ರಾಜೂ ಗೌಡ ನೀನು ತಪ್ಪು ಮಾತಾಡಿದ್ಯಲೇ: ತಮ್ಮನ್ನು ಹೊಗಳಿದ ಶಾಸಕಗೆ ವೇದಿಕೆಯಲ್ಲೇ ಸಿಎಂ ಕ್ಲಾಸ್
ನಾನು ಶ್ರೀರಾಮಚಂದ್ರನ ಪಾದದ ದೂಳಿಗೂ ಸಮನಲ್ಲ. ದಯವಿಟ್ಟು ಹಾಗೆಲ್ಲ ಹೇಳಬೇಡಿ, ಶ್ರೀರಾಮನಿಗೆ ಯಾರೂ ಸರಿಸಾಟಿಯಲ್ಲ ಎಂದು ಬೊಮ್ಮಾಯಿ ತಿಳಿಸಿದರು.
ಬೆಂಗಳೂರು: ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಮಾಣ ಹೆಚ್ಚಾಗಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಶ್ರಮ ದೊಡ್ಡದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್ಟಿ ಸಮುದಾಯ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ಕುರಿತು ಪ್ರತಿಕ್ರಿಯಿಸಿ, ಇದು ಹೋರಾಟದ ಗೆಲುವು. ಶ್ರೀಗಳ ಆಶೀರ್ವಾದದಿಂದ ಸಿಕ್ಕ ಗೆಲುವು ಎಂದು ಬಣ್ಣಿಸಿದರು. ಮುಂಬರುವ ಸವಾಲು ಎದುರಿಸಲು ನಿಮ್ಮ ಆಶೀರ್ವಾದ ಬೇಕು. ನಿಮ್ಮ ಆಶೀರ್ವಾದ ಸಿಗುತ್ತೆ ಎಂಬ ವಿಶ್ವಾಸವಿದೆ. ವಿಧಾನಸೌಧದ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳಲು ಸಹಕಾರ ಇರಲಿ ಎಂದು ಮನವಿ ಮಾಡಿದರು.
ಸಚಿವ ಶ್ರೀರಾಮುಲು ಮತ್ತು ಶಾಸಕ ರಾಜೂ ಗೌಡ ನನಗೆ ಶ್ರೀರಾಮಚಂದ್ರ ಎಂದಿದ್ದಾರೆ. ಆದರೆ ನಾನು ಶ್ರೀರಾಮಚಂದ್ರನ ಪಾದದ ದೂಳಿಗೂ ಸಮನಲ್ಲ. ದಯವಿಟ್ಟು ಹಾಗೆಲ್ಲ ಹೇಳಬೇಡಿ, ಶ್ರೀರಾಮನಿಗೆ ಯಾರೂ ಸರಿಸಾಟಿಯಲ್ಲ. ನ್ಯಾಯ, ನೀತಿ ಮತ್ತು ನಡತೆಯಲ್ಲಿ ಶ್ರೀರಾಮಚಂದ್ರ ಒಬ್ಬನೇ, ಅವನು ದೊಡ್ಡ ಆದರ್ಶ ಪುರುಷ ಎಂದರು.
