ಈಶ್ವರಪ್ಪ ವಿರುದ್ಧ ಕಮಿಷನ್​ಗೆ ಬೇಡಿಕೆಯಿಟ್ಟ ಆರೋಪ: ಶಿಸ್ತುಕ್ರಮಕ್ಕೆ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್ ಒತ್ತಾಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 28, 2022 | 1:34 PM

ಕೇವಲ ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಮಾತ್ರವಲ್ಲ, ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಈಶ್ವರಪ್ಪ ವಿರುದ್ಧ ಕಮಿಷನ್​ಗೆ ಬೇಡಿಕೆಯಿಟ್ಟ ಆರೋಪ: ಶಿಸ್ತುಕ್ರಮಕ್ಕೆ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್ ಒತ್ತಾಯ
ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ
Follow us on

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಬಿಲ್ ಮಂಜೂರು ಮಾಡಲು ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಶೇ 40ರಷ್ಟು ಕಮಿಷನ್ ಕೇಳಿದ್ದಾರೆ ಎಂದು ಗುತ್ತಿಗೆದಾರರೊಬ್ಬರು ಬರೆದ ಪತ್ರ ಉಲ್ಲೇಖಿಸಿ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಗಂಭೀರ ಆರೋಪ ಮಾಡಿದರು. ಈ‌ ಹಿಂದೆ ಈಶ್ವರಪ್ಪನವರೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಗುತ್ತಿಗೆದಾರರು ಕೂಡ ಶೇ 40ರ ಕಮಿಷನ್ ಬಗ್ಗೆ ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕೇವಲ ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಮಾತ್ರವಲ್ಲ, ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಈಶ್ವರಪ್ಪ ಮೇಲಿನ ಆರೋಪ ಆಧಾರರಹಿತ ಎಂದು ಸಮರ್ಥಿಸಿಕೊಂಡರು. ಇದು ಕಾಂಗ್ರೆಸ್ ನಾಯಕರ ಪ್ರಚೋದನೆಯಿಂದ ಗುತ್ತಿಗೆದಾರರು ಈಶ್ವರಪ್ಪ ವಿರುದ್ಧ ಇಂಥ ಆರೋಪಗಳನ್ನು ಮಾಡಿದ್ದಾರೆ. ನಮ್ಮ ಸಚಿವರು ಮತ್ತು ಸರ್ಕಾರದ ಮೇಲೆ ಗೂಬೆ ಕುರಿಸುವ ಕೆಲಸ ನಿರಂತರ ನಡೆಯುತ್ತಿದೆ. ಈಶ್ವರಪ್ಪ ಮೇಲಿನ ಆರೋಪ ಶುದ್ಧ ಸುಳ್ಳು. ಈಶ್ವರಪ್ಪ ತಮ್ಮ ಇಲಾಖೆಯ ಅನುದಾನವನ್ನು ಪಾರದರ್ಶಕವಾಗಿ ಎಲ್ಲ 224 ಕ್ಷೇತ್ರಗಳಿಗೂ ನೀಡಿದ್ದಾರೆ. ಕೇವಲ ಬಿಜೆಪಿ ಇರುವ ಕ್ಷೇತ್ರಗಳತ್ತ ಮಾತ್ರ ನಮ್ಮ ಸರ್ಕಾರ ಗಮನ ಕೊಡುತ್ತಿಲ್ಲ. ಈಶ್ವರಪ್ಪ ಮೇಲಿನ ಆರೋಪವನ್ನು ನಾನು ಒಪ್ಪುವುದಿಲ್ಲ ಎಂದರು.

ರಾಜೀನಾಮೆಗೆ ಒತ್ತಾಯ

ಗುತ್ತಿಗೆದಾರನಿಂದ ಸಚಿವ ಕೆ.ಎಸ್.ಈಶ್ವರಪ್ಪ ಕಮಿಷನ್ ಕೇಳಿದ ಆರೋಪ ಕುರಿತು ಪ್ರತಿಕ್ರಿಯಿಸಿದ ವಿಧಾನ ಪರಿಷತ್​ನ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಆರೋಪಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಸಚಿವ ಕೆ.ಎಸ್.ಈಶ್ವರಪ್ಪ ತಕ್ಷಣ ರಾಜೀನಾಮೆ ಕೊಡಬೇಕು. ಆರೋಪ ಮುಕ್ತರಾಗುವ ತನಕ ಸಂಪುಟದಲ್ಲಿ ಮುಂದುವರಿಯಬಾರದು ಎಂದು ಒತ್ತಾಯಿಸಿದರು. ಈಶ್ವರಪ್ಪ ವಿರುದ್ಧ ಹಿಂದೂ ಸಂಘಟನೆಯ ಪ್ರಮುಖ ನಾಯಕರೊಬ್ಬರು ದೂರು ನೀಡಿದ್ದಾರೆ. ಆಡಳಿತ ಪಕ್ಷದ ವಲಯದಿಂದಲೇ ಕೇಳಿಬಂದಿರುವ ಆರೋಪ ಇದು ಎಂದು ಬೇಸರ ವ್ಯಕ್ತಪಡಿಸಿದರು.

ಬಿಲ್ ಕೊಡಿಸುವಂತೆ ಪ್ರಧಾನಿಗೆ ಗುತ್ತಿಗೆದಾರ ಪತ್ರ

ಬೆಳಗಾವಿ: ನಿರ್ವಹಿಸಿದ ಕಾಮಗಾರಿಗೆ ತಕ್ಷಣ ಬಿಲ್ ಪಾವತಿಸಲು ಸೂಚಿಸಬೇಕು ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಫೆಬ್ರುವರಿ 2021ರಂದು ಸಚಿವರ ಅನುಮತಿ ಪಡೆದು 108 ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಸಾಲ ಮಾಡಿ ₹ 4 ಕೋಟಿ ವೆಚ್ಚದಲ್ಲಿ ಕಾಮಗಾರಿ ಮುಗಿಸಿದ್ದೆ. ಆದರೆ ಕಾಮಗಾರಿ ಪೂರ್ಣಗೊಂಡು 1 ವರ್ಷ ಕಳೆದರೂ ಹಣ ಬಿಡುಗಡೆ ಮಾಡಿಲ್ಲ. ಈ ಕುರಿತು ಹಲವು ಬಾರಿ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದನ್ನು ವೈಯಕ್ತಿಕವಾಗಿ ಪರಿಗಣಿಸಿ ಹಣ ಕೊಡಿಸಬೇಕು. ತಾವು ಹಣ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹುಚ್ಚು ನಾಯಿಯಂತೆ ಕೂಗುತ್ತಿದೆ, ಸಿದ್ದರಾಮಯ್ಯ ತಕ್ಷಣ ರಾಜಕೀಯ ನಿವೃತ್ತಿ ಪಡೆಯಲಿ; ಸಚಿವ ಈಶ್ವರಪ್ಪ ಹೇಳಿಕೆ

ಇದನ್ನೂ ಓದಿ: ಎಲ್ಲ ಮುಸ್ಲಿಮರು, ಕ್ರಿಶ್ಚಿಯನ್ನರು ಮುಂದೊಂದು ದಿನ ಆರ್‌ಎಸ್‌ಎಸ್‌ ಜೊತೆ ಸೇರಲೇಬೇಕು -ಸಚಿವ ಕೆಎಸ್ ಈಶ್ವರಪ್ಪ