
ಬೆಂಗಳೂರು, ಏಪ್ರಿಲ್ 21: ರಾಜ್ಯದಲ್ಲಿ ಆಟೋ ಮತ್ತು ಕ್ಯಾಬ್ ಚಾಲನೆ ಮಾಡುವ ಚಾಲಕರಿಗೆ ಕಡ್ಡಾಯವಾಗಿ ಕನ್ನಡ ಗೊತ್ತಿರಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಗ್ರಹಿಸಿತ್ತು. ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷೆ ಕಡ್ಡಾಯಗೊಳಿಸಿ ಇತ್ತೀಚೆಗೆ ಆದೇಶ ಹೊರಡಿಸಿದ್ದು, ಎಲ್ಲಾ ವಾಣಿಜ್ಯ ವಾಹನ ಚಾಲಕರು ಪರವಾನಗಿ ಹೊಂದಲು ಸ್ಥಳೀಯ ಭಾಷೆಯಾದ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು ಎಂಬ ನಿಯಮ ಜಾರಿಗೆ ತರೋದಾಗಿ ಹೇಳಿತ್ತು. ಅದೇ ರೀತಿ ರಾಜ್ಯದಲ್ಲಿಯೂ ನಿಯಮ ತರಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ ಈ ವಿಚಾರಕ್ಕೀಗ ಆಟೋ ಚಾಲಕರ ಸಂಘಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಪ್ರಧಾನ ಕಾರ್ಯದರ್ಶಿ ಡಿ. ರುದ್ರಮೂರ್ತಿ, ಬೆಂಗಳೂರು ನಗರದ ಬಹುಸಾಂಸ್ಕೃತಿಕ ಸ್ವಭಾವವನ್ನು ಗಮನಿಸಿದರೆ ಈ ನಿಯಮ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಜನಸಂಚಾರ ವೈವಿಧ್ಯಮಯವಾಗಿದೆ. ಎಲ್ಲವೂ ಡಿಜಿಟಲ್ ಆಗಿರುವುದರಿಂದ ಆಟೋ ಓಡಿಸಲು ಕನ್ನಡ ತಿಳಿದಿರಬೇಕೆಂಬ ಅನಿವಾರ್ಯತೆ ಕಡಿಮೆ ಇದೆ. ಆ್ಯಪ್ನಲ್ಲಿ ಸ್ಥಳ ನಮೂದಿಸಿ, ಮತ್ತೊಂದು ಆ್ಯಪ್ ಮೂಲಕ ಹಣ ಪಾವತಿಸಲಾಗುತ್ತದೆ. ಅಲ್ಲದೆ ಚಾಲಕರು ಬಹುತೇಕ ಬಹುಭಾಷಾ ಜ್ಞಾನ ಹೊಂದಿದ್ದಾರೆ. ಹೀಗಾಗಿ ಇಂತಹ ನಿಯಮ ಸಾವಿರಾರು ಚಾಲಕರ ಜೀವನೋಪಾಯಕ್ಕೆ ತೊಂದರೆ ಉಂಟುಮಾಡಬುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಗುಂಡಿ ಬಿದ್ದ ರಸ್ತೆಗಳು, ಹದಗೆಟ್ಟ ವ್ಯವಸ್ಥೆ; ರಾಜ್ಯ ಸರ್ಕಾರದ ವಿರುದ್ಧ ಮೋಹನ್‌ದಾಸ್ ಪೈ ಸಿಡಿಮಿಡಿ!
ಸರ್ಕಾರವು ಇಂತಹ ನಿಯಮಗಳನ್ನು ತರುವ ಬದಲು, ಪ್ರಸ್ತುತವಾಗಿ ಎದುರಿಸುತ್ತಿರುವ ಗ್ಯಾಸ್ ಸಮಸ್ಯೆ ನಿವಾರಣೆಗೆ ಗಮನಹರಿಸಬೇಕು. ಈಗ ನಮ್ಮ ದೊಡ್ಡ ಸಮಸ್ಯೆ LPG ದರ ಏರಿಕೆ. ಇದರಿಂದ ಆಟೋ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀಳುತ್ತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರದಿಂದ ಸಹಾಯ ಬೇಕಾಗಿದೆ ಎಂದು ಆದರ್ಶ ಆಟೋ ಡ್ರೈವರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಿ. ಸಂಪತ್ ತಿಳಿಸಿದ್ದಾರೆ.
ಇದಕ್ಕೆ ವಿರುದ್ಧವಾಗಿ ಕೆಲವು ಕ್ಯಾಬ್ ಚಾಲಕರು ನಿಯಂತ್ರಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷ ಮಾತ್ರವೇ ಸುಮಾರು 5,000 ಕೇರಳದ ಕ್ಯಾಬ್ ಚಾಲಕರು ಕೆಲಸ ಆರಂಭಿಸಿದ್ದಾರೆ. ಪಂಜಾಬ್‌ನಿಂದಲೂ ಹಲವರು ಬರುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಹೊರರಾಜ್ಯದ ಚಾಲಕರಯ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಉದಾಹರಣೆಗಳೂ ಇವೆ ಎಂದು ಓಲಾ-ಉಬರ್ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ. ಅವರ ಪ್ರಕಾರ ಭಾಷೆ ಸಂಬಂಧಿತ ನಿಯಮ ಅಥವಾ ಕಠಿಣ ನಿಯಂತ್ರಣ ಕ್ರಮಗಳನ್ನು ಸರ್ಕಾರ ಜಾರಿಗೆ ತರುವುದು ಅಗತ್ಯವಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.