ತಮ್ಮನ್ನು ಹೊಗಳಿದ ಶಾಸಕ ರಾಜೂಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ನೀನು ತಪ್ಪು ಮಾತಾಡಿದ್ಯಲೇ ರಾಜೂಗೌಡ. ನೀನು ಯಾರಿಗೂ ಗುಲಾಮ ಆಗಬೇಕಿಲ್ಲ. ಬದುಕು ಕೊಟ್ಟ ದೈವಕ್ಕೆ ಮಾತ್ರ ಗುಲಾಮನಾಗಬೇಕು. ಅಪ್ಪಿತಪ್ಪಿ ಇನ್ನೊಮ್ಮೆ ಆ ಶಬ್ದ ಬಂದರೆ ನಿನ್ನ ನಾನು ಬಿಡಲ್ಲ ಎಂದು ನಗುತ್ತಲೇ ಎಚ್ಚರಿಸಿದರು. ಪಾಪ ಅವನು ಭಾವನಾತ್ಮಕವಾಗಿ ಹೇಳಿದ್ದಾನೆ. ಆದರೆ ಭಾವನಾತ್ಮಕತೆಯ ಜೊತೆಗೆ ವಾಸ್ತವಾಂಶ ಮರೆಯಬಾರದು. ಮೀಸಲಾತಿ ಕೊಟ್ಟಿದ್ದು ನಾನಲ್ಲ, ರಾಜ್ಯದ ಜನತೆ. ಇದರ ಹಿಂದೆ ಬುದ್ಧ, ಬಸವ, ವಾಲ್ಮೀಕಿ ಅವರಂಥ ಮಹಾತ್ಮರ ಶಕ್ತಿಯಿದೆ. ಕೇವಲ ಬಾಯಿ ಮಾತಿನಿಂದ ಯಾವುದೇ ಕೆಲಸ ಆಗುವುದಿಲ್ಲ. ಅದಕ್ಕೆ ಬದ್ಧತೆ ಇರಬೇಕು ಎಂದರು.
ದೇವರು ನನಗೆ ಎಷ್ಟು ಶಕ್ತಿಯನ್ನು ಕೊಟ್ಟಿದ್ದಾನೋ ಆ ಎಲ್ಲಾ ಶಕ್ತಿಯನ್ನು ಬಳಕೆ ಮಾಡಿ ವಿಧಾನಸೌಧದಿಂದ ಹೊರಡುವ ಆಜ್ಞೆ ಸಾಮಾಜಿಕ ನ್ಯಾಯದ ಪರವಾಗಿರುತ್ತದೆ ಎಂದು ಹೇಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳಲು ನಿಮ್ಮ ಆಶೀರ್ವಾದ, ಸಹಕಾರ ಇರಲಿ. ನಿಮ್ಮನ್ನೆಲ್ಲಾ ನೋಡಿ ಸ್ವಲ್ಪ ಭಾವನಾತ್ಮಕವಾಗಿದ್ದೇನೆ. ನಿಮ್ಮ ಪ್ರೀತಿ ನೋಡಿ ಸೋತು ಹೋಗಿದ್ದೇನೆ. ಇದು ನಿಮ್ಮ ಹೋರಾಟದ ಗೆಲುವು, ಸ್ವಾಮೀಜಿಗಳ ಆಶೀರ್ವಾದದ ಗೆಲುವು ಎಂದು ನುಡಿದರು. ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುತ್ತೇವೆ. ವಾಲ್ಮೀಕಿ ಸಮಾಜಕ್ಕೆ ಏನು ಮಾಡಬೇಕು ಅದನ್ನು ಮಾಡಲು ನಾವು ಬದ್ಧ ಎಂದರು.
ನಿಧಾನಗತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಾವು ಕುಳಿತಲ್ಲಿಂದ ಎದ್ದು ನೇರವಾಗಿ ನಿರೂಪಕರ ಬಳಿ ತೆರಳಿದರು. ನೇರವಾಗಿ ಕಾರ್ಯಕ್ರಮ ಶುರು ಮಾಡಿ, ನಿಮ್ಮ ಸನ್ಮಾನ ಗಿನ್ಮಾನ ಎಲ್ಲಾ ಆಮೇಲೆ ಇಟ್ಟುಕೊಳ್ಳಿ, ಜನ ಕಾಯುತ್ತಿದ್ದಾರೆ. ಸಿಎಂ ಹೇಳಿದ ಬಳಿಕ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಪ್ರಾಸ್ತಾವಿಕ ಭಾಷಣ ಆರಂಭಿಸಿದರು. ಇದು ವಾಲ್ಮೀಕಿ ಜಯಂತಿ ಹಿನ್ನೆಲೆ ಶಾಸಕರ ಭವನದ ಮುಂದೆ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು, ಮುರುಗೇಶ್ ನಿರಾಣಿ, ಕಾರಜೋಳ ಹಾಗೂ ಶಾಸಕ ರಾಜುಗೌಡ ಉಪಸ್ಥಿತರಿದ್ದರು.
Published On - 1:56 pm, Sun, 9 October 22