ಚಿತ್ರಸಂತೆಗೆ ಸರ್ಕಾರದಿಂದ 50 ಲಕ್ಷ ರೂ. ಅನುದಾನ ಸಿದ್ದರಾಮಯ್ಯ ಭರವಸೆ
ಚಿತ್ರಕಲಾ ಪರಿಷತ್ ನಗರದ ಕುಮಾರಕೃಪಾ ರಸ್ತೆಯಲ್ಲಿ ಇಂದು (ಜ.07) 21ನೇ ಚಿತ್ರಸಂತೆ ಆಯೋಜಿಸಿದೆ.ಈ ಬಾರಿ ಶಿವನಂದ ಸರ್ಕಲ್ನಿಂದ ಸ್ಟೀಲ್ ಬ್ರಿಡ್ಜ್ ಕೆಳಗಿನವರೆಗೆ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಚಿತ್ರಸಂತೆಯಲ್ಲಿ 100 ರೂ.ದಿಂದ ಆರಂಭವಾಗಿ ಲಕ್ಷದವರೆಗೂ ಚಿತ್ರಕಲೆಗಳು ಮಾರಾಟಕ್ಕೆ ಇರಲಿವೆ.

ಬೆಂಗಳೂರು, ಜನವರಿ 07: ಚಿತ್ರಕಲಾ ಪರಿಷತ್ (Chitrakala Parishatha) ನಗರದ ಕುಮಾರಕೃಪಾ ರಸ್ತೆಯಲ್ಲಿ ಇಂದು (ಜ.07) 21ನೇ ಚಿತ್ರಸಂತೆ (Chitra Santhe 2024) ಆಯೋಜಿಸಿದೆ. ಈ ಚಿತ್ರಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, 1,500ಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾರೆ. 24 ರಾಜ್ಯದ ಕಲಾವಿದರಿಗೆ ನನ್ನ ಕಡೆಯಿಂದ ಅಭಿನಂದನೆ. ಇನ್ಮುಂದೆ ಚಿತ್ರಸಂತೆಗೆ ಸರ್ಕಾರದಿಂದ 50 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದರು.
ಅತ್ಯಂತ ಸಂತೋಷದಿಂದ ಚಿತ್ರಸಂತೆಯನ್ನ ಉದ್ಘಾಟನೆ ಮಾಡಿದ್ದೇನೆ. 3 ರಿಂದ 4 ಲಕ್ಷ ಜನರು ಬರುತ್ತಾರೆ. ಬಿಎಲ್ ಶಂಕರ್ ಅವರು ಅರ್ಟ್ ಗ್ಯಾಲರಿ ಬಗ್ಗೆ ಹೇಳಿದ್ದಾರೆ. ನಮ್ಮ ಸರ್ಕಾರ ಅದಕ್ಕೆ ಬೆಂಬಲಿಸಲಿದೆ. ನಮ್ಮ ಸರ್ಕಾರ ತೆರೆದ ಮನಸ್ಸಿನಲ್ಲಿದೆ. ಎಲ್ಲಾ ರೀತಿಯಾ ಸಹಕಾರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಇಂದಿನ ಚಿತ್ರಸಂತೆಯನ್ನು ಇಸ್ರೋ ವಿಜ್ಞಾನಿಗಳಿಗೆ ಅರ್ಪಿಸಿದ್ದೇವೆ. ಈ ಬಾರಿ ಚಿತ್ರಸಂತೆಯಲ್ಲಿ 1680 ಕಲಾವಿದರು ಭಾಗಿಯಾಗಿದ್ದಾರೆ. 205 ವಿಶೇಷಚೇತನರು, ಹಿರಿಯ ಕಲಾವಿದರು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರಸಂತೆಗೆ ಬೆಂಗಳೂರು ಸಜ್ಜು: ವಿಶೇಷ ಮೆಟ್ರೋ ಫೀಡರ್ ಸೇವೆ, ಮಾರ್ಗ ಬದಲಾವಣೆ ಕುರಿತಾದ ಮಾಹಿತಿ ಇಲ್ಲಿದೆ
ಇನ್ನು ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಎಂ.ಸಿ.ಸುಧಾಕರ್, ಶಾಸಕರಾದ ಅಜಯ್ ಸಿಂಗ್, ರಿಜ್ವಾನ್ ಅರ್ಷದ್ ಸೇರಿ ಹಲವರು ಭಾಗಿಯಾಗಿದ್ದರು.
ಕಲಾವಿದರಿಂದ ನೇರವಾಗಿ ಮಾರಾಟ
ಈ ಬಾರಿ ಶಿವನಂದ ಸರ್ಕಲ್ನಿಂದ ಸ್ಟೀಲ್ ಬ್ರಿಡ್ಜ್ ಕೆಳಗಿನವರೆಗೆ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಲಕ್ಷಂತರ ಜನರು ಚಿತ್ರಸಂತೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಚಿತ್ರಸಂತೆಯಲ್ಲಿ 100 ರೂ.ದಿಂದ ಆರಂಭವಾಗಿ ಲಕ್ಷದವರೆಗೂ ಚಿತ್ರಕಲೆಗಳು ಮಾರಾಟಕ್ಕೆ ಇರಲಿವೆ. ಮೈಸೂರು ಶೈಲಿಯ ಕಲೆ, ತಂಜಾವೂರಿನ ಶೈಲಿ, ರಾಜಾಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ಚಿತ್ರಗಳನ್ನು ಬಿಡಸಲಾಗುತ್ತದೆ. ಅಲ್ಲದೇ ಆಕ್ರಿಕಲ್ , ಕೊಲಾಜ್, ಲಿಯೋಗ್ರಾಫ್, ಡೂಡಲ್ ಎಂಬೋಸಿಂಗ್ , ವಿಡಿಯೋ ಕಲೆ, ಗ್ರಾಫಿಕ್ ಕಲೆ , ಶಿಲ್ಪ ಕಲೆ, ಇನ್ ಸ್ಟಲೇಶನ್, ಫಾರ್ಮಾಮೆನ್ಸ್ ಸೇರಿದಂತೆ ಹಲವು ಪ್ರತಿಷ್ಠಾಪನ ಕಲೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