ಕೆರೆ ನುಂಗಿದವರನ್ನು ಸುಮ್ಮನೆ ಬಿಡಲ್ಲ, ತನಿಖೆ ಮಾಡಿಸಿ ಬಯಲಿಗೆ ತರ್ತೀನಿ: ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಕೆರೆಗಳನ್ನು ಯಾವ ರೀತಿ ಒತ್ತುವರಿ ಮಾಡಲಾಯಿತು? ಹೇಗೆ ಮುಚ್ಚಲಾಯಿತು? ಅನುಮತಿ ಕೊಟ್ಟವರು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಸದನದಲ್ಲಿ ಅವರು ಘೋಷಿಸಿದರು.
ಬೆಂಗಳೂರು: ಕೆರೆ ಒತ್ತುವರಿ ಮಾಡಿದವರು ಯಾರು? ಯಾವ ಅವಧಿಯಲ್ಲಿ ಎಷ್ಟೆಲ್ಲಾ ಕೆರೆಗಳ ಒತ್ತುವರಿಯಾಯಿತು ಎಂಬ ಅಂಶದ ಬಗ್ಗೆ ಸಮಗ್ರ ತನಿಖೆ ನಡೆಸಲು ಸರ್ಕಾರ ಬದ್ಧವಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಘೋಷಿಸಿದರು. ತನಿಖೆಯ ಸ್ವರೂಪ ಹೇಗಿರುತ್ತದೆ ಎಂಬುದರ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಕೆರೆಗಳನ್ನು ಯಾವ ರೀತಿ ಒತ್ತುವರಿ ಮಾಡಲಾಯಿತು? ಹೇಗೆ ಮುಚ್ಚಲಾಯಿತು? ಅನುಮತಿ ಕೊಟ್ಟವರು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಸದನದಲ್ಲಿ ಅವರು ಘೋಷಿಸಿದರು.
ಕರ್ನಾಟಕದ ಕೆರೆಗಳ ಸ್ಥಿತಿಗತಿ ಕುರಿತು ಸಚಿವ ಆರ್.ಅಶೋಕ್ ನೀಡುತ್ತಿದ್ದ ಪ್ರತಿಕ್ರಿಯೆಗೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಕೆರೆ ಎಂದಿಗೂ ತಮ್ಮ ಮೂಲ ಸ್ವರೂಪ ಕಳೆದುಕೊಳ್ಳುವುದಿಲ್ಲ. ನೀವು ಕೆರೆಗಳನ್ನು ಮುಚ್ಚಿಹಾಕುವ ಕೆಲಸ ಮಾಡಿದ್ದೀರಿ ಎಂದು ನೇರ ಆರೋಪ ಮಾಡಿದರು.
ಕೆರೆಗಳನ್ನು ಮಾರ್ಪಾಡು ಮಾಡುವ ನಿರ್ಧಾರವು 2015ಕ್ಕೂ ಹಿಂದೆಯೇ ಆಗಿತ್ತು. ಸ್ವರೂಪ ಕಳೆದುಕೊಂಡು ಮನೆಗಳಾಗಿರುವ ಕೆರೆಗಳನ್ನು ಮಾರ್ಪಡಿಸುವ ಚರ್ಚೆಯೂ ಆಗಿತ್ತು. ಆದರೆ ಸ್ವರೂಪ ಇರುವ ಕೆರೆಗಳನ್ನು ಬದಲಾವಣೆ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಜನವಸತಿ, ಬಸ್ ನಿಲ್ದಾಣ ಆಗಿರುವ ಕೆರೆಗಳನ್ನು ಮತ್ತೆ ಕೆರೆ ಮಾಡ್ತೀರಾ? ಬೆಂಗಳೂರು ಬಸ್ ನಿಲ್ದಾಣ ಆಗಿರುವ ಕೆರೆ ಮತ್ತೆ ಬದಲಾವಣೆ ಆಗುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್, ಕೆರೆ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲಾ ಸರಕಾರಗಳಿಗೂ ಸೇರುತ್ತವೆ. ಯಾರೋ ಒಬ್ಬರಿಂದ ಕೆರೆಗಳು ಒತ್ತುವರಿಯಾಗಿವೆ ಎಂದು ದುರುದ್ದೇಶದಿಂದ ಆರೋಪ ಮಾಡುವುದು ನಿಲ್ಲಬೇಕಿದೆ. ನಮ್ಮ ಕಾಲದಲ್ಲಿ ಕೆರೆ ಮುಚ್ಚಿದ್ದರೆ ತನಿಖೆ ಮಾಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾವು ವೈಯಕ್ತಿಕವಾಗಿ ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ನೀವು ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಆದರೆ ಕೆರೆಗಳನ್ನು ಮುಚ್ಚಿರುವುದು ಸತ್ಯ ತಾನೆ? ವಿಸ್ತೃತ ತನಿಖೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದರು.
