ಚರಂಡಿಗಳಲ್ಲಿ ನೀರು ಹರಿಯದ ಬಗ್ಗೆ 2 ತಿಂಗಳ ಹಿಂದೆಯೇ ಮಾಹಿತಿಯಿತ್ತು: ನೆಹರು ಕ್ಯಾಂಪಸ್ ಬಳಿ ಸಿಎಂ ಬೊಮ್ಮಾಯಿ ಹೇಳಿಕೆ
ಮಳೆಯಿಂದ JNCASR ಕ್ಯಾಂಪಸ್ನಲ್ಲಿ ಅಪಾರ ಹಾನಿ ಆಗಿದೆ. ಕಳೆದ 2 ತಿಂಗಳ ಹಿಂದೆ JNCASR ಕ್ಯಾಂಪಸ್ಗೆ ಭೇಟಿ ನೀಡಿದ್ದೆ. ಆಗಲೇ ಚರಂಡಿಗಳಲ್ಲಿ ನೀರು ಹರಿಯದ ಬಗ್ಗೆ ಮಾಹಿತಿ ಇತ್ತು. ಈ ಭಾಗದಲ್ಲಿ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲ್ಲ -ಸಿಎಂ ಬೊಮ್ಮಾಯಿ ಹೇಳಿಕೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಳೆ ಅನೇಕ ಅವಾಂತರಗಳಿಗೆ ಕಾರಣವಾಗಿದೆ. ಮಳೆ ಸೃಷ್ಟಿಸಿರೋ ಅವಾಂತರಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಅಪಾರ್ಟ್ಮೆಂಟ್ ಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ರೆ, ಇತ್ತ ಜವಹರಲಾಲ್ ನೆಹರು ಸಂಶೋಧನಾ ಕೇಂದ್ರವೂ ಸಂಪೂರ್ಣ ನಾಶವಾಗಿದೆ. ಸದ್ಯ ಇಂದು ಮಳೆ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ಕೋಲಾರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ನೀಡುವುದಾಗಿ ಹೇಳಿದ್ದ ಸಿಎಂ ಬೊಮ್ಮಾಯಿ ಇಂದು ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಯಲಹಂಕ ಭಾಗದಲ್ಲಿ ಮಳೆಯಿಂದ ಹೆಚ್ಚು ಹಾನಿ ಹಿನ್ನೆಲೆಯಲ್ಲಿ ಯಲಹಂಕಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ನಗರದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ಗೆ ಸಿಎಂ ಭೇಟಿ ನೀಡಿದ್ದು ಸುತ್ತಮುತ್ತಲಿನ ಕೆರೆ ಬಗ್ಗೆ ಮ್ಯಾಪ್ ತರಿಸಿಕೊಂಡು ಮಾಹಿತಿ ಪಡೆಯುತ್ತಿದ್ದಾರೆ. ಸಿಎಂಗೆ ಬಿಬಿಎಂಪಿ ಮುಖ್ಯ ಆಯುಕ್ತರು, ಯಲಹಂಕ ಎಇ, ಯಲಹಂಕ ಶಾಸಕ S.R.ವಿಶ್ವನಾಥ್ ಮಾಹಿತಿ ನೀಡುತ್ತಿದ್ದಾರೆ. ಇನ್ನು ಸಿಎಂ ಖುದ್ದು ಜನ ಸಾಮಾನ್ಯ ಬಳಿ ಸಮಸ್ಯೆಗಳನ್ನು ಕೇಳಿ ಆಲಿಸಿದ್ದಾರೆ.
