ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡುತ್ತೇವೆ ಎಂದು ಬಿಎಂಟಿಸಿ ರಸ್ತೆಗಿಳಿಸಿರುವ ಎಲೆಕ್ಟ್ರಿಕ್ ಬಸ್ಗಳು (Electric Buses) ಇದೀಗ ಸರಿಯಾಗಿ ಸೇವೆ ಒದಗಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾಜ್ಯ ರಾಜಧಾನಿಯ ವಾಯು ಮಾಲಿನ್ಯ ಕಡಿಮೆ ಮಾಡುತ್ತೇವೆ, ನಗರದಲ್ಲಿ ಶಬ್ದ ಮಾಲಿನ್ಯ ಮಾಡದೆ ಬಸ್ ಕಾರ್ಯಾಚರಣೆ ಮಾಡುತ್ತೇವೆ ಎಂದು ಇವಿ ಬಸ್ಗಳನ್ನು ಬಿಎಂಟಿಸಿ (BMTC) ರಸ್ತೆಗಿಳಿಸಿತ್ತು. ಈ ಬಸ್ಗಳಿಗೆ ಜನ ಕೂಡ ಹೊಂದಿಕೊಂಡಿದ್ದಾರೆ. ಆದರೆ ಇದೀಗ ಎಲೆಕ್ಟ್ರಿಕ್ ಬಸ್ಗಳು ಸಮಯಕ್ಕೆ ಸರಿಯಾಗಿ ಬರ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಬಿಎಂಟಿಸಿಯಲ್ಲಿ ಒಟ್ಟು 6842 ಬಸ್ಗಳಿವೆ. ಅದರಲ್ಲಿ ಸಾಮಾನ್ಯ 5642 ಬಸ್ಗಳಿದ್ದರೆ, 600 ಎಸಿ ಬಸ್ಗಳಿವೆ. 600 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳಿವೆ. ಆದರೆ ಅದರಲ್ಲಿ 300 ಕ್ಕೂ ಹೆಚ್ಚು ಬಸ್ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಇದಕ್ಕೆ ಕಾರಣ ಅಂದರೆ, ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಖಾಸಗಿ ಕಂಪನಿಗಳು ಸರಿಯಾಗಿ ಸಂಬಳ ನೀಡದಿರುವುದು ಹಾಗೂ ಕಡಿಮೆ ಸಂಬಳ ನೀಡುತ್ತಿರುವುದು. ಬಿಎಂಟಿಸಿಯ ಚಾಲಕರಿಗೆ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿ ಸಂಬಳ ನೀಡಿದರೆ, ಖಾಸಗಿ ಕಂಪನಿಗಳು ಎಲೆಕ್ಟ್ರಿಕ್ ಬಸ್ ಡ್ರೈವರ್ಗಳಿಗೆ 15 ರಿಂದ 18 ಸಾವಿರ ರೂಪಾಯಿ ಸಂಬಳ ನೀಡುತ್ತಿವೆ.
ಖಾಸಗಿ ಚಾಲಕರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ನೀಡುವುದಿಲ್ಲ. ನೀಡುವ ಸಂಬಳದಲ್ಲೂ ಎರಡರಿಂದ ಮೂರು ಸಾವಿರ ರೂಪಾಯಿಯನ್ನು ಬಿಎಂಟಿಸಿಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳು ಪಡೆದಕೊಳ್ಳುವ ಆರೋಪ ಇದೆ. ಬಿಎಂಟಿಸಿಯ ಚಾಲಕರಂತೆ ಯಾವುದೇ ಓಟಿ ಮತ್ತು ಭತ್ಯೆಗಳನ್ನೂ ನೀಡುವುದಿಲ್ಲ. ಹಾಗಾಗಿ ಚಾಲಕರು ಸರಿಯಾಗಿ ಕೆಲಸಕ್ಕೆ ಬರ್ತಿಲ್ಲ. ಕೆಲಸಕ್ಕೆ ಬಂದ್ರು ಒಂದೋ ಅಥವಾ ಎರಡು ತಿಂಗಳು ಕೆಲಸ ಮಾಡಿ ಬಿಡುತ್ತಿದ್ದಾರೆ.
ಎಲೆಕ್ಟ್ರಿಕ್ ಬಸ್ಗಳು ಸರಿಯಾಗಿ ಸಂಚರಿಸದೇ ಇರುವುದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗ್ತಿದೆ. ಇದರಿಂದ ಬೆಂಗಳೂರಲ್ಲಿ ಬಸ್ಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ. ಪ್ರಯಾಣಿಕರು ದುಬಾರಿ ಹಣ ಕೊಟ್ಟು ಕ್ಯಾಬ್, ಆಟೋಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯ ವಿನಯ್ ಶ್ರೀ ನಿವಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದರ ದುಪ್ಪಟ್ಟು: ನೀರಿನ ಬಿಕ್ಕಟ್ಟೇ ಕಾರಣ
ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಕರು ಸರಿಯಾಗಿ ಸಿಗದ ಕಾರಣ, ನಗರದಲ್ಲಿ ಬಸ್ ಸಂಚಾರ ಕಡಿಮೆ ಆಗಿದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗಿರುವುದಂತೂ ನಿಜ. ಕೂಡಲೇ ಬಿಎಂಟಿಸಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