ಸಿದ್ದರಾಮಯ್ಯ ಅವಧಿಯ ಕೆರೆ ಒತ್ತುವರಿ ಬಗ್ಗೆ ಪ್ರಸ್ತಾಪಿಸಿದ ಅವರು, ಶಿವಮೊಗ್ಗದ ಕೆರೆ ವಿಚಾರದ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿತ್ತು. ದರೆದ್ರೆ ಕೆರೆ ಒತ್ತುವರಿ ಕಾರ್ಯಗತ ಆಗಲಿಲ್ಲ ಎಂದರು. ಮುಖ್ಯಮಂತ್ರಿ ಬೊಮ್ಮಾಯಿ ಮಾತಿಗೆ ಆಕ್ಷೇಪಿಸಿದ ಸಿದ್ದರಾಮಯ್ಯ, ನೀವು ಹೇಳಿದ್ದು ಸರಿಯಾಗಿದೆ. ಆ ವಿಚಾರ ಸಚಿವ ಸಂಪುಟದಲ್ಲಿ ಚರ್ಚೆ ಆಗಿತ್ತು. ಆದರೆ ನಮ್ಮ ಸರ್ಕಾರ ಒತ್ತುವರಿ ಮಾಡಲಿಲ್ಲ ಎಂದರು. ಈ ವೇಳೆ ಸಿದ್ದರಾಮಯ್ಯ ಮತ್ತು ಸಿಎಂ ನಡುವೆ ಜಟಾಪಟಿ ನಡೆಯಿತು.
ಕುಂಬಳಕಾಯಿ ಕಳ್ಳ ಅಂದ್ರೆ…
2015ರಲ್ಲಿ ಕಂದಾಯ ಇಲಾಖೆಯು ಕೆರೆಗಳ ಪುನಶ್ಚೇತನಕ್ಕೆ ಕ್ರಮ ಜರುಗಿಸಲು ಆದೇಶ ಹೊರಡಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ ಎಂದು ಬೊಮ್ಮಾಯಿ ಹೇಳಿದರು. ಮಧ್ಯಪ್ರವೇಶ ಮಾಡಿದ ಶಾಸಕ ಕೆ.ಜೆ. ಜಾರ್ಜ್ ಜನರ ಆಕ್ಷೇಪದ ಕಾರಣಕ್ಕೆ ಕೆರೆಗಳ ಪುನಶ್ಚೇತನ ಪ್ರಕ್ರಿಯೆ ನಿಂತಿತ್ತು ಎಂದರು. ತನಿಖೆ ಮಾಡಿಸಿ ಮತ್ತು ಮುಂದೆ ಹೀಗಾಗದಂತೆ ಕ್ರಮ ಜರುಗಿಸಿ ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು. ಮಧ್ಯ ಪ್ರವೇಶ ಮಾಡಲು ಮತ್ತೆ ಜಾರ್ಜ್ ಮುಂದಾದಾಗ, ನೀವ್ಯಾಕೆ ಮಧ್ಯ ಎದ್ದು ನಿಲ್ತೀರಿ? ಕುಂಬಳಕಾಯಿ ಕಳ್ಳ ಎಂದರೆ ನೀವ್ಯಾಕೆ ಹೆಗೆಲು ಮುಟ್ಟಿ ಕೊಳ್ತೀರಿ ಎಂದು ಕಾಲೆಳೆದರು. ‘ಕೆರೆ ಒತ್ತುವರಿಯಲ್ಲಿ ಜಾರ್ಜ್ ಇಲ್ಲ ಬಿಡಿ, ಸಿದ್ಧರಾಮಯ್ಯ ಅಂತೂ ಮೊದಲೇ ಇಲ್ಲ ಬಿಡಿ’ ಎಂದ ಸಚಿವ ಅಶೋಕ್ ನಗೆಚಾಟಿ ಬೀಸಿದರು.
