Zameer Ahmed: ಶಾಸಕರ ಕಚೇರಿಯಲ್ಲಿ ಗಣೇಶೋತ್ಸವಕ್ಕೆ ಮುಂದಾದ ಜಮೀರ್ ಅಹ್ಮದ್; ಚುನಾವಣೆ ತಂತ್ರ ಎಂದ ಸ್ಥಳೀಯರು

ಜಮೀರ್ ಅಹ್ಮದ್ ಇಷ್ಟು ದಿನ ಕ್ಷೇತ್ರದ ಜನರನ್ನ ಗೂಬೆ ಮಾಡಿದ್ದಾರೆ. ಇನ್ಮುಂದೆ ಕ್ಷೇತ್ರದ ಜನರೇ ಜಮೀರ್​ ಅವರನ್ನು ಗೂಬೆ ಮಾಡುವ ಸಮಯ ಬಂದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Zameer Ahmed: ಶಾಸಕರ ಕಚೇರಿಯಲ್ಲಿ ಗಣೇಶೋತ್ಸವಕ್ಕೆ ಮುಂದಾದ ಜಮೀರ್ ಅಹ್ಮದ್; ಚುನಾವಣೆ ತಂತ್ರ ಎಂದ ಸ್ಥಳೀಯರು
ಜಮೀರ್ ಅಹ್ಮದ್ ಖಾನ್ ಆಯೋಜಿಸಿರುವ ಗಣೇಶೋತ್ಸವ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 05, 2022 | 7:41 AM

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ (Chamarajpet MLA Zameer Ahmed) ಈ ಬಾರಿ ಗಣೇಶೋತ್ಸವ ಆಚರಿಸಲು ಮುಂದಾಗಿರುವುದಕ್ಕೆ ಸ್ಥಳೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಮತಬೇಟೆಗಾಗಿಯೇ ಗಣೇಶೋತ್ಸವ ನಡೆಸಲು ಮುಂದಾಗಿದ್ದಾರೆ. ಸತತ 4 ಬಾರಿ ಶಾಸಕರಾಗಿದ್ದಾಗಲೂ ಅವರು ಒಂದು ಬಾರಿಯೂ ಗಣೇಶೋತ್ಸವ ಮಾಡಿಲ್ಲ. ಈಗ ಗಣೇಶೋತ್ಸವ ಮಾಡಲು ಮುಂದಾಗಿದ್ದಾರೆ. ಇದು ಹೊಸ ನಾಟಕ ಎಂದು ಹಲವರು ಆಕ್ಷೇಪಿಸಿದ್ದಾರೆ.

ಜಮೀರ್ ಅಹ್ಮದ್ ಇಷ್ಟು ದಿನ ಕ್ಷೇತ್ರದ ಜನರನ್ನ ಗೂಬೆ ಮಾಡಿದ್ದಾರೆ. ಇನ್ಮುಂದೆ ಕ್ಷೇತ್ರದ ಜನರೇ ಜಮೀರ್​ ಅವರನ್ನು ಗೂಬೆ ಮಾಡುವ ಸಮಯ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನ ಪಾಠ ಕಲಿಸುತ್ತಾರೆ. ಗಣೇಶನ ಮುಖವಾಡ ಧರಿಸಿ ಕ್ಷೇತ್ರದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಸಮಯ ಬಂದಾಗ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಜಮೀರ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೇಶೋತ್ಸವದ ಮೂಲಕ ಶಾಸಕ ಜಮೀರ್ ಅಹ್ಮದ್ ಹಿಂದೂ ಸಂಘಟನೆಗಳ ಮನವೊಲಿಕೆಗೆ ಮುಂದಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶನನ್ನು ಕೂರಿಸುವ ವಿಚಾರದಲ್ಲಿ ಜಮೀರ್ ಇಟ್ಟ ಹಲವು ಹೆಜ್ಜೆಗಳು ಜನರಿಗೆ ಇಷ್ಟವಾಗಿರಲಿಲ್ಲ. ಮತದಾರರ ಮನಸ್ಸಿನಲ್ಲಿ ಮೂಡಿರುವ ಬಿರುಕಿಗೆ ತೇಪೆ ಹಾಕಲು ಜಮೀರ್ ಅವರು ತಮ್ಮ ಕಚೇರಿಯಲ್ಲಿಯೇ ಗಣೇನ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

ಇಂದು (ಸೆಪ್ಟೆಂಬರ್ 5) ಬೆಳಿಗ್ಗೆ 9:15ರಿಂದ 10 ಗಂಟೆಯ ಅವಧಿಯಲ್ಲಿ ಚಾಮರಾಜಪೇಟೆ ವರ್ತಕರ ಬೀದಿಯಲ್ಲಿರುವ ಶಾಸಕ ಜಮೀರ್ ಅಹ್ಮದ್ ಕಚೇರಿಯಲ್ಲಿಯೇ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಪೂಜೆ ನಡೆಯುತ್ತಿದೆ. ಇಂದು ಸಂಜೆ 4 ಗಂಟೆಗೆ ಬಾಣಬಿರುಸುಗಳ ಅದ್ಧೂರಿ ಮರವಣಿಗೆಯೊಂದಿಗೆ ವಿದ್ಯಾಗಣಪತಿ ಮೂರ್ತಿಯ ವಿಸರ್ಜನೆ ನಡೆಯಲಿದೆ. ಅಖಿಲ ಕರ್ನಾಟಕ ಜಿ.ಝೆಡ್.ಜಮೀರ್ ಅಹ್ಮದ್ ಖಾನ್ ಒಕ್ಕೂಟವು ಗಣೇಶೋತ್ಸವ ಆಯೋಜಿಸಿದೆ.

ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ಮತ್ತೆ ತಾರಕಕ್ಕೇರಿದ ಗಣೇಶೋತ್ಸವ ಗದ್ದಲ: ಮೆರವಣಿಗೆ ವಿಚಾರವಾಗಿ ಸಮಿತಿ, ಪೊಲೀಸರ ನಡುವೆ ಸಮರ

Published On - 7:41 am, Mon, 5 September 22