ಬೆಂಗಳೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷಗಳು ಪೂರ್ತಿಯಾಗಿವೆ. ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ವರ್ಷವಿಡೀ ಕರ್ನಾಟಕ ಸಂಭ್ರಮ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕರ್ನಾಟಕದ ದೇಶೀ ಸಂಸ್ಕೃತಿ ಹೆಚ್ಚು ಬಿಂಬಿತವಾಗಬೇಕು ಎಂಬ ಉದ್ದೇಶದಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ 2023ರ ನ. 1ರಿಂದ 2024ರ ನ. 1ರವರೆಗೆ ಕರ್ನಾಟಕ ಸಂಭ್ರಮ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕರ್ನಾಟಕ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದೆ.
ಕರ್ನಾಟಕ ಸಂಭ್ರಮ- 50 ಕಾರ್ಯಕ್ರಮದ ಲಾಂಛನವನ್ನು ಅ. 17ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು. ಈ ಹಿಂದಿನ ಸರ್ಕಾರವೇ ಈ ಸುವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸಬೇಕಾಗಿತ್ತು. ಆದರೆ, ಬಿಜೆಪಿ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ಈಗ ನಾವು ಈ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಕೇರಳದ ರೀತಿ ರಾಜ್ಯದಲ್ಲೂ ಮುಸ್ಲಿಮರಿಗೆ ಪ್ರಚೋದಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ; ಯತ್ನಾಳ್
ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ದೇಶೀ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುವುದು, ಕರ್ನಾಟಕದ ದೇಶೀ ಸಂಸ್ಕೃತಿಯನ್ನು ಹೆಚ್ಚು ಬಿಂಬಿಸಲಾಗುವುದು. ಕನ್ನಡ ನಾಡು, ಸಂಸ್ಕೃತಿ ಮತ್ತು ಪ್ರಾದೇಶಿಕ ಭವ್ಯತೆಯನ್ನು ಯುವ ಪೀಳಿಗೆಗೂ ತಲುಪಿಸುವ ರೀತಿಯಲ್ಲಿ ಅರ್ಥಪೂರ್ಣ ಮತ್ತು ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿಎಂ ಸೂಚನೆ ನೀಡಿದ್ದಾರೆ. ಹಾಗೇ, ಸ್ಮಾರಕ ಅಭಿವೃದ್ಧಿ , ಜೀರ್ಣೋದ್ಧಾರ, ವಿಧಾನಸೌಧ ಹಾಗೂ ಶಾಸಕರ ಭವನದ ಮಧ್ಯೆ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸುವುದು, ಮೈಸೂರಿನಲ್ಲಿ ದೇವರಾಜ ಅರಸರ ಪ್ರತಿಮೆ ಸ್ಥಾಪನೆ, ಧಾರವಾಡದ ದಿ. ಅದರಗುಂಚಿ ಶಂಕರಗೌಡ, ಬಳ್ಳಾರಿಯ ಹುತಾತ್ಮ ರಂಜಾನ್ ಸಾಬ್ ಹಾಗೂ ಗದಗ ಜಿಲ್ಲೆಯ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳುವುದು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಮಹಿಷ ದಸರಾ ವಿವಾದ: ಅ. 13ರಂದು ಚಾಮುಂಡಿ ಬೆಟ್ಟ ಚಲೋಗೆ ಪ್ರತಾಪ್ ಸಿಂಹ ಕರೆ
ಇದರ ಜೊತೆಗೆ, ಹಲ್ಮಿಡಿ ಶಾಸನದ ಪ್ರತಿಕೃತಿಗಳ ಸ್ಥಾಪನೆ, ಲೇಸರ್ ಶೋ ಹಾಗೂ ಧ್ವನಿ, ಬೆಳಕು ಕಾರ್ಯಕ್ರಮ, ಕರ್ನಾಟಕಕ್ಕೆ ಕೊಡುಗೆ ನೀಡಿದ 50 ಮಹಿಳೆಯರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು. 2024ರ ನ.1ರಂದು ಈ ವರ್ಷಪೂರ್ತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗುವುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