BSWML ಹೊಸ ಯೋಜನೆ: ಎಲ್ಲೆಂದರಲ್ಲಿ ಕಸ ಎಸೆಯುವ ವೀಡಿಯೋ ಕಳುಹಿಸಿ 250 ರೂ.ಬಹುಮಾನ ಪಡೆಯಿರಿ!
ಬೆಂಗಳೂರಿನಲ್ಲಿ ಕಂಡ ಕಂಡಲ್ಲಿ ಎಸೆಯುವವರನ್ನು ತಡೆಯಲು BSWML ಹೊಸ ಕ್ರಮವೊಂದನ್ನು ಅನುಸರಿಸಲು ಮುಂದಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರ ವೀಡಿಯೊ ಮಾಡಿ ವಾಟ್ಸಾಪ್ ಮೂಲಕ BSWML ಗೆ ಕಳುಹಿಸಿದರೆ, 250 ರೂ. ಬಹುಮಾನ ಪಡೆಯಬಹುದು. ಈ ಯೋಜನೆಯು ನಗರವನ್ನು ಸ್ವಚ್ಛಗೊಳಿಸಲು, ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಮತ್ತು ಜವಾಬ್ದಾರಿಯುತ ವರ್ತನೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ.

ಬೆಂಗಳೂರು, ನವೆಂಬರ್ 3: ಕಂಡ ಕಂಡಲ್ಲಿ ಕಸ ಎಸೆಯುವವರನ್ನು ಅವಮಾನಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ‘ಕಸ ಸುರಿಯುವ ಹಬ್ಬ’ವನ್ನು ಪ್ರಾರಂಭಿಸಿದೆ. ಈ ಕುರಿತು ಸರ್ಕಾರದಿಂದ GBA ಸ್ಪಷ್ಟ ಸಂದೇಶವನ್ನು ಪಡೆದಿದ್ದು, ಜನರು ಬೇಜವಾಬ್ದಾರಿಯಿಂದ ಕಸ ಎಸೆಯುವ ವೀಡಿಯೊವನ್ನು ಮಾಡಿ BSWML ಜೊತೆ ಹಂಚಿಕೊಂಡರೆ ಅವರಿಗೆ 250 ರೂ. ಬಹುಮಾನವನ್ನು ನೀಡುವುದಾಗಿ ಹೇಳಿದೆ.
BSWML ಹೊಸ ನಿರ್ಧಾರ
BSWML 800 ಕ್ಕೂ ಹೆಚ್ಚು ಬ್ಲಾಕ್‌ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಿದ್ದು, ಜನರು ಇನ್ನೂ ಬಂದು ಕಸವನ್ನು ಎಸೆಯುವುದನ್ನು ನಾವು ನೋಡುತ್ತಿದ್ದೇವೆ. ಅವರ ಮನೆ ಬಾಗಿಲಿಗೆ ಕಳುಹಿಸಲಾದ ಆಟೋ ಟಿಪ್ಪರ್‌ಗಳಿಗೆ ಕಸವನ್ನು ನೀಡಲು ಅವರಿಗೆ ಸೋಮಾರಿತನ. ಇದರಿಂದಲೇ BSWML ಈ ನಿರ್ಧಾರ ತೆಗೆದುಕೊಂಡಿದೆ ಎಂದು BSWML ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಹೇಳಿದ್ದಾರೆ.
BSWML ನ WhatsApp ಸಂಖ್ಯೆ – 9448197197 ನಲ್ಲಿ ನೀವು ಕಸ ಎಸೆಯುವವರ ವೀಡಿಯೊವನ್ನು ಹಂಚಿಕೊಳ್ಳಬಹುದು.
ವೀಡಿಯೋ ಹಂಚಿಕೊಂಡವರ UPI ಖಾತೆಗಳಿಗೆ ಬಹುಮಾನದ ಹಣ
ಸರ್ಕಾರದ ಮುಕ್ತ ಒಪ್ಪಿಗೆಯಿಂದ, ಕಸ ಎಸೆಯುವವರ ಮನೆ ಬಾಗಿಲಿಗೆ ತ್ಯಾಜ್ಯವನ್ನು ಸುರಿಯುವುದು ಸೇರಿದಂತೆ ಬಿಎಸ್‌ಡಬ್ಲ್ಯೂಎಂಎಲ್ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರ ಜೊತೆಗೆ ವೀಡಿಯೊ ಯೋಜನೆಯೂ ಪ್ರಾರಂಭವಾಗಿದೆ. ವೀಡಿಯೊವನ್ನು ಚಿತ್ರೀಕರಿಸುವವರು ಸ್ಥಳ ಮತ್ತು ಸಾಧ್ಯವಾದರೆ ಉಲ್ಲಂಘಿಸುವವರ ವಿವರಗಳನ್ನು ಹಂಚಿಕೊಳ್ಳಬೇಕು. ವೀಡಿಯೋ ಹಂಚಿಕೊಂಡವರ UPI ಖಾತೆಗಳಿಗೆ ಬಹುಮಾನದ ಹಣವನ್ನು ಕಳುಹಿಸುವ ಕುರಿತು BSWML ಆಲೋಚಿಸುತ್ತಿದೆ. ಹೀಗೆ ವೀಡಿಯೋ ಕಳುಹಿಸುವವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು GBA ಯ ಐಟಿ ತಂಡದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಯೋಜನೆಯಿಂದಾಗಿ GBA ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆಯೇ?
ಈ ಯೋಜನೆಯಿಂದಾಗಿ GBA ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದ್ದರೂ GBA ನಷ್ಟ ಅನುಭವಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಕೆಂದರೆ ಬಹುಮಾನವನ್ನು ಕಸ ಹಾಕುವವರಿಂದ ಸಂಗ್ರಹಿಸಲಾದ ದಂಡದಿಂದ ಪಾವತಿಸಲಾಗುತ್ತದೆ. ಇಲಾಖೆ ಬೇಜವಾಬ್ದಾರಿಯುತ ಸಾರ್ವಜನಿಕರು ಎಸೆಯುವ ತ್ಯಾಜ್ಯದ ಪ್ರಮಾಣ ಮತ್ತು ಪ್ರಕಾರವನ್ನು ಅವಲಂಬಿಸಿ 1,000 ರಿಂದ 10,000 ರೂ.ಗಳನ್ನು ಸಂಗ್ರಹಿಸುತ್ತಿದ್ದು, 250 ರೂ.ಗಳನ್ನು ಬಹುಮಾನವಾಗಿ ನೀಡುವುದು ನಷ್ಟವಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




