CET 2021: ಆಗಸ್ಟ್ 28ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ
ರಾಜ್ಯದಲ್ಲಿ ನಾಳೆಯಿಂದ ಆಗಸ್ಟ್ 30ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಪರೀಕ್ಷೆ ನಡೆಯಲಿದೆ. ಈಗಾಗಲೇ ರಾಜ್ಯದ 530 ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು ಒಟ್ಟು 2,01,816 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ.
ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ರಾಜ್ಯದಲ್ಲಿ ನಾಳೆಯಿಂದ ಆಗಸ್ಟ್ 30ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಪರೀಕ್ಷೆ ನಡೆಯಲಿದೆ. ಈಗಾಗಲೇ ರಾಜ್ಯದ 530 ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು ಒಟ್ಟು 2,01,816 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಕೊವಿಡ್ ಮಾರ್ಗಸೂಚಿ ಅನುಸರಿಸಿ ನಾಳೆಯಿಂದ ಸಿಇಟಿ ಪರೀಕ್ಷೆ ನಡೆಯಲಿದೆ.
ಆಗಸ್ಟ್ 28ರಂದು ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಪರೀಕ್ಷೆ ಇರುತ್ತದೆ. ಆಗಸ್ಟ್ 29ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ಪರೀಕ್ಷೆ ಆಗಸ್ಟ್ 30ರಂದು ಹೊರನಾಡು & ಗಡಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಿಗದಿಯಾಗಿದೆ. 530 ಪರೀಕ್ಷಾ ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿವೆ. ಉಳಿದ 444 ಕೇಂದ್ರಗಳು ಇನ್ನುಳಿದ ಜಿಲ್ಲೆಗಳಲ್ಲಿವೆ. ಪರೀಕ್ಷೆ ದಿನಗಳಂದು ಗೃಹ ಇಲಾಖೆಯು ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಿದ್ದು ಒಟ್ಟು 530 ವೀಕ್ಷಕರು, 1060 ವಿಶೇಷ ಜಾಗೃತ ದಳದ ಸದಸ್ಯರು, 530 ಪ್ರಶ್ನೆಪತ್ರಿಕೆ ಪಾಲಕರು, 8409 ಕೊಠಡಿ ಮೇಲ್ವಿಚಾರಕರು ಹಾಗೂ 20,415 ಅಧಿಕಾರಿ ವರ್ಗದ ಸಿಬ್ಬಂದಿಯನ್ನು ಪರೀಕ್ಷೆಗಾಗಿ ನಿಯೋಜಿಸಲಾಗಿದೆ.
ಆಗಸ್ಟ್ 30ರಂದು 6 ಸ್ಥಳಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಈ ಪರೀಕ್ಷೆಗೆ 1682 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳು -ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕು -ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನು ಬರೆಯಬೇಕು -ಅಭ್ಯರ್ಥಿಗಳು ಸಿಇಟಿ ಸಂಖ್ಯೆಯನ್ನು, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಬೇಕು -ಓಎಂಆರ್ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯಲ್ಲಿರುವ ಕ್ರಮ ಸಂಖ್ಯೆ ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು -ಉತ್ತರಗಳನ್ನು OMR ಉತ್ತರ ಪತ್ರಿಕೆಯಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕು -Blue/ Black ಬಾಲ್ ಪಾಯಿಂಟ್ ಪೆನ್ನನ್ನು ತೆಗೆದುಕೊಂಡು ಹೋಗಬೇಕು -ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ -ಪರೀಕ್ಷೆಯ ಮೊದಲನೇ ಬೆಲ್ ಆಗುವ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕು -ಮಾಹಿತಿಗಾಗಿ ಕೆಇಎ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಬಹುದು -ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಮಾನ್ಯತೆ ಇರುವ ಕಾಲೇಜಿನ ಗುರುತಿನ ಚೀಟಿ 2ನೇ ಪಿಯುಸಿ ಪ್ರವೇಶ ಪತ್ರ, ಬಸ್ ಪಾಸ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಇವುಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಹೋಗಬೇಕು -ಪರೀಕ್ಷಾ ಕೊಠಡಿಯೊಳಗೆ ಮೊಬೈಲ್, ಕೈಗಡಿಯಾರ, ಟ್ಯಾಬ್ಲೆಟ್ ಕೊಂಡೊಯ್ಯುವಂತಿಲ್ಲ -ಅಭ್ಯರ್ಥಿಗಳು ಓ.ಎಂ.ಆರ್. ಉತ್ತರ ಹಾಳೆಯಲ್ಲಿ ಎಡಗೈ ಹೆಬ್ಬೆರಳ ಗುರುತನ್ನು ಹಾಕುವಂತಿಲ್ಲ
ಇದನ್ನೂ ಓದಿ: KCET Admit Card 2021: ಕೆಸಿಇಟಿ ಪರೀಕ್ಷೆ ಪ್ರವೇಶ ಪತ್ರ ನಾಳೆ ಬಿಡುಗಡೆ; ಆನ್ಲೈನ್ ಮೂಲಕ ಹೀಗೆ ಡೌನ್ಲೋಡ್ ಮಾಡಿಕೊಳ್ಳಿ..
(cet exam 2021 starts from tomorrow for three days in karnataka)
Published On - 7:47 am, Fri, 27 August 21