ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ (Acid Attack) ಎರಚಿ ಅಮಾನವೀಯ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದ ಖತರ್ನಾಕ್ ಆರೋಪಿ ಹದಿನಾರು ದಿನಗಳ ಬಳಿಕ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಇಷ್ಟಕ್ಕೂ ಈ ಖತರ್ನಾಕ್ ಗೆ ಆ್ಯಸಿಡ್ ಸಿಕ್ಕಿದ್ದೇಗೆ? ಕೃತ್ಯ ಎಸಗಿದ್ದೇಗೆ? ಹೀನಾಯ ಕೃತ್ಯವೆಸಗಲು ಹೇಗೆಲ್ಲಾ ಪ್ಲಾನ್ ಮಾಡಿದ್ದ. ಯುವತಿಯನ್ನ ಹೇಗೆಲ್ಲಾ ಕಾಡಿದ್ದ ಅನ್ನೋದರ ಡಿಟೇಲ್ಸ್ ಇಲ್ಲಿದೆ.
ಇ-ಮೇಲ್ ಮೂಲಕ ಬರೋಬ್ಬರಿ 8 ಲೀಟರ್ ಸಲ್ಫೂರಿಕ್ ಆ್ಯಸಿಡ್ ತರಿಸಿದ್ದ
ಏಪ್ರಿಲ್ 28 ರಂದು ಕಾಮಾಕ್ಷಿಪಾಲ್ಯ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಸಮೀಪ ಯುವತಿ ಮೇಲೆ ಆ್ಯಸಿಡ್ ಎರಚಿ, ಹೇಯ ಕೃತ್ಯ ಎಸಗಿ ತಮಿಳುನಾಡಿಗೆ ಎಸ್ಕೇಪ್ ಆಗಿ ತಲೆಮರೆಸಿಕೊಂಡಿದ್ದ ನಾಗೇಶ್ ಅಲಿಯಾಸ್ ಖತರ್ನಾಕ್ ಆ್ಯಸಿಡ್ ನಾಗ ಕೊನೆಗೆ ಅಂದರ್ ಆಗಿದ್ದಾನೆ. ಈ ಸಂಬಂಧ ಕಾಮಕ್ಷಿಪಾಳ್ಯ ಪೊಲೀಸರ ಬಳಿ ಆ್ಯಸಿಡ್ ಪರ್ಚೇಸ್ ಮಾಡಿದ್ದ ಕುರಿತು ಬಾಯ್ಬಿಟ್ಟಿದ್ದಾನೆ. ಹೌಸ್ ಕ್ಲೀನಿಂಗ್ ಕಂಪೆನಿ, ಸೋಲಾರ್ ಕಂಪೆನಿ ಲೆಟರ್ ಹೆಡ್ ಬಳಸಿ ಇ-ಮೇಲ್ ಮೂಲಕ ಆ್ಯಸಿಡ್ ಖರೀದಿಸಿದ್ದ. ಏಪ್ರಿಲ್ 20 ರಂದು ಆ್ಯಸಿಡ್ ಸಪ್ಲೈ ತೆಗೆದುಕೊಂಡಿದ್ದ ನಾಗ, ಇದಕ್ಕೂ ಮುನ್ನಾ 2020 ರಲ್ಲೂ ಇದೇ ಮಾದರಿಯಲ್ಲಿ ಆ್ಯಸಿಡ್ ಪಡೆದುಕೊಂಡಿದ್ದೆ, ಆದರೆ ಕೃತ್ಯ ಎಸಗಿರಲಿಲ್ಲ, ದಾಳಿ ನಡೆಸಿರಲಿಲ್ಲ, ಎರಡನೇ ಬಾರಿ ಆ್ಯಸಿಡನ್ನು 8 ಲೀಟರ್ ಮತ್ತು ಅರ್ಧ ಲೀಟರ್ನ ಎರಡು ಬಾಟಲ್ ಗಳಲ್ಲಿ ಪಡೆದುಕೊಂಡಿದ್ದೆ. ಸಂತ್ರಸ್ಥೆಗೆ ಆ್ಯಸಿಡ್ ಹಾಕುವ ಕುರಿತು ಏಪ್ರಿಲ್ 27 ರಂದು ಬೆದರಿಕೆವೊಡ್ಡಿದ್ದು, ಸಂತ್ರಸ್ಥೆ ಈ ಕುರಿತು ಮನೆಯ ಸದಸ್ಯರಿಗೆ ಮಾಹಿತಿ ನೀಡಿದ್ರು. ಆಕೆ ಮನೆಯವ್ರು ನನ್ನ ಅಣ್ಣನ ಸಂಪರ್ಕಿಸಿ ವಿಚಾರ ತಿಳಿಸಿಬಿಟ್ಟಿದ್ದರು. ನನ್ನ ಅಣ್ಣ ಈ ವಿಚಾರವಾಗಿ ಕೇಳಿದ್ದ, ಇದೇ ಕೋಪದಲ್ಲಿ ಮರುದಿನ ಏಪ್ರಿಲ್ 28 ರಂದು ಆ್ಯಸಿಡ್ ದಾಳಿ ಮಾಡುವುದಾಗಿ ಹೇಳಿ ಅರ್ಧ ಲೀಟರ್ ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದಾಗಿ ಆರೋಪಿ ನಾಗೇಶ್ ಮಾಹಿತಿ ಬಾಯ್ಬಿಟ್ಟಿದ್ದಾನೆ.
ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಘಟನೆ ನಡೆದ ಕೂಡಲೇ ಆರೋಪಿ ಪತ್ತೆಗೆ ಕಾರ್ಯಚರಣೆ ತೀವ್ರಗೊಳಿಸಲಾಗಿತ್ತು.
ಆರೋಪಿ ನಾಗೇಶ್ @ ಆ್ಯಸಿಡ್ ನಾಗ ಹಿನ್ನಲೆ ಕೆದಕಿದ ಪೊಲೀಸರಿಗೆ, 7 ವರ್ಷಗಳಿಂದ ಸಂತ್ರಸ್ಥೆ ಮತ್ತು ಆರೋಪಿ ಮನೆ ಒಂದೇ ಏರಿಯಾದಲ್ಲಿತ್ತು. ಇವರು ನೆರೆಹೊರೆಯವರಾಗಿದ್ದರು. ಆ ಬಳಿಕ ಮನೆ ಶಿಫ್ಟ್ ಮಾಡಿದ್ದ ನಾಗೇಶ್ 7 ವರ್ಷದ ಅವಧಿಯಲ್ಲಿ ಸ್ನೇಹಿತ ಮನೆಯಲ್ಲಿ ವಾಸಮಾಡ್ತಿದ್ದ. ಸ್ನೇಹಿತನ ಮೂಲಕ ಸಂತ್ರಸ್ಥೆ ಮನೆಯಲ್ಲಿ ನಡೆಯುತ್ತಿದ್ದ ಘಟನೆಗಳ ವಿಷಯವನ್ನು ಪಡೆದು ಕೊಳ್ತಿದ್ದ. ಆಕೆಯನ್ನ ಕಳೆದ ಏಳು ವರ್ಷಗಳಿಂದ ಹಿಂಬಾಲಿಸ್ತಿದ್ದ. ಸಂತ್ರಸ್ಥೆ ಅಕ್ಕನ ಮದುವೆ ಫಿಕ್ಸ್ ಆಗಿರುವ ವಿಚಾರ ಗೊತ್ತಾಗಿತ್ತು. ಅಕ್ಕನ ಮದುವೆ ಬಳಿಕ ಸಂತ್ರಸ್ಥೆ ಮದುವೆ ಮಾಡಿಬಿಡ್ತಾರೆ ಅಂತಾ ಕಾಡಲು ಶುರುಮಾಡಿದ್ದ. ಹೌಸ್ ಕ್ಲೀನಿಂಗ್ ಕಂಪೆನಿ, ಸೋಲಾರ್ ಕಂಪೆನಿ ಲೆಟರ್ ಹೆಡ್ ಬಳಸಿ ಇ-ಮೇಲ್ ಬಳಸಿ ಆ್ಯಸಿಡ್ ಪಡೆದುಕೊಂಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಏಪ್ರಿಲ್ 20 ರಂದು ಆ್ಯಸಿಡ್ ಸಪ್ಲೈ ತೆಗೆದುಕೊಂಡಿದ್ದವ, ಘಟನೆ ನಡೆದ ದಿನದಿಂದ ಬೆಳಗ್ಗೆ-ಸಂಜೆ ಪಶ್ಚಿಮ ವಿಭಾಗ ಹೆಚ್ವುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನ ನೀಡ್ತಿದ್ದರು. ಆರೋಪಿ ಪತ್ತೆಹಚ್ಚಲು ಶ್ರಮವಹಿಸಿದ ಪಶ್ಚಿಮ ವಿಭಾಗದ ಪೊಲೀಸರನ್ನ ನಾನು ಹೆಮ್ಮೆಯಿಂದ ನಮ್ಮ ಪೊಲೀಸರು ಕಾರ್ಯಚರಣೆ ಶ್ಲಾಘಿಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘಿಸಿದ್ದಾರೆ.
ಅದೇನೆ ಇರಲಿ, ಅಕ್ಷಮ್ಯ ಕೃತ್ಯ ಎಸಗಿ ನೆರೆಯ ತಮಿಳುನಾಡಿನಲ್ಲಿ ಖಾವಿ ಧರಿಸಿ ಅವಿತಿದ್ದ ಕ್ರಿಮಿ ಅಂದರ್ ಆಗಿದ್ದಾನೆ. ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥ ಹೆಣ್ಣು ಜೀವ ನೋವಿನಲ್ಲಿ ನರಳುತ್ತಿದ್ದಾಳೆ. ಆರೋಪಿ ಸಿಕ್ಕಿದಕ್ಕೆ ನೋವಿನಲ್ಲೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಅಮಾನವೀಯ ಕೃತ್ಯ ವೆಸಗಿದ ಆರೋಪಿಗೆ ತಕ್ಕಶಿಕ್ಷೆ ಸಿಗಲೆಂದು ಪೋಷಕರ ಎದುರು ಮರುಗುತ್ತಾ ಚೇತರಿಕೆ ಕಾಣ್ತಿದಾಳೆ. ಒಟ್ನಲ್ಲಿ ಸೆರೆಸಿಕ್ಕ ಬಳಿಕ ಮಿಸುಕಾಡಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕೆ ಆತ್ಮರಕ್ಷಣೆಗೆ ಪೊಲೀಸರು ಗುಂಡುಹಾರಿಸಿ ಬಂಧಿಸಿ, ಮಕಾಡೆ ಮಲಗಿಸಿದ್ದಾರೆ.
ವರದಿ: ಶಿವಪ್ರಸಾದ್. ಟಿವಿ9 ಬೆಂಗಳೂರು
Published On - 10:55 pm, Sun, 15 May 22