ಒತ್ತುವರಿಯನ್ನು ತೆರವು ಗೊಳಿಸುತ್ತೇವೆ ಈ ವೇಳೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಒತ್ತುವರಿಯನ್ನು ತೆರವು ಗೊಳಿಸುತ್ತೇವೆ. ಕಾಲುವೆ ಅಗತ್ಯವಿರುವಲ್ಲಿ ನಿರ್ಮಿಸುತ್ತೇವೆ. ಯಲಹಂಕ ಕೆರೆ ನೀರು ಹೋಗಲು ಇರುವ ದಾರಿಗಳ ತೆರವು ಮಾಡಲಾಗುತ್ತೆ ಎಂದು ಯಲಹಂಕದಲ್ಲಿ ಮಳೆ ಹಾನಿ ವೀಕ್ಷಣೆ ವೇಳೆ ಸ್ಥಳೀಯ ನಿವಾಸಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕಳೆದ 3 ದಿನಗಳಿಂದಲೂ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಯಲಹಂಕ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಗಿದೆ. ಆದರಲ್ಲೂ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ನೀರು ನುಗ್ಗಿದ್ದು ಭಾರಿ ಸಮಸ್ಯೆ ಎದುರಾಗಿದೆ. ಈ ವೇಳೆ ಯಲಹಂಕ ಶಾಸಕ ವಿಶ್ವನಾಥ್ ಜನರ ನೆರವಿಗೆ ಧಾವಿಸಿದ್ದರು. 11 ಕೆರೆಗಳ ನೀರು ಯಲಹಂಕ ಕೆರೆಗೆ ಸೇರುತ್ತಿದೆ. ಈ ಬಾರಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಎಲ್ಲ 11 ಕೆರೆ ತುಂಬಿ ಹರಿದು ಯಲಹಂಕ ಕೆರೆಗೆ ಬಂದಿದೆ. ಯಲಹಂಕ ಕೆರೆ ಬಳಿಯ ರಾಜಕಾಲುವೆ ಪ್ರಮಾಣ ಸಣ್ಣದಿದೆ. ರಾಜಕಾಲುವೆ ಅತಿಕ್ರಮಣ, ಮುಚ್ಚಿರುವುದು ಗಮನಕ್ಕೆ ಬಂದಿದೆ. ಮಳೆ ನಿಂತ ಬಳಿಕ ರಾಜಕಾಲುವೆ ಅಗಲೀಕರಣಕ್ಕೆ ಸೂಚನೆ ನೀಡುವೆ.
ಎರಡೂ ರಾಜಕಾಲುವೆ 30 ಅಡಿಯಷ್ಟು ತೆಗೆಯಲು ಸೂಚಿಸಿದ್ದೇನೆ. ಹೆದ್ದಾರಿ ಪ್ರಾಧಿಕಾರದ ಜತೆ ಚರ್ಚಿಸಿ ಕಾಮಗಾರಿ ಮಾಡ್ತೇವೆ. ಶಾಶ್ವತ ಪರಿಹಾರ ಕೈಗೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿನ ರಾಜಕಾಲುವೆ 50 ಕಿ.ಮೀ ಹೆಚ್ಚಿಸ್ತೇವೆ. ಯಲಹಂಕ ಭಾಗದಲ್ಲಿ 400 ಮನೆಗಳಿಗೆ ಹಾನಿಯಾಗಿದೆ. ಮುಖ್ಯ ರಸ್ತೆ 10 ಕಿ.ಮೀ, ಉಳಿದ 20 ಕಿ.ಮೀ ರಸ್ತೆ ಹಾನಿಯಾಗಿದೆ. ನೀರು ನುಗ್ಗಿರುವ ಮನೆಗಳಿಗೆ ತಕ್ಷಣವೇ ₹10 ಸಾವಿರ ಪರಿಹಾರ ನೀಡಲಾಗುವುದು. ಬ್ಯಾಟರಾಯನಪುರದಲ್ಲಿ 600 ಮನೆಗಳಿಗೆ ಹಾನಿಯಾಗಿದೆ. ಈಗ ಬಫರ್ಜೋನ್ನಲ್ಲಿ ಕಟ್ಟಡಗಳಿಗೆ ಅನುಮತಿ ನೀಡ್ತಿಲ್ಲ. ಆ ಕಟ್ಟಡಗಳಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನೆಹರು ಕ್ಯಾಂಪಸ್ ಭೇಟಿ ನೀಡಿ ಸಿಎಂ ಪರಿಶೀಲನೆ ಇನ್ನು ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಪರಿಶೀಲನೆ ಬಳಿಕ ಸಿಎಂ ಜವಾಹರ್‌ಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರಕ್ಕೆ (JNCASR) ಭೇಟಿ ನೀಡಿದ್ದಾರೆ. ಜವಾಹರಲಾಲ್ ನೆಹರು ರಿಸರ್ಚ್ ಸೆಂಟರ್ ನಿರ್ದೇಶಕ ಜಿ.ಯು.ಕುಲಕರ್ಣಿಯಿಂದ ಮಾಹಿತಿ ಪಡೆದಿದ್ದಾರೆ.
