ಉಕ್ರೇನ್​ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹ: ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದ ಸಿಎಂ

ದೆಹಲಿಯಿಂದ ಬೆಂಗಳೂರಿಗೆ ಬಂದ ನವೀನ್ ಅವರ ಮೃತದೇಹಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವ ಸಲ್ಲಿಸಿದರು.

ಉಕ್ರೇನ್​ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹ: ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದ ಸಿಎಂ
ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ನವೀನ್ ಗ್ಯಾನಗೌಡರ್ ಪಾರ್ಥಿವ ಶರೀರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಗೌರವ ಸಲ್ಲಿಸಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 21, 2022 | 7:37 AM

ಬೆಂಗಳೂರು: ಉಕ್ರೇನ್‌ನಲ್ಲಿ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರವನ್ನು ಸೋಮವಾರ ಕರ್ನಾಟಕಕ್ಕೆ ತರಲಾಯಿತು. ಉಕ್ರೇನ್​ನಿಂದ ದೆಹಲಿಗೆ, ದೆಹಲಿಯಿಂದ ಬೆಂಗಳೂರಿಗೆ ಬಂದ ನವೀನ್ ಅವರ ಮೃತದೇಹಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವ ಸಲ್ಲಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ರಕ್ಷಣಾ ಕಾರ್ಯಾಚರಣೆಯ ನೋಡೆಲ್ ಅಧಿಕಾರಿ ಮನೋಜ್ ರಾಜನ್, ಸರ್ಕಾರದ ಪರವಾಗಿ ದಾಖಲಾತಿ ಮತ್ತು ಇತರ ವಿಧಿವಿಧಾನಗಳನ್ನು ನಿರ್ವಹಿಸಿದರು. ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ನವೀನ್ ಪಾರ್ಥಿವ ಶರೀರವು ಸ್ವಗ್ರಾಮ ಚಳಗೇರಿಗೆ ತಲುಪಲಿದೆ.

‘ಉಕ್ರೇನ್ ರಾಜಧಾನಿ ಕೀವ್ ನಗರದ ಮೆಡಿಕಲ್ ಕಾಲೇಜ್‌​ನಲ್ಲಿ‌ ನವೀನ್ ಮೃತದೇಹವಿತ್ತು. ಮೃತದೇಹ ಕಳಿಸಿಕೊಡುವಂತೆ ನಾವು ಮನವಿ ಮಾಡಿದ್ದೆವು. ಡಾಕ್ಯುಮೆಂಟೇಷನ್ ಮಾಡಿ, ಫ್ಯೂನರಲ್ ಏಜೆಂಟ್ ಮೂಲಕ ಮೃತದೇಹ ಕಳಿಸಲಾಗಿದೆ. ಕೀವ್​ನಿಂದ ವಾರ್ಸಾ, ಪೋಲೆಂಡ್‌ನಿಂದ ದುಬೈ, ದುಬೈನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಾಯಿತು’ ಎಂದು ಮನೋಜ್ ರಾಜನ್‌ ಹೇಳಿದರು.

ಉಕ್ರೇನ್​ನಲ್ಲಿ ಸಿಲುಕಿದ್ದ ಕರ್ನಾಟಕದ 572 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ನವೀನ್ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ಕೀವ್ ಅಧಿಕಾರಿಗಳಿಗೆ ಭಾರತ ಸರ್ಕಾರದ ಮೂಲಕ ಮನವಿ ಮಾಡಿದ್ದೆವು. ಕೀವ್​ನ ಮೆಡಿಕಲ್ ಕಾಲೇಜಿನಲ್ಲಿ‌ ನವೀನ್ ಮೃತದೇಹವನ್ನು ಸುರಕ್ಷಿತವಾಗಿ ಇರಿಸಲಾಯಿತು. ನಂತರ ಫ್ಯೂನರಲ್ ಏಜೆಂಟ್ ಮೂಲಕ ಡಾಕ್ಯುಮೆಂಟೆಷನ್ ಮಾಡಿ ಮೃತದೇಹ ಕಳಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮೃತದೇಹ ಕಳಿಸಿಕೊಡಲಾಗಿದೆ ಎಂದು ಹೇಳಿದರು.

