಮಾರ್ಟ್ ಕಾರ್ಡ್‌ನ 300 ರೂ. ದರಕ್ಕಿಂತ ಕಡಿಮೆಯಾಗಿದೆ. ಮೂರು ದಿನಗಳ ಪಾಸ್ 550 ರೂ. ಮತ್ತು ಐದು ದಿನಗಳ ಪಾಸ್ 850 ರೂ. ಎಂದು ನಿಗದಿಪಡಿಸಲಾಗಿದೆ. ಒಟ್ಟಾರೆ ಸ್ಮಾರ್ಟ್ ಕಾರ್ಡ್‌ಗಿಂತ ಕಡಿಮೆ ವೆಚ್ಚದಲ್ಲಿ ಕ್ಯೂಆರ್ ಪಾಸ್ ಸಿಗಲಿದ್ದು, ಸೇವೆಯನ್ನು ಶೀಘ್ರದಲ್ಲೇ ಇತರೆ ಮೊಬೈಲ್ ಟಿಕೆಟ್ ಪ್ಲಾಟ್‌ಫಾರ್ಮ್‌ಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈ ವ್ಯವಸ್ಥೆಯಿಂದಾಗಿ ಪ್ರಯಾಣಿಕರ ಸಮಯ ಉಳಿಯುಯುವುದರ ಜೊತೆಗೆ ಕಾರ್ಡ್ ವಿತರಣೆ ಮತ್ತು ಮರುಪಾವತಿಗಾಗಿ ಸರತಿ ಸಾಲುಗಳಲ್ಲಿ ನಿಲ್ಲುವುದೂ ತಪ್ಪುತ್ತದೆ. ಹೀಗಾಗಿ ಸುಗಮ ಪ್ರಯಾಣದ ಅನುಭವವನ್ನು ಆನಂದಿಸಲು ಮೊಬೈಲ್ ಕ್ಯೂಆರ್ ಆಧಾರಿತ ಪಾಸ್‌ಗಳಿಗೆ ಬದಲಾಯಿಸಲು ಬಿಎಂಆರ್‌ಸಿಎಲ್ ಪ್ರಯಾಣಿಕರನ್ನು ಒತ್ತಾಯಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:11 am, Wed, 14 January 26