ಬೆಂಗಳೂರು: ನಗರದ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ (5-04-22) ಕೊಲೆಯೊಂದು ನಡೆದಿತ್ತು. ಮಧ್ಯರಾತ್ರಿ ದಲಿತ ಯುವಕ ಚಂದ್ರು (22) ಹತ್ಯೆಯಾಗಿತ್ತು. ಈ ಪ್ರಕರಣ ಈಗ ಮತೀಯ ತಿರುವು ಪಡೆದುಕೊಂಡಿದೆ. ಉರ್ದು ಮಾತನಾಡಲು ನಿರಾಕರಿಸಿದ್ದಕ್ಕೆ ಚಂದ್ರು ಕೊಲೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಚಂದ್ರು ಎಂಬಾತನನ್ನು ಹತ್ಯೆ ಮಾಡಿದ್ದಾರೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಲ್ಲ ಎಂದಿದ್ದಕ್ಕೆ ಹತ್ಯೆ ಮಾಡಲಾಗಿದೆ. ಚೂರಿಯಿಂದ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಕೊಲೆ ಪ್ರಕರಣದಲ್ಲಿ ಕೆಲ ಆರೋಪಿಗಳ ಬಂಧನ ಮಾಡಲಾಗಿದ್ದು ಚಂದ್ರು ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಸ್ವತಃ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಮೊದಲು ಗಾಡಿಯೊಂದು ಟಚ್ ಆದ ವಿಚಾರಕ್ಕೆ ಗಲಾಟೆ ಆಗಿದೆ. ಗಲಾಟೆಯ ಬಳಿಕ ಏಕಾಏಕಿ ಚುಚ್ಚಿ ಹತ್ಯೆ ಮಾಡಿದ್ದಾರೆ. ಇದೊಂದು ಅಮಾನುಷ ಘಟನೆ. ಚಂದ್ರು ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಮೃತ ಚಂದ್ರು ದಲಿತ ಯುವಕ ಎಂಬ ಮಾಹಿತಿ ಇದೆ ಎಂದು ಟಿವಿ9ಗೆ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಜೆ.ಜೆ ನಗರದಲ್ಲಿ ಬೈಕ್ ಟಚ್ ವಿಚಾರಕ್ಕೆ ಚಂದ್ರು (22) ಎಂಬಾತನ ಹತ್ಯೆ ನಡೆದಿದೆ ಎಂಬ ಬಗ್ಗೆಯೂ ಮಾಹಿತಿ ಇದೆ. ತಡರಾತ್ರಿ ಸ್ನೇಹಿತನ ಹುಟ್ಟುಹಬ್ಬದ ಪ್ರಯುಕ್ತ ಊಟಕ್ಕೆ ತೆರಳಿದ್ದಾಗ ಚಂದ್ರುನನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿ ಆಗಿದ್ದಾರೆ ಎಂದು ಹೇಳಲಾಗಿದೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು; ಮಾಡಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳು ಗೃಹ ಸಚಿವರಿಗೆ ಹೀಗೆ ಮಾಹಿತಿಯನ್ನೇ ನೀಡಿಲ್ಲ; ಚಂದ್ರು ಕೊಲೆ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ಯುಟರ್ನ್!