ವಿಮಾನ ನಿಲ್ದಾಣದಲ್ಲಿದ್ದ ನವೀನ್ ಗ್ಯಾನಗೌಡರ್ ಅವರ ಪೋಷಕರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಸಾಂತ್ವನ ಹೇಳಿದರು. ನವೀನ್ ಸೋದರ ಹರ್ಷ ಮೃತದೇಹಕ್ಕೆ ಮೊದಲ ಹಾರ ಹಾಕಿ ನಮನ ಸಲ್ಲಿಸಿದರು. ಕುಟುಂಬ ಸದಸ್ಯರು ಗೌರವ ಸಲ್ಲಿಸಿದ ನಂತರ ಮುಖ್ಯಮಂತ್ರಿ ಸಹ ಹಾರ ಹಾಕಿ ಕೆಲ ಸಮಯ ನಿಂತು ನಮಿಸಿದರು. ನವೀನ್ ಅವರ ಭಾವಚಿತ್ರವಿದ್ದ ಆ್ಯಂಬುಲೆನ್ಸ್​ನಲ್ಲಿ ರಸ್ತೆ ಮಾರ್ಗದ ಮೂಲಕ ಮೃತದೇಹವನ್ನು ಹಾವೇರಿಗೆ ರವಾನಿಸಲಾಯಿತು.

‘ನವೀನ್ ವೈದ್ಯನಾಗಿ ಭಾರತಕ್ಕೆ ವಾಪಸ್ ಬರಬೇಕಾಗಿತ್ತು. ಆದರೆ ಉಕ್ರೇನ್​ನಲ್ಲಿಯೇ ಸಾವನ್ನಪ್ಪಿದರು. ಇದು ನೋವಿನ ಸಂಗತಿ. ನಾವು ನವೀನ್ ಕುಟುಂಬಸ್ಥರ ಜೊತೆಗಿದ್ದೇವೆ. ಉಕ್ರೇನ್‌ನಲ್ಲಿ ಸಿಲುಕಿದ್ದ ಎಲ್ಲ ವಿದ್ಯಾರ್ಥಿಗಳೂ ಹಿಂದಿರುಗಿದ್ದಾರೆ. ಆದರೆ ನವೀನ್ ಮೃತಪಟ್ಟಿರುವುದು ದುರ್ದೈವದ ಸಂಗತಿ. ನವೀನ್ ಮೃತದೇಹ ವಾಪಸ್ ತರಲು ನಿರಂತರವಾಗಿ ಪ್ರಯತ್ನ ನಡೆಯಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿದ್ದರಿಂದ ಇದು ಸಾಧ್ಯವಾಯಿತು. ದೇಶದ ಶಕ್ತಿ ಇಂಥ ಸಂದಿಗ್ಧ ಸಂದರ್ಭಗಳಲ್ಲಿ ಮನವರಿಕೆಯಾಗುತ್ತದೆ. ನವೀನ್ ಮೃತದೇಹವನ್ನು ಭಾರತಕ್ಕೆ ತರಲು ಶ್ರಮಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ. ಜೀವಂತವಾಗಿ ವಾಪಸ್ ಕರೆತರಲು ಆಗಲಿಲ್ಲವಲ್ಲ ಎಂಬ ನೋವು ಸದಾ ಇರುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಂತಿಮ ನಮನ ಸಲ್ಲಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ನವೀನ್ ಅವರ ಪಾರ್ಥಿವ ಶರೀರವು ತಾಯ್ನಾಡಿಗೆ ಬಂದಿದ್ದರಿಂದ ಕೊಂಚ ಅವರ ಕುಟುಂಬ ಸದಸ್ಯರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ನಾವೆಲ್ಲರೂ ಎಚ್ಚರವಹಿಸಬೇಕಿದೆ. NEET ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿ, ರಾಜ್ಯದ ಮಕ್ಕಳಿಗೆ ಅನ್ಯಾಯವಾಗದಂತೆ ಗಮನ ಹರಿಸಬೇಕಿದೆ. ನಮ್ಮ ರಾಜ್ಯದಲ್ಲಿ MBBS ಓದಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು. ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ’ ಎಂದರು.

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವೀನ್ ಅವರ ಪಾರ್ಥಿವ ಶರೀರವು ಸೋಮವಾರ ನಸುಕಿನ 3.30ಕ್ಕೆ ಬಂತು. ಕುಟುಂಬ ಸದಸ್ಯರು, ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾವೇರಿಯ ಬಿಜೆಪಿ ಸಂಸದ ಶಿವಕುಮಾರ ಉದಾಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅಂತಿಮ ನಮನ ಸಲ್ಲಿಸಿದರು. ಮಾರ್ಚ್ 1ರಂದು ಖಾರ್ಕಿವ್ ನಗರದಲ್ಲಿ ರಷ್ಯಾ ನಡೆಸಿದ್ದ ಶೆಲ್ ದಾಳಿಯಲ್ಲಿ ನವೀನ್ ಮೃತಪಟ್ಟಿದ್ದರು.