ಮೋರ್ ಮನಿ, ಲೆಸ್ ಮನಿ
ಸಿದ್ದರಾಮಯ್ಯ ಅವರಿಗೆ ವಿರೋಧಿಗಳು ಜಾಸ್ತಿ ಎಂದು ಅಶೋಕ್ ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ‘ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮೀಸ್, ನೋ ಸ್ಟ್ರಾಂಗ್, ನೋ ಎನಿಮೀಸ್’ ಎಂದರು. ಇದಕ್ಕೆ ಅಶೋಕ್, ‘ಹೌದೌದು, ಮೋರ್ ಮನಿ ಮೋರ್ ಪ್ರಾಬ್ಲಂ, ಲೆಸ್ ಮನಿ ಲೆಸ್ ಪ್ರಾಬ್ಲಂ’ ಎಂದು ಮತ್ತೊಂದು ವ್ಯಾಖ್ಯಾನ ನೀಡಿದರು.
‘90ರ ದಶಕದಿಂದ ನಾನು ಸಚಿವನಾಗಿದ್ದೇನೆ. ನನ್ನ ಕಾಲದಲ್ಲಿ ಯಾವ ಕೆರೆ ಮುಚ್ಚಿದೆ ಮಾಹಿತಿ ಕೊಡಿ’ ಎಂದು ಶಾಸಕ ಕೆ.ಜೆ.ಜಾರ್ಜ್ ಆಗ್ರಹಿಸಿದರು. ಪ್ರತಿಕ್ರಿಯಿಸಿ ಸಿಎಂ ಬೊಮ್ಮಾಯಿ, ಎಲ್ಲವನ್ನೂ ಮೈಮೇಲೆ ಎಳ್ಕೋಬೇಡಿ, ನಿಮ್ಮ ಒಳ್ಳೆಯದಕ್ಕೆ ಹೇಳ್ತಿದ್ದೀನಿ. ಕೆರೆಗಳನ್ನು ಮುಚ್ಚಲು ಆದೇಶ ಬಂದಿದ್ದು, ನಕ್ಷೆಯಿಂದ ಕೆರೆಗಳನ್ನು ತೆಗೆಯಲು ಹೇಳಿದ್ದು, ಬಳಿಕ ಆದೇಶ ವಾಪಸ್ಸು ಪಡೆದಿದ್ದು, ಎಲ್ಲಾ ನನಗೆ ಗೊತ್ತಿದೆ. ಕೆರೆಗಳು ಈಗ ಮುಚ್ಚಿ ಹೋಗಿವೆ. ಅದರ ಬಗ್ಗೆ ಚರ್ಚೆ ಮಾಡೋಣ’ ಎಂದರು.
