ನಡು ರೋಡಲ್ಲಿ ಕೈ ಕೊಡುತ್ತಿರುವ ಬಿಎಂಟಿಸಿ ಟಿಕೆಟ್ ಮಷಿನ್​​ಗಳು: ಕಂಡಕ್ಟರ್ ಮತ್ತು ಪ್ರಯಾಣಿಕರ ಮಧ್ಯೆ ಕಿರಿಕ್

ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿನ ಹಳೆಯ ಇಟಿಎಂ ಟಿಕೆಟ್ ಯಂತ್ರಗಳಿಂದ ಪ್ರಯಾಣಿಕರು ಮತ್ತು ಕಂಡಕ್ಟರ್​ಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಟಿಎಂ ಟಿಕೆಟ್ ಯಂತ್ರಗಳು ಕೆಟ್ಟು ಹೋಗುತ್ತಿದ್ದು, ಟಿಕೆಟ್‌ಗಳು ಸರಿಯಾಗಿ ಮುದ್ರಣವಾಗದಿರುವುದು ಮತ್ತು ಬ್ಯಾಟರಿ ಸಮಸ್ಯೆಗಳಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇದರಿಂದ ನಿರ್ವಾಹಕರಿಗೆ ನೋಟೀಸ್‌ ನೀಡಲಾಗುತ್ತಿದ್ದು, ಇತ್ತ ಪ್ರಯಾಣಿಕರಿಗೂ ದಂಡ ವಿಧಿಸಲಾಗುತ್ತಿದೆ.

ನಡು ರೋಡಲ್ಲಿ ಕೈ ಕೊಡುತ್ತಿರುವ ಬಿಎಂಟಿಸಿ ಟಿಕೆಟ್ ಮಷಿನ್​​ಗಳು: ಕಂಡಕ್ಟರ್ ಮತ್ತು ಪ್ರಯಾಣಿಕರ ಮಧ್ಯೆ ಕಿರಿಕ್
ಇಟಿಎಂ ಟಿಕೆಟ್ ಮಷಿನ್
Updated By: ಗಂಗಾಧರ​ ಬ. ಸಾಬೋಜಿ

Updated on: May 11, 2025 | 9:54 AM

ಬೆಂಗಳೂರು, ಮೇ 11: ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿ ಬಸ್​ನಲ್ಲಿ (BMTC bus)
ಪ್ರತಿದಿನ ನಲವತ್ತು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಕಿರಿಕ್ ಕೂಡ ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣ ಅಂದರೆ ಇಟಿಎಂ ಟಿಕೆಟ್ ಮಷಿನ್​ (ETM ticket machine) ಅಂತೆ. ಪದೇ ಪದೇ ಬಿಎಂಟಿಸಿಯ ಟಿಕೆಟ್ ಮಷಿನ್​​ಗಳು ಕೈ ಕೊಡುತ್ತಿವೆ. ಇದರಿಂದ ಟಿಕೆಟ್ ಕೊಡಲು ಆಗದೆ ಕಂಡಕ್ಟರ್​ಗಳು ಪರದಾಡುವಂತಾಗಿದೆ.

ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದಾರೆ. ಟಿಕೆಟ್ ಕೊಡುವಾಗಲೇ ಟಿಕೆಟ್ ಕೊಡುವ ಇಟಿಎಂ ಮಷಿನ್​​ ಹ್ಯಾಂಗ್ ಆಗುತ್ತಿವೆಯಂತೆ. ಇದರಿಂದ ಸರಿಯಾದ ಸಮಯಕ್ಕೆ ಪ್ರಯಾಣಿಕರಿಗೆ ಟಿಕೆಟ್ ಕೊಡಲು ಆಗದೆ ಕಂಡಕ್ಟರ್​ಗಳು ಪರದಾಡುತ್ತಿದ್ದಾರೆ. ಟಿಕೆಟ್ ಕೊಡುವ ವೇಳೆಯಲ್ಲಿ ಮಷಿನ್​ನಲ್ಲಿ ಟಿಕೆಟ್ ಬರದ ಹಿನ್ನೆಲೆ ಚೆಕ್ಕಿಂಗ್ ಆಫೀಸರ್​ಗಳು ಬಂದಾಗ ಕಂಡಕ್ಟರ್​ಗಳಿಗೆ ನೋಟೀಸ್ ನೀಡ್ತಿದ್ದಾರಂತೆ. ಈ ಬಗ್ಗೆ ಈಗಾಗಲೇ ಬಿಎಂಟಿಸಿ ಎಂ.ಡಿ ಗೆ ದೂರು ನೀಡಿದ್ದಾರೆ ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್​ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್‌ ಸಮೀಕ್ಷೆಗೆ ರೈಲ್ವೆ ಇಲಾಖೆ ಸಮ್ಮತಿ

ಇನ್ನೂ ಟಿಕೆಟ್ ಮಷಿನ್ ಕೈ ಕೊಡುತ್ತಿರುವುದರಿಂದ ಕಂಡಕ್ಟರ್​ಗಳು ಪ್ರಯಾಣಿಕರಿಗೆ ಟಿಕೆಟ್ ಆಮೇಲೆ ಕೊಡುತ್ತೇವೆ ಎಂದು ಮುಂದಕ್ಕೆ ಹೋಗುತ್ತಿದ್ದಾರೆ. ಆ ವೇಳೆ ಲೈನ್ ಚೆಕ್ಕಿಂಗ್ ಆಫೀಸರ್​ಗಳು ಬಂದು ಪ್ರಯಾಣಿಕರಿಗೆ ದಂಡ ಹಾಕುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಹಳೆಯ ಇಟಿಎಂ ಮಷಿನ್​ಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದಂತೆ.

ಬ್ಯಾಟರಿಗಳು ಡೆಡ್ ಆಗಿದ್ದು ಸರಿಯಾಗಿ ಚಾರ್ಜ್ ಆಗೋದಿಲ್ವಂತೆ. ಟಿಕೆಟ್ ಕೊಡುವ ಪೇಪರ್ ಟಿಕೆಟ್ ರೋಲ್ ಗಳು ಕಳಪೆ ಗುಣಮಟ್ಟದಾಗಿದ್ದು, ಟಿಕೆಟ್ ನೀಡುವ ವೇಳೆ ಸರಿಯಾಗಿ ಟಿಕೆಟ್ ಪ್ರಿಂಟ್ ಆಗುತ್ತಿವಂತೆ. ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಪ್ರಯಾಣಿಕ ವಿಜಯ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಅಪಾರ್ಟ್​ಮೆಂಟ್​ನಲ್ಲಿ ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ

ಒಟ್ಟಿನಲ್ಲಿ ಪ್ರಯಾಣಿಕರು ಬಿಎಂಟಿಸಿಯ ಹಳೆಯ ಟಿಕೆಟ್ ಮಷಿನ್​ಗಳನ್ನು ಮೂಲೆಗೆ ಹಾಕಿ ಮೊದಲು ಹೊಸ ಮಷಿನ್​ಗಳನ್ನು ಕಂಡಕ್ಟರ್​ಗಳಿಗೆ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದು ಯಾವಾಗ ಹೊಸ ಮಷಿನ್​ಗಳು ಬರುತ್ತೋ, ಸಮಸ್ಯೆ ಕಡಿಮೆ ಆಗುತ್ತೋ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.