BMTC: ಬೆಂಗಳೂರು ನಗರದಲ್ಲಿ ರಾತ್ರಿ ಬಸ್ ಸಂಚಾರ ಪುನಾರಂಭ
Bengaluru News: ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಹೀಗಾಗಿ ಈಗ ರಾತ್ರಿ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಕೊವಿಡ್ 19 ಕಾರಣದಿಂದಾಗಿ ಬಿಎಂಟಿಸಿ ರಾತ್ರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 20 ತಿಂಗಳಿನಿಂದ ರಾತ್ರಿ ಬಿಎಂಟಿಸಿ ಬಸ್ ಸೇವೆ ಲಭ್ಯವಿರಲಿಲ್ಲ. ಇದೀಗ ಕೊರೊನಾ ಸಾಂಕ್ರಾಮಿಕ ಇಳಿಕೆ ಆಗಿರುವ ಸಂದರ್ಭದಲ್ಲಿ ಮತ್ತೆ ಬಿಎಂಟಿಸಿ ರಾತ್ರಿ ಬಸ್ ಸೇವೆಯನ್ನು ಪುನಾರಂಭಿಸಲಾಗಿದೆ. ಭಾನುವಾರದಿಂದ ರಾತ್ರಿ ಬಸ್ ಸಂಚಾರ ಮತ್ತೆ ಆರಂಭವಾಗಿದೆ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ವಿಧಿಸಿದ್ದ ರಾತ್ರಿ ಕರ್ಫ್ಯೂ ಆದೇಶ ಹಿಂತೆಗೆದುಕೊಂಡಿತ್ತು.
ಸುಮಾರು 70 ಬಿಎಂಟಿಸಿ ಬಸ್ಗಳು ಬೆಂಗಳೂರು ನಗರದಲ್ಲಿ ಸಂಚಾರ ಆರಂಭಿಸಿವೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ವಿಧಿಸಿದ್ದ ನೈಟ್ ಕರ್ಫ್ಯೂ ಆದೇಶವನ್ನು ಕರ್ನಾಟಕ ಸರ್ಕಾರ ಹಿಂತೆಗೆದುಕೊಂಡಿದೆ. ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಹೀಗಾಗಿ ಈಗ ರಾತ್ರಿ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೊರೊನಾಕ್ಕಿಂತ ಮೊದಲು ಬಿಎಂಟಿಸಿ ಸುಮಾರು 130 ಬಸ್ಗಳನ್ನು ಬೆಂಗಳೂರು ನಗರದಲ್ಲಿ ರಾತ್ರಿ ಓಡಿಸುತ್ತಿತ್ತು. ಈಗ ಬೇಡಿಕೆ, ಪ್ರಯಾಣಿಕರ ಸಂಖ್ಯೆ ಗಮನಿಸಿಕೊಂಡು ನಿಧಾನವಾಗಿ ರಾತ್ರಿ ಸಂಚರಿಸುವ ಬಸ್ಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಹುತೇಕ ಸಂಖ್ಯೆಯ ಬಸ್ಗಳು ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ನಿಂದ ಪ್ರಯಾಣ ಮಾಡಲಿವೆ. ಹಾಗೂ ಸಾಮಾನ್ಯ ದರಕ್ಕಿಂತ 1.5 ಪಟ್ಟು ಹೆಚ್ಚು ಟಿಕೆಟ್ ದರ ರಾತ್ರಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಅಧಿಕಾರಿಗಳು ಹೇಳುವಂತೆ, ಸದ್ಯ ಸುಮಾರು 5,200 ಬಸ್ಗಳು ದಿನ ಒಂದಕ್ಕೆ ಬೆಂಗಳೂರಿನಲ್ಲಿ ಸಂಚಾರ ನಡೆಸುತ್ತಿವೆ. ಅದರಲ್ಲಿ 120 ಎಸಿ ಬಸ್ಗಳು ಕೂಡ ಒಳಗೊಂಡಿದೆ. ಭಾನುವಾರ ಸುಮಾರು ಆರು ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಪುನಾರಂಭಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೇವೆಯ ಸಂಖ್ಯೆ ಕೂಡ ಏರಿಕೆಯಾಗಿದೆ.
ಇದನ್ನೂ ಓದಿ: ಬೆಂಗಳೂರು: ತೆರಿಗೆ ಪಾವತಿಸದ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ BBMP ಅಧಿಕಾರಿಗಳು
ಇದನ್ನೂ ಓದಿ: ಬೆಂಗಳೂರು: ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣ; 20ಕ್ಕೂ ಹೆಚ್ಚು ಜನರು ಅಸ್ವಸ್ಥ