ಆರಗ ಜ್ಞಾನೇಂದ್ರ ಒಬ್ಬ ಅಸಮರ್ಥ ಗೃಹ ಸಚಿವ: ಸಿದ್ದರಾಮಯ್ಯ ಕಿಡಿ
ಬೆಂಗಳೂರಿನಲ್ಲಿ ಯುವಕ ಚಂದ್ರು ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿ ಎಂದು ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಉರ್ದು ಮಾತನಾಡದಿದ್ದಕ್ಕೆ ಕೊಲೆ ಮಾಡಿದ್ದಾಗಿ ಆರಗ ಜ್ಞಾನೇಂದ್ರ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಆರಗ ಜ್ಞಾನೇಂದ್ರ ಒಬ್ಬ ಅಸಮರ್ಥ ಗೃಹ ಸಚಿವರು. ಹರ್ಷ ಕೊಲೆ ಪ್ರಕರಣದಲ್ಲೂ ಇದೇ ರೀತಿ ಹೇಳಿಕೆ ನೀಡಿದ್ದರು. ಹರ್ಷ ವಿರುದ್ಧ ಕ್ರಿಮಿನಲ್ ಕೇಸ್ ಇದೆ ಎಂದಿದ್ದರು. ನಂತರ ಕ್ರಿಮಿನಲ್ ಕೇಸ್ ಇಲ್ಲ ಎಂದು ಹೇಳಿದ್ದಾರೆ. ಆರಗ ಜ್ಞಾನೇಂದ್ರಗೆ ಇಲಾಖೆ ನಿಭಾಯಿಸಲು ಬರ್ತಿಲ್ಲ. ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಹಾಗೇ ಹೇಳಿಕೆ ನೀಡಿದ್ದರು. ಆಗ ಗೃಹ ಸಚಿವರು ಏನು ಹೇಳಿದ್ದರೆಂದು ಗೊತ್ತಿದೆ. ಇಂತಹವರು ಗೃಹ ಸಚಿವರಾಗಿದ್ದು ನಮ್ಮ ದೌರ್ಭಾಗ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೈಕ್ ಅಡ್ಡ ಬಂತು ಎಂಬ ವಿಚಾರಕ್ಕೆ ಗಲಾಟೆಯಾಗಿ ಹತ್ಯೆ ನಡೆದಿದೆ: ಜಮೀರ್ ಅಹ್ಮದ್
ಬೆಂಗಳೂರಿನಲ್ಲಿ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, ಬೈಕ್ ಅಡ್ಡ ಬಂತು ಎಂಬ ವಿಚಾರಕ್ಕೆ ಗಲಾಟೆಯಾಗಿ ಹತ್ಯೆ ನಡೆದಿದೆ. ಶೋಯೆಬ್ ಎಂಬಾತ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಮೃತ ಚಂದ್ರು ತಮಿಳುನಾಡು ಮೂಲದವರು. ಮೃತನ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ ನೀಡುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಈ ಗಲಾಟೆಗೆ ಇತರರು ಸೇರಿಕೊಂಡಿರುತ್ತಾರೆ.ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ.ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದು,ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ & ತನಿಖೆ ಮುಂದುವರೆದಿದೆ…2/2
— Kamal Pant, IPS. ಪೊಲೀಸ್ ಆಯುಕ್ತರು, ಬೆಂಗಳೂರು ನಗರ. (@CPBlr) April 6, 2022
ಘಟನೆ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ
ಈ ಗಲಾಟೆಗೆ ಇತರರು ಸೇರಿಕೊಂಡಿರುತ್ತಾರೆ. ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಬೆಂಗಳೂರು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಚಂದ್ರು ಜತೆಗಿದ್ದ ಸ್ನೇಹಿತ ಸೈಮನ್ ರಾಜ್ ದೂರಿನ ಮೇರೆಗೆ FIR; ಅಸಲಿಗೆ ಎಫ್ಐಆರ್ನಲ್ಲಿ ಏನಿದೆ ವಿವರ
ಬೆಂಗಳೂರಿನ ಜೆ.ಜೆ.ನಗರದಲ್ಲಿ ಯುವಕ ಚಂದ್ರು ಕೊಲೆ ಪ್ರಕರಣವು ಚಂದ್ರು ಜತೆಗಿದ್ದ ಸ್ನೇಹಿತ ಸೈಮನ್ ರಾಜ್ ದೂರಿನ ಮೇರೆಗೆ FIR ದಾಖಲು ಮಾಡಲಾಗಿದೆ. ಜಗಜೀವನರಾಮ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಚಂದ್ರು ಸ್ನೇಹಿತ ಸೈಮನ್ ರಾಜ್ ದೂರಿನ ಪ್ರಮುಖ ಅಂಶಗಳು ಹೀಗಿದೆ. ಏಪ್ರಿಲ್ 4 ರಂದು ಸ್ನೇಹಿತರು ಸೈಮನ್ ರಾಜ್ ಬರ್ತ್ಡೇ ಆಚರಿಸಿದ್ದರು. ರಾತ್ರಿ 12 ರ ಸುಮಾರಿಗೆ ಮನೆ ಮುಂದೆ ಕೇಕ್ ಕತ್ತರಿಸಿ ಆಚರಣೆ ಮಾಡಲಾಗಿತ್ತು. ಚಿಕನ್ ರೋಲ್ ಕೊಡಿಸುವಂತೆ ಚಂದ್ರು ಸೈಮನ್ ರಾಜ್ಗೆ ಕೇಳಿದ್ದ. ಚಿಕನ್ ರೋಲ್ ತರಲೆಂದು ಹೋಂಡಾ ಆಕ್ಟಿವಾದಲ್ಲಿ ಅವರು ತೆರಳಿದ್ದರು.
