ಇದು ಕಾಂಗ್ರೆಸ್ ಟೂಲ್ಕಿಟ್ನ ಮುಂದುವರಿಕೆ: ಪತ್ರಕರ್ತರಿಗೆ ಲಂಚ ಕೊಟ್ಟ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
‘ಕಾಂಗ್ರೆಸ್ ಪಕ್ಷ ಸುಳ್ಳು ಸೃಷ್ಟಿಸುವ ಕೆಲಸ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಿಂದಲೇ ಪತ್ರಕರ್ತರಿಗೆ ನಗದು ರೂಪದಲ್ಲಿ ಲಂಚ ನೀಡಲಾಗಿದೆ ಎಂದು ಕಾಂಗ್ರೆಸ್ ಪಕ್ಷವು ಮಾಡಿರುವ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ತಿರುಗೇಟು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಕಾಂಗ್ರೆಸ್ ಪಕ್ಷ ಸುಳ್ಳು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಪತ್ರಕರ್ತರಿಗೆ ಗಿಫ್ಟ್ ಕೊಡಿ ಎಂದು ನಾನು ಯಾರಿಗೂ ಸೂಚಿಸಿಲ್ಲ. ಇದು ಕಾಂಗ್ರೆಸ್ ಟೂಲ್ ಕಿಟ್ನ ಮುಂದುವರಿದ ಭಾಗ. ಕಾಂಗ್ರೆಸ್ ಅವಧಿಯಲ್ಲಿ ಐ ಫೋನ್, ಚಿನ್ನದ ನಾಣ್ಯ ನೀಡಿದ್ದರು. ಈಗ ಆರೋಪ ಮಾಡಲು ಕಾಂಗ್ರೆಸ್ಗೆ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.
ಪತ್ರಕರ್ತರಿಗೆ ಹಣ ನೀಡಿದ ಆರೋಪ ಹೊರಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಲೋಕಾಯುಕ್ತರ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ. ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ಸುರ್ಜೇವಾಲ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ನಾನು ನಾನು ಖಂಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಆರೋಪ
ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಸಹ ಪತ್ರಕರ್ತರಿಗೆ ಲಂಚ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಗಂಭೀರ ಆರೋಪ ಮಾಡಿದೆ. ಈ ಕುರಿತು ಟ್ವೀಟ್ ಮಾಡಿದ್ದ ಕಾಂಗ್ರೆಸ್, ‘ಸರ್ಕಾರದ ಲಂಚದ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರ್ಕಾರದ ಮಹಾ ಅಕ್ರಮ ಹೊರಬಿದ್ದಿದೆ. ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ ಈ ಬಾಕ್ಸ್‌ನಲ್ಲಿ? ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದು ಭ್ರಷ್ಟಾಚಾರದಿಂದ’ ಎಂದು ಕಾಂಗ್ರೆಸ್ ಹೇಳಿತ್ತು.
‘ಕಾಂಗ್ರೆಸ್ ಪಕ್ಷವು ಸುಳ್ಳು ಹೇಳುವುದರಲ್ಲಿ ನಿಷ್ಣಾತ’ ಎಂದು ಲಂಚದ ಆರೋಪ ತಳ್ಳಿ ಹಾಕಿದ್ದ ಬಿಜೆಪಿ, ‘ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಈ ರೀತಿಯ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಈ ಹಿಂದೆ ಐ ಫೋನ್ ನೀಡಿರುವ ಬಗ್ಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿರುವುದು ಕಾಂಗ್ರೆಸ್ಗೆ ಮರೆತಂತಿದೆ’ ಎಂದು ಬಿಜೆಪಿ ಟ್ವೀಟ್ನಲ್ಲಿಯೇ ತಿರುಗೇಟು ಕೊಟ್ಟಿತ್ತು.
ಇದನ್ನು ರಿಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪಿಎಸ್‌ಐ ಅಕ್ರಮ ನಡೆದಾಗ, ಬೋರ್ವೆಲ್ ಅಕ್ರಮ ನಡೆದಾಗ, ಕೆಪಿಟಿಸಿಎಲ್ ನೇಮಕಾತಿ ಅಕ್ರಮ ನಡೆದಾಗ, ಗಂಗಾ ಕಲ್ಯಾಣ ಹಗರಣ ನಡೆದಾಗ, ಕಾಂಗ್ರೆಸ್‌ನದ್ದು ಗಾಳಿಯಲ್ಲಿ ಗುಂಡು ಎಂದಿತ್ತು ಬಿಜೆಪಿ. ನಂತರ ಎಲ್ಲದರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ, ಇದೂ ಬಯಲಾಗಲಿದೆ. ಗುಂಡು ಗಾಳಿಯನ್ನೇ ಸೀಳಿಕೊಂಡು ಮುನ್ನುಗ್ಗುತ್ತದೆ ನೆನಪಿರಲಿ’ ಎಂದು ತಿರುಗೇಟು ಕೊಟ್ಟಿದೆ.
Published On - 10:59 am, Sun, 30 October 22