ಬೆಂಗಳೂರು, ಡಿಸೆಂಬರ್ 26: ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮುನಿರತ್ನ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಒಳಸಂಚು ರೂಪಿಸಿ ಹಲ್ಲೆ ಮತ್ತು ಕೊಲೆ ಮಾಡುವ ಉದ್ದೇಶದ ಮುಂದುವರಿದ ಭಾಗವಾಗಿ ಸಂಚಿನಂತೆ ಮೊಟ್ಟೆ ಎಸೆದಿದ್ದಾರೆಂದು ಮುನಿರತ್ನ ದೂರಿನಲ್ಲಿ ಉಲ್ಲೇಖಿಸಿದ್ದರು.
ಏತನ್ಮಧ್ಯೆ, ಮೊಟ್ಟೆ ಎಸೆದವರು ಎಂಬ ಆರೋಪ ಹೊತ್ತವರಿಂದಲೂ ಪ್ರತಿದೂರು ದಾಖಲಾಗಿದೆ. ತಮ್ಮ ಮೇಲೆ ಗುಂಪು ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ನೀಡಿದ ಪ್ರತಿದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವನಾಥ, ಕೃಷ್ಣಮೂರ್ತಿ, ಚಂದ್ರು ಮೊಟ್ಟೆ ಎಸೆದಿದ್ದಾರೆಂಬ ಆರೋಪ ಎದುರಿಸುತ್ತಿದ್ದು, ಇವರನ್ನು ಘಟನಾ ಸ್ಥಳದಲ್ಲೇ ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದರು.
ಘಟನೆ ನಂತರ ಮುನಿರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಪಡೆದು ಗುರುವಾರ ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಮುನಿರತ್ನ, ಈಗ ಔಷಧ ಎಲ್ಲಾ ಕೊಟ್ಟಿದ್ದಾರೆ. ರಾತ್ರಿ ಇಂಜೆಕ್ಷನ್ ಕೊಟ್ಟಿದ್ದರು. ಈಗ ಡಿಸ್ಚಾರ್ಜ್ ಮಾಡಿದ್ದಾರೆ ಎಂದರು. ಮೇಲ್ನೋಟಕ್ಕೆ ಮೊಟ್ಟೆಯಲ್ಲಿ ಏನಾದ್ರು ಆ್ಯಸಿಡ್ ಅಂಶ ಏನಾದ್ರು ಕಾಣಿಸಿಕೊಂಡಿತ್ತಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುನಿರತ್ನ, ಪೊಲೀಸ್ ಇಲಾಖೆ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಅಷ್ಟೇ. ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವಿವರ ನೀಡುವೆ ಎಂದರು.
ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಮುನಿರತ್ನ ವೈಯಾಲಿಕಾವಲ್ ನಿವಾಸಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: ಮುನಿರತ್ನ ಮೇಲೆ ಮೊಟ್ಟೆ ಎಸೆತ: ಡಿಕೆ ಶಿವಕುಮಾರ್, ಡಿಕೆ ಸುರೇಶ್ ಕುಮ್ಮಕ್ಕಿನಿಂದಲೇ ಕೃತ್ಯ ಎಂದ ಬಿಜೆಪಿ ಶಾಸಕ
ಬುಧವಾರ ಲಕ್ಷ್ಮೀದೇವಿ ನಗರ ವಾರ್ಡ್ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಮುನಿರತ್ನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರೇ ಎಸೆದಿದ್ದಾರೆಂದು ಅವರು ಆರೋಪಿಸಿದ್ದರು. ಜತೆಗೆ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ತಮ್ಮ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