ಚಾಮರಾಜಪೇಟೆ ಸುತ್ತಮುತ್ತ ಸೈಮನ್ ರಾಜ್, ಚಂದ್ರು ಸುತ್ತಾಡಿದ್ದರು. ರಂಜಾನ್ ಹಿನ್ನೆಲೆ ಗೋರಿಪಾಳ್ಯದಲ್ಲಿ ಸಿಗುತ್ತೆ ಎಂದು ಬಂದಿದ್ದರು. ರಾತ್ರಿ 2.15 ರ ಸುಮಾರಿಗೆ ಹಳೇಗುಡ್ಡದಹಳ್ಳಿಗೆ ಬಂದಿದ್ದರು. ಈ ವೇಳೆ 9ನೇ ಮುಖ್ಯರಸ್ತೆಯಲ್ಲಿ ಬೈಕ್ಗೆ ಇನ್ನೊಂದು ಬೈಕ್ ಡಿಕ್ಕಿಯಾಗಿತ್ತು. ಬೈಕ್ ಡಿಕ್ಕಿ ಹೊಡೆದಿದ್ದಕ್ಕೆ ನಾವು ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದೆವು. ಕೇಳಲು ನೀವ್ಯಾರು ಎಂದು ಅವಾಚ್ಯಶಬ್ದಗಳಿಂದ ಶಾಹಿದ್ ನಿಂದಿಸಿದ್ದಾರೆ. ನಾನು ಇದೇ ಏರಿಯಾದವನು, ನೀನು ಏನ್ ಮಾಡಿಕೊಳ್ಳುತ್ತೀಯಾ? ಎಂದು ಜನರನ್ನು ಸೇರಿಸಿ ಗಲಾಟೆ ಮಾಡಿದ ಶಾಹಿದ್ ತಳ್ಳಾಡಿದ್ದ. ಏಕಾಏಕಿ ಮಾರಕಾಸ್ತ್ರದಿಂದ ಶಾಹಿದ್, ಇತರರು ಹಲ್ಲೆ ನಡೆಸಿದ್ದರು.
ಸೈಮನ್ ತಪ್ಪಿಸಿಕೊಂಡಿದ್ದ, ಚಂದ್ರು ತೊಡೆಗೆ ಇರಿದಿದ್ದ ಶಾಹಿದ್, ಬಳಿಕ ತೀವ್ರ ರಕ್ತಸ್ರಾವ ಆಗೋದನ್ನು ನೋಡಿ ಶಾಹಿದ್ ಗ್ಯಾಂಗ್ ಪರಾರಿ ಆಗಿತ್ತು. ಬಳಿಕ ಚಂದ್ರುವನ್ನು ಸೈಮನ್ ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ಚಂದ್ರು ಸಾವನ್ನಪ್ಪಿದ್ದಾರೆ. ಚಂದ್ರು ಮೃತಪಟ್ಟ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಚಂದ್ರುಗೆ ಇರಿದು ಕೊಂದ ಶಾಹಿದ್, ಮತ್ತಿತರರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕಾನೂನು ರೀತಿ ಕ್ರಮಕೈಗೊಳ್ಳುವಂತೆ ಸೈಮನ್ ರಾಜ್ ದೂರು ನೀಡಿದ್ದಾರೆ. FIR ದಾಖಲಿಸಿ ಜೆ.ಜೆ.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆಜಾನ್ಗೆ ಮಾತ್ರ ಶಬ್ದ ಮಿತಿ ಇಲ್ಲ, ಬಸ್ಗೂ ಶಬ್ದ ಮಿತಿಯ ಆದೇಶವಿದೆ; ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಇದನ್ನೂ ಓದಿ: ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು ನಾಳೆ ದೇಶದಲ್ಲೂ ಆಗಬಹುದು; ಬುದ್ಧಿಜೀವಿಗಳು ಮೌನವಾಗಿದ್ದಾರೆ -ಬಿಜೆಪಿ ನಾಯಕ ಸಿ.ಟಿ.ರವಿ
Published On - 11:26 am, Wed, 6 April 22