ಒಬ್ಬ ಕ್ರಿಮಿನಲ್ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ಬರಬಾರದಿತ್ತು: ಬಿಜೆಪಿ ವಿರುದ್ಧ ಸಿಎಂ ಕಿಡಿ

|

Updated on: Jan 03, 2024 | 6:14 PM

ಅಯೋಧ್ಯೆ ರಾಮ ಜನ್ಮಭೂಮಿಗಾಗಿ ಹುಬ್ಬಳ್ಳಿಯಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿದೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ಒಬ್ಬ ಕ್ರಿಮಿನಲ್ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಬರಬಾರದಿತ್ತು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಒಬ್ಬ ಕ್ರಿಮಿನಲ್ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ಬರಬಾರದಿತ್ತು: ಬಿಜೆಪಿ ವಿರುದ್ಧ ಸಿಎಂ ಕಿಡಿ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಜನವರಿ 03: ಒಬ್ಬ ಕ್ರಿಮಿನಲ್ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಬರಬಾರದಿತ್ತು ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿಗಾಗಿ ಹುಬ್ಬಳ್ಳಿಯಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿದೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯ ಆರೋಪಿಯನ್ನು ಸಮರ್ಥಿಸಿಕೊಂಡು ಹೋರಾಟಕ್ಕೆ ಇಳಿದಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ ಸ್ವಲ್ಪ ಬುದ್ದಿಗಿದ್ದಿ ಹೊಂದಿದವರಿದ್ದರೆ ದಯವಿಟ್ಟು ಆ ವ್ಯಕ್ತಿಯ ಮೇಲಿನ ಆರೋಪಗಳ ಪಟ್ಟಿಯನ್ನು ತರಿಸಿ ಓದಿ, ಆ ಮೇಲೆ ಹೋರಾಟಕ್ಕೆ ಇಳಿಯಿರಿ ಎಂದು ವಾಗ್ದಾಳಿ ಮಾಡಿದ್ದಾರೆ.

ಜನಸಂಖ್ಯೆಯಲ್ಲಿ ಹಿಂದೂಗಳೇ ಬಹುಸಂಖ್ಯೆಯಲ್ಲಿರುವುದರಿಂದ ಜೈಲುಗಳಲ್ಲಿರುವ ಕೈದಿಗಳಲ್ಲಿಯೂ ಹಿಂದೂ ಧರ್ಮಿಯರೇ ಬಹುಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಹಿಂದೂ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಬಿಜೆಪಿ ಅವರ ಪರವಾಗಿ ಹೋರಾಟ ನಡೆಸುತ್ತಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಬಿಡುಗಡೆ ಮಾಡುವವರೆಗೂ ಬಿಜೆಪಿ ಸುಮ್ಮನಿರಲ್ಲ: ಬಿವೈ ವಿಜಯೇಂದ್ರ

ಸುಮಾರು ನಾಲ್ಕು ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಭಾರತೀಯ ಜನತಾ ಪಕ್ಷಕ್ಕೆ ನಮ್ಮ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನ ದಿಗಿಲು ಹುಟ್ಟಿಸಿದೆ. ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ. ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಕ್ರಿಮಿನಲ್ ಕೃತ್ಯಗಳು ಹೆಚ್ಚಾಗಲು ಅಪರಾಧ ಮತ್ತು ಅಪರಾಧಿಗಳಿಗೆ ಜಾತಿ-ಧರ್ಮದ ಬಣ್ಣಹಚ್ಚುವ ಬಿಜೆಪಿಯ ಕಾನೂನು ವಿರೋಧಿ ನಡವಳಿಕೆಗಳೇ ಕಾರಣ. ವ್ಯಕ್ತಿಯೊಬ್ಬ ಎಂತಹ ಘನಘೋರ ಅಪರಾಧಗಳನ್ನು ಬೇಕಾದರೂ ಎಸಗಲಿ, ಆತ ಕೇಸರಿ ಶಾಲನ್ನು ತಲೆಗೆ ಸುತ್ತಿಕೊಂಡು ನಾನೊಬ್ಬ ಹಿಂದೂ ಎಂದು ಕೂಗಿದರೆ ಬಿಜೆಪಿ ನಾಯಕರು ಆತನ ರಕ್ಷಣೆಗೆ ಧಾವಿಸುತ್ತಾರೆ.

ಈ ಮೂಲಕ ಕೇಸರಿ ಶಾಲು ಮಾತ್ರವಲ್ಲ ಹಿಂದೂ ಧರ್ಮಕ್ಕೂ ಬಿಜೆಪಿ ನಾಯಕರು ಅವಮಾನ ಮಾಡುತ್ತಿದ್ದಾರೆ. ಇದು ಧರ್ಮದ್ರೋಹದ ನಡೆ. ಕಾನೂನನ್ನು ಅದರ ಪಾಡಿಗೆ ಕೆಲಸ ಮಾಡಲು ಬಿಟ್ಟು ಬಿಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮ ಮಂದಿರದ ಆಹ್ವಾನ ತಿರಸ್ಕರಿಸಿದ ಕಮ್ಯೂನಿಸ್ಟರಿಗೆ ರಾಮ ಬೇಕಿಲ್ಲ, ಕೊಲೆ ಪಾತಕಿ ಬೇಕು: ಯತ್ನಾಳ್ ವಾಗ್ದಾಳಿ

ರಾಮಭಕ್ತ, ಕರಸೇವಕ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿ. ತನ್ನ ಅಪರಾಧ ಕೃತ್ಯಗಳಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಧರ್ಮರಕ್ಷಣೆ ನಾಟಕವಾಡುವ ಇಂಥವರನ್ನು ಬಂಧಿಸದೆ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ.


ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು ಈತನ ಎಲ್ಲಾ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಅಥವಾ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.