ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು (ಜುಲೈ 24) 1800 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಲೋಕಾರ್ಪಣೆ ಮಾಡಿದ್ದಾರೆ. ವರ್ಚುವಲ್ ಕಾರ್ಯಕ್ರಮದ ಮೂಲಕ ಈ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಮಾಡಿದ್ದು, ಸಿಎಂ ತವರು ಜಿಲ್ಲೆ ಶಿವಮೊಗ್ಗಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಡೆದ ವಿವಿಧ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಸ್.ಈಶ್ವರಪ್ಪ ಸೇರಿ ಹಲವರು ಉಪಸ್ಥಿತರಿದ್ದರು.
ಅಭಿವೃದ್ಧಿ ಕಾಮಗಾರಿಗಳ ವಿವರ
185 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, 100 ಕೋಟಿ ರೂಪಾಯಿ ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 200 ಹಾಸಿಗೆಗಳ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ, 120 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಜಿಲ್ಲಾಡಳಿತ ಭವನ, 15 ಕೋಟಿ ರೂಪಾಯಿ ವೆಚ್ಚದಲ್ಲಿ ಎನ್‌ಜಿಒ ಕ್ವಾಟ್ರಸ್ ಕಟ್ಟಡ ಕಾಮಗಾರಿ ಹಾಗೂ 107.89 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ಕಾಮಗಾರಿ, 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಇಬಿ ವೃತ್ತದಲ್ಲಿ ನೌಕರರ ಸಮುದಾಯ ಭವನ ನಿರ್ಮಾಣ.
1.50 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಗರ ತಾಲೂಕು ನೀರುಕೋಡು ಗ್ರಾಮದಲ್ಲಿ ಸಾರ್ವಜನಿಕ ಸಮುದಾಯ ಭವನ, 10 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್ ರಸ್ತೆಗಳು, 20.89 ಕೋಟಿ ರೂಪಾಯಿ ವೆಚ್ಚದಲ್ಲಿ ಸಕ್ರೆಬೈಲಿನಲ್ಲಿ ಜೈವಿಕ ಉದ್ಯಾನವನ ಅಭಿವೃದ್ಧಿ ಕಾಮಗಾರಿ, 32 ಕೋಟಿ ರೂಪಾಯಿ ವೆಚ್ಚದಲ್ಲಿ ಊರಗಡೂರು ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣ, 55 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 169ರ (ತೀರ್ಥಹಳ್ಳಿ ಪಟ್ಟಣದಲ್ಲಿ ದ್ವಿಪಥದ ಬೃಹತ್ ಸೇತುವೆ ಮತ್ತು ಬೈಪಾಸ್ ರಸ್ತೆ) ಕಾಮಗಾರಿ, ರಾ.ಹೆ. 206ರಲ್ಲಿ ಸಾಗರ ನಗರ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗಳಿಗೆ ಶಂಕು ಸ್ಥಾಪನೆ.
155 ಕೋಟಿ ರೂಪಾಯಿ ವೆಚ್ಚದಲ್ಲಿ ಇರುವಕ್ಕಿಯಲ್ಲಿ ನಿರ್ಮಾಣಗೊಂಡಿರುವ ಕೃಷಿ ವಿಶ್ವವಿದ್ಯಾಲಯದ ಕಟ್ಟಡ ಉದ್ಘಾಟನೆ, 850 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳ 255 ಕೆರೆಗಳಿಗೆ ನೀರು ತುಂಬುವ ಏತ ನೀರಾವರಿ ಯೋಜನೆ ಲೋಕಾರ್ಪಣೆ, 100 ಕೋಟಿ ರೂಪಾಯಿ ವೆಚ್ಚದಲ್ಲಿ 50 ಹಾಸಿಗೆ ವ್ಯವಸ್ಥೆ ಹೊಂದಿರುವ ಹೃದಯ ರೋಗ ವಾರ್ಡ್ ಲ್ಯಾಬ್ ಉದ್ಘಾಟನೆ, 9.19 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯ ಎಂಜಿನಿಯರ್ ಕಟ್ಟಡ ನಿರ್ಮಾಣ ಕಾಮಗಾರಿ.
41.39 ಕೋಟಿ ರೂಪಾಯಿ ವೆಚ್ಚದಲ್ಲಿ ನವುಲೆಯಲ್ಲಿ ಮೆಸ್ಕಾಂ ಶಾಖಾ ಕಚೇರಿ ಕಟ್ಟಡ, 4.81 ಕೋಟಿ ರೂಪಾಯಿ ವೆಚ್ಚದ ಭದ್ರಾವತಿ ನಗರದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ ನಿರ್ಮಾಣ, 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ ನಗರದಲ್ಲಿ ನಿರ್ಮಿಸಿರುವ ಮೆಸ್ಕಾಂ ಅತಿಥಿ ಗೃಹ ಕಟ್ಟಡಗಳ ಲೋಕಾರ್ಪಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಿದರು.
ನಾಳೆ ಬೆಳಗ್ಗೆ 9 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳಲಿರುವ ಸಿಎಂ ಬಿ.ಎಸ್.ಯಡಿಯೂರಪ್ಪ
ನಾಳೆ ಬೆಳಗ್ಗೆ 9ಗಂಟೆಗೆ ಬೆಂಗಳೂರಿನಿಂದ ಬೆಳಗಾವಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಲಿದ್ದು, ಮಳೆ, ನೆರೆಯಿಂದ ಹಾನಿಯಾದ ಪ್ರದೇಶಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಅಲ್ಲಿಯೇ ಇರಲಿದ್ದು, ಸಾಂತ್ವನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬಳಿಕ ಬೆಳಗಾವಿಯ ಸರ್ಕ್ಯೂಟ್ಹೌಸ್ನಲ್ಲಿ ಮಧ್ಯಾಹ್ನ 2.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ, ಸಂಸದರು, ಶಾಸಕರು, ಜಿಲ್ಲಾಡಳಿತದ ಜತೆ ಸಿಎಂ ಬಿಎಸ್ವೈ ಸಭೆ ನಡೆಸಲಿದ್ದಾರೆ. ಸಂಜೆ 4ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಾಪಸ್ ಆಗಲಿದ್ದಾರೆ.
Good News: ರಾಜ್ಯದ 1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆಗೆ ನಾಳೆ ಸಿಎಂ ಯಡಿಯೂರಪ್ಪ ಚಾಲನೆ
Published On - 12:59 pm, Sat, 24 July 21