ಬೆಂಗಳೂರಿನ ಜಕ್ಕೂರು ಬಳಿ ಇರುವ JNCASR ಕ್ಯಾಂಪಸ್ ಮಳೆಯಿಂದ ಸಂಪೂರ್ಣ ಕೆರೆಯಂತಾಗಿದೆ. ಸದ್ಯ ಸಿಎಂ ಲ್ಯಾಬ್ ಹಾಗೂ ಸರ್ವರ್ ರೂಂಗಳಲ್ಲಿ ಪರಿಶೀಲನೆ ನಡೆಸುದ್ರು. ಕೋಟ್ಯಂತರ ರೂ. ಬೆಲೆ ಬಾಳುವ ಯಂತ್ರೋಪಕರಣ ಹಾಳಾಗಿವೆ. ಮಳೆ ಹಾನಿ ಪರಿಶೀಲನೆ ಬಳಿಕ ಸಿಎಂ ಕ್ಯಾಂಪಸ್‌ನಲ್ಲಿ ಖ್ಯಾತ ವಿಜ್ಞಾನಿ CNR ರಾವ್ ಭೇಟಿ ಮಾಡಿದ್ದಾರೆ. ಸಿಎನ್‌ಆರ್ ರಾವ್ ಕೊಠಡಿಯಲ್ಲಿ ಸಿಎಂ ಸಂಶೋಧನಾ ಕೇಂದ್ರದಲ್ಲಿ ಆದ ನಷ್ಟದ ಬಗ್ಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಿರುವ ಮನೆಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು JNCASR ಕ್ಯಾಂಪಸ್ನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಪರಿಶೀಲನೆ ಬಳಿಕ ಮಾತನಾಡಿದ ಅವರು, ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದವರಲ್ಲಿ ಶ್ರೀಮಂತರು, ಬಡವರು ಇದ್ದಾರೆ. ಬಡವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ತೆರವು ಮಾಡಬೇಕು. ಬಫರ್ಜೋನ್ನಲ್ಲಿ ಮನೆ ಕಟ್ಟಿದ್ದವರಿಗೆ ನೋಟಿಸ್ ನೀಡಿ ಕ್ರಮಕ್ಕೆ ಸೂಚಿಸಲಾಗಿದೆ. ಮಳೆಹಾನಿ ಬಗ್ಗೆ ಪ್ರಧಾನಿ ಕರೆ ಮಾಡಿ ಮಾಹಿತಿ ಪಡೆದರು. ತಕ್ಷಣ ತುರ್ತು ಕ್ರಮ ಕೈಗೊಳ್ಳಲು ಪ್ರಧಾನಿ ಸೂಚಿಸಿದ್ದಾರೆ. ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಮಳೆಯಿಂದ JNCASR ಕ್ಯಾಂಪಸ್ನಲ್ಲಿ ಅಪಾರ ಹಾನಿ ಆಗಿದೆ. ಕಳೆದ 2 ತಿಂಗಳ ಹಿಂದೆ JNCASR ಕ್ಯಾಂಪಸ್ಗೆ ಭೇಟಿ ನೀಡಿದ್ದೆ. ಆಗಲೇ ಚರಂಡಿಗಳಲ್ಲಿ ನೀರು ಹರಿಯದ ಬಗ್ಗೆ ಮಾಹಿತಿ ಇತ್ತು. ಈ ಭಾಗದಲ್ಲಿ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲ್ಲ. ಈ ಭಾಗದಲ್ಲಿ ಕೆರೆಗಳ ಕಾಲುವೆ 8 ಅಡಿಗಳಷ್ಟು ಮಾತ್ರ ಇದೆ. JNCASR ಕ್ಯಾಂಪಸ್ಗೆ ನೀರು ಬರದಂತೆ ತಡೆಗೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸುತ್ತೇವೆ. JNCASR ಕ್ಯಾಂಪಸ್ನಲ್ಲಿ ದೊಡ್ಡ ಪ್ರಮಾಣದ ನಷ್ಟವಾಗಿದೆ. ಇದನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಹೊಣೆ ಎಂದಿದ್ದಾರೆ.
ಇದನ್ನೂ ಓದಿ: Andhra Pradesh: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಅರ್ಚಕನ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್; ವಿಡಿಯೊ ವೈರಲ್