ನಮ್ಮ ಮೆಟ್ರೋ ಪ್ರಯಾಣಕರಿಗೆ ಮತ್ತೆ ಟಿಕೆಟ್ ದರ ಏರಿಕೆಯ ಶಾಕ್! ಈ ಬಾರಿ ಎಷ್ಟು?
ಈ ಹಿಂದೆ ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗಾಗಲೇ ನಮ್ಮ ಮೆಟ್ರೋ ಅಧಿಕಾರಿಗಳು ದರ ಏರಿಕೆ ಸಮಿತಿ ಮುಂದೆ ತಪ್ಪು ಲೆಕ್ಕ ನೀಡಿ ಒನ್ ಟು ಡಬಲ್ ಟಿಕೆಟ್ ದರ ಏರಿಕೆ ಮಾಡಿದ್ದಾರೆ ಎನ್ನುವ ಆರೋಪವಿದೆ. ಇನ್ನೂ ಆ ಗೊಂದಲವೇ ಕ್ಲಿಯರ್ ಆಗಿಲ್ಲ. ಇದೀಗ ಮತ್ತೆ ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಮುಂದಾಗಿದೆ.

ಬೆಂಗಳೂರು, (ನೆವೆಂಬರ್ 05): ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಮತ್ತೊಮ್ಮೆ ದರ ಏರಿಕೆಯ ಬಿಸಿ ತಟ್ಟಲಿದೆ. ಹೌದು…ಇನ್ನೂ ಮೂರೇ ತಿಂಗಳಲ್ಲೇ ಮತ್ತೆ ಮೆಟ್ರೋ ದರ ಮತ್ತಷ್ಟು ಏರಿಕೆ ಆಗಲಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ 5% ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ (BMRCL) ಮುಂದಾಗಿದೆ. ಈಗಾಗಲೇ ಬಿಎಂಆರ್ಸಿಎಲ್ ಅಧಿಕಾರಿಗಳ ತಪ್ಪು ಲೆಕ್ಕದಿಂದ ದೇಶದಲ್ಲೇ ನಮ್ಮ ಮೆಟ್ರೋ ದುಬಾರಿ ಮೆಟ್ರೋ ಅನ್ನಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಪ್ರತಿವರ್ಷ 5% ರಷ್ಟು ಏರಿಕೆ ಮಾಡಿದ್ರೆ, ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಪ್ರಯಾಣ ಮಾಡಲು ಸಾಧ್ಯವಾ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.
ಇಡೀ ದೇಶದಲ್ಲೇ ದುಬಾರಿ ಟಿಕೆಟ್ ದರ ಇರೋ ಮೆಟ್ರೋ ಎಂಬ ಕುಖ್ಯಾತಿ ಸಹ ನಮ್ಮ ಮೆಟ್ರೋದ ಮೇಲಿದೆ. ಇನ್ಮುಂದೆ ಪ್ರತಿ ವರ್ಷ ಫೆಬ್ರವರಿಯಲ್ಲಿ ಶೇಕಡಾ 5ರಷ್ಟು ಬೆಲೆ ಏರಿಕೆಗೆ ಬಿಎಂಆರ್‌ಸಿಎಲ್ ನ ದರ ನಿಗದಿ ಸಮಿತಿ ಶಿಫಾರಸ್ಸು ಮಾಡಿದೆ.ಇದರ ಪ್ರಕಾರ 2026ರ ಫೆಬ್ರವರಿಯಲ್ಲಿ ಮತ್ತೊಮ್ಮೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಆಗೋದು ಗ್ಯಾರಂಟಿ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು, ದೆಹಲಿ, ಮುಂಬೈ ಮೆಟ್ರೋ ದರ ವ್ಯತ್ಯಾಸವೆಷ್ಟು? ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ಇನ್ನೂ ಮೂರೇ ತಿಂಗಳಲ್ಲೇ ಮತ್ತೆ ಮೆಟ್ರೋ ದರ ಮತ್ತಷ್ಟು ಏರಿಕೆ ಆಗಲಿದ್ದು,ಈ ವರ್ಷ ಮಾಡಿರುವ ದರ ಏರಿಕೆ ತಪ್ಪಿನಿಂದ ಮುಂದಿನ ವರ್ಷಗಳಲ್ಲೂ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ಆಗಲಿದೆ ಅನ್ಸುತ್ತೆ. ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರು ಮೊದಲು ತಪ್ಪು ಲೆಕ್ಕ ಕೊಟ್ಟು ಏರಿಕೆ ಮಾಡಿರುವ ದರವನ್ನು ಇಳಿಸಲಿ,ನಂತರ ಪ್ರತಿವರ್ಷ ಬೇಕಾದರೆ 5% ರಷ್ಟು ಏರಿಕೆ ಮಾಡಲಿ ಅಂತಿದ್ದಾರೆ.
ಈಗಾಗಲೇ ನಮ್ಮ ಮೆಟ್ರೋ ಅಧಿಕಾರಿಗಳು ಫೆಬ್ರವರಿ 9ರಂದು 105.5% ರಷ್ಟು ದರ ಏರಿಕೆ ಮಾಡಿದ್ದು, ಈ ಒನ್ ಟು ಡಬಲ್ ದರ ಏರಿಕೆಯನ್ನು ವಿರೋಧಿಸಿ ಪ್ರಯಾಣಿಕರು ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ 71.5% ಕ್ಕೆ ಟಿಕೆಟ್ ದರ ಇಳಿಸಲಾಗಿತ್ತು. ಆದರೆ ಈ ದರವೇ ಸರಿಯಲ್ಲ ದರ ಏರಿಕೆ ಸಮಿತಿ ಮುಂದೆ ತಪ್ಪು ಲೆಕ್ಕ ನೀಡಿ ಪ್ರಯಾಣಿಕರಿಂದ ದುಪ್ಪಟ್ಟು ವಸೂಲಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ವಿವರವಾಗಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಪರ ವಿರೋಧದ ಚೆರ್ಚೆಗಳು ನಡೆಯುತ್ತಿರುವಾಗಲೇ ಬಿಎಂಆರ್ಸಿಎಲ್ ಮತ್ತೆ ಮೆಟ್ರೋ ಟಿಕೆಟ್ ದರ ಏರಿಕೆಗೆ ಮುಂದಾಗಿದ್ದು, ಬೆಂಗಳೂರಿಗರಿಗೆ ಮತ್ತೆ ದರ ಏರಿಕೆ ಬಿಸಿ ತಟ್ಟಲಿದೆ.
ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತಪ್ಪು ಲೆಕ್ಕ ನೀಡಿತಾ BMRCL? ಅಧಿಕಾರಿಗಳಿಗೆ ಗಣಿತ ಪಾಠದ ಅವಶ್ಯಕತೆ ಇದೆ ಎಂದ ತೇಜಸ್ವಿ ಸೂರ್ಯ
ಒಟ್ಟಿನಲ್ಲಿ ಈಗಾಗಲೇ ಮೆಟ್ರೋ ಪ್ರಯಾಣಿಕರು ದರ ಏರಿಕೆಯ ಶಾಕ್ ನಿಂದ ಹೊರಬಂದಿಲ್ಲ. ಮತ್ತೆ ದರ ಏರಿಕೆ ಅನ್ನೋದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.



