ಎಚ್ಚರ..ಎಚ್ಚರ..! ಬೆಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ‘ಚಡ್ಡಿ ಗ್ಯಾಂಗ್’
ಚಡ್ಡಿ ಗ್ಯಾಂಗ್ ಎಂದೇ ಕರೆಯಲಾಗುವ ಕಳ್ಳರ ಗ್ಯಾಂಗ್ ಮತ್ತೆ ಬೆಂಗಳೂರಿನಲ್ಲಿ ತನ್ನ ಹಾವಳಿ ಶುರು ಮಾಡಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸುತ್ತಮುತ್ತ ಮತ್ತೆ ಚಡ್ಡಿ ಗ್ಯಾಂಗ್(chaddi Gang) ಹಾವಳಿ ಹೆಚ್ಚಾಗಿದೆ. ಈ ಗ್ಯಾಂಗ್ ಕೈಯಲ್ಲಿ ಆಯುಧಗಳನ್ನು ಹಿಡಿದು ಸರ್ಜಾಪುರ ರಸ್ತೆ ಸುತ್ತಮುತ್ತ ಕಳ್ಳತನಕ್ಕಿಳಿದಿದೆ. ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನ ಪ್ರಯತ್ನಿಸಿರುವುದು ಸಿಸಿ ಟಿವಿ ದೃಶ್ಯದಿಂದ ಬಯಲಿಗೆ ಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ವಿಲ್ಲಾ, ಅಪಾರ್ಟ್‌ಮೆಂಟ್ ಗಳ ಬಳಿ ಕಳ್ಳತನ ಯತ್ನಿಸುತ್ತಿರುವ ಗ್ಯಾಂಗ್ನ ಚಲನವಲನ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದು, ಪೊಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಜಾಲಹಳ್ಳಿ ಅರಣ್ಯ ಅಧಿಕಾರಿಗಳ ಮಿಂಚಿನ ಕಾರ್ಯಚರಣೆ, ಉಡ ಮಾರಾಟಕ್ಕೆ ಬಂದಿದ್ದ ಇಬ್ಬರು ಬಲೆಗೆ
ಯಾರಿಗೂ ಗುರುತು ಸಿಗದಂತೆ ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಸರ್ಜಾಪುರ ರಸ್ತೆ ಸುತ್ತಮುತ್ತಲಿನ ವಿಲ್ಲಾ, ಅಪಾರ್ಟ್ಮೆಂಟ್ಗಳ ಬಳಿ ಕಳ್ಳತನಕ್ಕೆ ಯತ್ನಿಸಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿ ಜನರು ಭಯಭೀತರಾಗಿದ್ದಾರೆ.
ಚಡ್ಡಿ ಗ್ಯಾಂಗ್ ಕರಾಮತ್ತು ವಿಲ್ಲಾ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಕೈಯಲ್ಲಿ ಹರಿತವಾದ ಆಯುಧಗಳನ್ನಿಟ್ಟುಕೊಂಡು ಓಡಾಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆಯೂ ಕೆಲವು ಬಾರಿ ಈ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿತ್ತು. ಇನ್ನು ಈ ಬಗ್ಗೆ ಸ್ಥಳೀಯ ನಿವಾಸಿಗಳು ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಚಡ್ಡಿ ಗ್ಯಾಂಗ್ ಎಷ್ಟು ಖತರ್ನಾಕ್ ಅಂದ್ರೆ ಫೀಲ್ಡಿಗೆ ಇಳಿದ್ರೆ ಮುಗೀತು ಶರವೇಗದಲ್ಲಿ ಬಂದು ದೋಚಿ ಪರಾರಿಯಾಗುತ್ತದೆ. ಈ ಬಗ್ಗೆ ಜನರು ಎಚ್ಚರದಿಂದ ಇರುವುದು ಒಳಿತು.