ವಿಮಾನ ನಿಲ್ದಾಣದಿಂದ ಸ್ವಗ್ರಾಮದ ರಾಣೆಬೆನ್ನೂರು ತಾಲ್ಲೂಕು ಚಳಗೇರಿಯತ್ತ ಮೃತದೇಹವನ್ನು ಕಳುಹಿಸಿಕೊಡಲಾಯಿತು. ಕೆಐಎಬಿಯಿಂದ ದೇವನಹಳ್ಳಿ, ದೊಡ್ಡಬಳ್ಳಾಪುರ, ದಾಬಸ್​ಪೇಟೆ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹರಿಹರ ಮಾರ್ಗವಾಗಿ ಕುಮಾರಪಟ್ಟಣ ಟೋಲ್​ ಗೇಟ್‌ನಿಂದ ಚಳಗೇರೆ ಗ್ರಾಮಕ್ಕೆ ಪಾರ್ಥಿವ ಶರೀರ ತಲುಪಲಿದೆ.

ಬೆಳಿಗ್ಗೆ 10 ವೇಳೆಗೆ ರಾಣೆಬೆನ್ನೂರು ತಾಲೂಕಿನ ಚಳಗೇರೆ ತಲುಪುವ ಸಾಧ್ಯತೆಯಿದೆ. ನವೀನ್ ನಿವಾಸಕ್ಕೆ ತೆಗೆದುಕೊಂಡು ಹೋಗುವ ಮೊದಲು ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನು ತೆಗೆದುಹೋಗಲಾಗುತ್ತದೆ. ಅಲ್ಲಿ ಶವಪೆಟ್ಟಿಗೆಗೆ ಹಾಕಲಾಗಿರುವ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ತೆಗೆದು, ಫ್ರೀಜರ್​ಗೆ ಮೃತದೇಹವನ್ನು ಸ್ಥಳಾಂತರಿಸಲಾಗುತ್ತದೆ. ನಂತರ ನವೀನ್ ಮನೆಗೆ ಮೃತದೇಹ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿಯೇ ನವೀನ್ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಶವಪೆಟ್ಟಿಗೆಗೆ ಹಾಕಿದ್ದ ಕವರ್ ತೆಗೆಯಲಿಲ್ಲ. ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿದ್ದ ಶವಪೆಟ್ಟಿಗೆ ಮೇಲೆ ಹೂ ಗುಚ್ಛ ಇರಿಸಿ ಶ್ರದ್ಧಾಂಜಲಿ‌ ಸಿಎಂ ನಮನ ಸಲ್ಲಿಸಿದ್ದರು.

ದಾವಣಗೆರೆಯ ಎಸ್​.ಎಸ್​.ಆಸ್ಪತ್ರೆಗೆ ನವೀನ್ ಅವರ ದೇಹವನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ. ಚಳಗೇರಿ ಗ್ರಾಮಕ್ಕೆ ಆಗಮಿಸಲಿರುವ ಎಸ್​.ಎಸ್​ ಆಸ್ಪತ್ರೆಯ ಡಾ.ಬಿ.ಎಸ್.ಪ್ರಸಾದ್ ನೇತೃತ್ವದ ವೈದ್ಯರ ತಂಡ ದೇಹವನ್ನು ಪಡೆದುಕೊಳ್ಳಲಿದೆ. ನಮ್ಮ ಆಸ್ಪತ್ರೆಗೆ ದೇಹದಾನ ಮಾಡಿದ ಕುಟುಂಬ ಸದಸ್ಯರಿಗೆ ಮುಂದಿನ ದಿನಗಳಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ಆಡಳಿತ ಸಮಿತಿ ಅಧ್ಯಕ್ಷ ಎಸ್​.ಎಸ್​.ಮಲ್ಲಿಕಾರ್ಜುನ ಹೇಳಿದರು.

ಚಳಗೇರಿಯಲ್ಲಿ ಬಿಗಿಭದ್ರತೆ

ಚಳಗೇರಿಯಲ್ಲಿ ನವೀನ್ ಮೃತದೇಹ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ನಮನ ಸಲ್ಲಿಸುವುದಕ್ಕೆ ಹಲವು ಗಣ್ಯರ ಆಗಮನ ಹಿನ್ನೆಲೆ ಚಳಗೇರಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​ಗಾಗಿ 300ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. ಸಾರ್ವಜನಿಕರು ದರ್ಶನ ಪಡೆಯಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ನಾನು ಸಾಯುವರೆಗೆ ಅವನು ನನ್ನಲ್ಲಿ ಬದುಕಿರುತ್ತಾನೆ ಎಂದರು ನವೀನ್ ಶೇಖರಪ್ಪ ಗ್ಯಾನಗೌಡರ್ ತಾಯಿ

ಇದನ್ನೂ ಓದಿ: ಉಕ್ರೇನಲ್ಲಿ ಇನ್ನೂ ಸಿಲುಕಿದ್ದಾರಲ್ಲ, ಅವರೂ ನನ್ನ ಮಕ್ಕಳೇ, ಅವರನ್ನಾದರೂ ಸುರಕ್ಷಿತವಾಗಿ ಕರೆತನ್ನಿ ಎಂದರು ನವೀನ್ ಅಮ್ಮ

Published On - 7:07 am, Mon, 21 March 22