ಬೆಂಗಳೂರಿನಲ್ಲಿ ಪ್ರವಾಹದ ಅನಾಹುತ ಕುರಿತು ವಿವರಣೆ ನೀಡಿದ ಅಶೋಕ್, ಹಿಂದೆಯೂ ಸಹ ಬೆಂಗಳೂರಿನಲ್ಲಿ ಬಹಳ ಸಲ ಪ್ರವಾಹ ಆಗಿದೆ. ಐಟಿ-ಬಿಟಿ ಬಂದಿರುವುದರಿಂದ ಬೆಂಗಳೂರು ಬೆಳೆದಿದೆ. ಬ್ರಾಂಡ್ ಬೆಂಗಳೂರು ಅಂತ ಒಂದು ಹೆಸರು ಸಹ ಇದೆ. 9 ವಲಯಗಳಲ್ಲಿ 2 ವಲಯಗಳಲ್ಲಿ ಮಾತ್ರ ಹಾನಿಯಾಗಿದೆ. ಮಹದೇವಪುರ ಮತ್ತು ಬೊಮ್ಮನಹಳ್ಳಿಯಲ್ಲಿ ಆಗಿರುವ ಹಾನಿಗೆ ಮಾನವ ನಿರ್ಮಿತ ತಪ್ಪುಗಳೇ ಕಾರಣ. ಈ ರೀತಿ ಹಾನಿಯಾಗುವುದನ್ನು ತಡೆಯಲು ಹಿಂದಿನ ಸರ್ಕಾರಗಳು ಮುಂದಾಗಬೇಕಿತ್ತು. ಬೆಂಗಳೂರಿನಲ್ಲಿ 42 ಕೆರೆಗಳನ್ನು ಮುಚ್ಚಿ ಹಾಕಲಾಗಿದೆ ಎಂದರು.
ಯಾವ ಕೆರೆಗಳ ಒತ್ತುವರಿ
ವಿಧಾನಸಭೆಯಲ್ಲಿ ಬೆಂಗಳೂರಿನ ಕೆರೆಗಳ ಒತ್ತುವರಿ ಪಟ್ಟಿಯನ್ನು ಸಚಿವ ಆರ್.ಅಶೋಕ್ ಬಿಡುಗಡೆ ಮಾಡಿದರು. 1977ರಲ್ಲಿ ದೊಮ್ಮಲೂರು, 1978ರಲ್ಲಿ ಹೆಚ್ಎಎಲ್ 3ನೇ ಹಂತ, 1986ರಲ್ಲಿ ಹೆಚ್ಎಸ್ಆರ್ ಬಡಾವಣೆ, 1965ರಲ್ಲಿ ಕೋರಮಂಗಲ, 2001ರಲ್ಲಿ ನಾಗರಬಾವಿ, 1963ರಲ್ಲಿ ರಾಜಾಜಿನಗರ, 2002ರಲ್ಲಿ ವಿಶ್ವೇಶ್ವರಯ್ಯ ಬಡಾವಣೆ, 2001ರಲ್ಲಿ ಆರ್.ವಿ.ಎರಡನೇ ಹಂತ, 2000ರಲ್ಲಿ ಈಸ್ಟ್ ಆಫ್ ಎನ್ಜಿಎಫ್, 2000ರಲ್ಲಿ ಹೆಚ್ಆರ್ಬಿಆರ್ ಬಳಿ, 1986ರಲ್ಲಿ ಹೆಚ್ಆರ್ಬಿಆರ್ ಲೇಔಟ್ನ 1ನೇ ಹಂತ, 2000ರಲ್ಲಿ ಹೆಚ್ಆರ್ಬಿಆರ್ ಲೇಔಟ್ನ 2ನೇ ಬ್ಲಾಕ್, 1986ರಲ್ಲಿ ಹೆಚ್ಆರ್ಬಿಆರ್ 1ನೇ ಹಂತದ 5ನೇ ಬ್ಲಾಕ್, 1973ರಲ್ಲಿ ಡಾಲರ್ಸ್ ಕಾಲೋನಿ ಸ್ಕೀಮ್, 1995ರಲ್ಲಿ ಬಿಟಿಎಂ ಬಡಾವಣೆ, 1975ರಲ್ಲಿ ಬನಶಂಕರಿ ವ್ಯಾಪ್ತಿಯ ಕೆರೆ ಜಾಗ ಒತ್ತುವರಿ ಕುರಿತು ಆರ್.ಅಶೋಕ್ ಮಾಹಿತಿ ನೀಡಿದರು.