ಪೊಲೀಸ್ ಕಸ್ಟಡಿಯಲ್ಲಿದ್ದ ಕಾಂಗೋ ಪ್ರಜೆ ಅನುಮಾನಾಸ್ಪದ ಸಾವು; ಮೃತದೇಹ ಕಾಂಗೋ ಎಂಬೆಸಿಗೆ ಹಸ್ತಾಂತರ

ಪೊಲೀಸ್ ಕಸ್ಟಡಿಯಲ್ಲಿದ್ದ ಕಾಂಗೋ ಪ್ರಜೆ ಅನುಮಾನಾಸ್ಪದ ಸಾವು; ಮೃತದೇಹ ಕಾಂಗೋ ಎಂಬೆಸಿಗೆ ಹಸ್ತಾಂತರ
ಮೃತದೇಹ ಕಾಂಗೋ ಎಂಬೆಸಿಗೆ ಹಸ್ತಾಂತರ

ಜೊಯೆಲ್ ಮೃತದೇಹದ ಅಂಗಾಂಗ ಮಾದರಿ ಸಂಗ್ರಹಿಸಿ ಎಫ್​ಎಸ್​ಎಲ್​ಗೆ ರವಾನೆ ಮಾಡಲಾಗಿದ್ದು, ಕಾಂಗೋ ದೇಶದ ರಾಯಭಾರಿ ಅಧಿಕಾರಿಗಳು ಕೂಡ ಈ ವೇಳೆ ಹಾಜರಿದ್ದರು.

TV9kannada Web Team

| Edited By: preethi shettigar

Aug 07, 2021 | 12:32 PM

ಬೆಂಗಳೂರು: ಬೆಂಗಳೂರು ಪೊಲೀಸ್ ಕಸ್ಟಡಿಯಲ್ಲಿದ್ದ ಕಾಂಗೋ ಪ್ರಜೆ ಅನುಮಾನಾಸ್ಪದ ಸಾವು ಪ್ರಕರಣ ಇನ್ನೂ ಕೂಡ ಬಗೆಹರಿದಿಲ್ಲ. ಹೀಗಿರುವಾಗಲೇ ಕಾಂಗೋ ಎಂಬೆಸಿಗೆ ಜೊಯೆಲ್ ಮಲು ಮೃತದೇಹ ಹಸ್ತಾಂತರ ಮಾಡಲಾಗಿದೆ. 8 ನೇ ಎಸಿಎಂಎ ನ್ಯಾಯಾಧೀಶರ ಸಮಕ್ಷಮ ಶವ ಪಂಚನಾಮೆ ನಡೆಸಿದ್ದು, ಎನ್ಓಸಿ ಪಡೆದು ಕಾಂಗೋ ಪ್ರಜೆ ಜೊಯೆಲ್ ಮಲು ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಬೋರಿಂಗ್ ಆಸ್ಪತ್ರೆಯಲ್ಲಿ ನಡೆಸಿ ಮೃತದೇಹ ಹಸ್ತಾಂತರ ಮಾಡಲಾಗಿದೆ.

ಜೊಯೆಲ್ ಮೃತದೇಹದ ಅಂಗಾಂಗ ಮಾದರಿ ಸಂಗ್ರಹಿಸಿ ಎಫ್​ಎಸ್​ಎಲ್​ಗೆ ರವಾನೆ ಮಾಡಲಾಗಿದ್ದು, ಕಾಂಗೋ ದೇಶದ ರಾಯಭಾರಿ ಅಧಿಕಾರಿಗಳು ಕೂಡ ಈ ವೇಳೆ ಹಾಜರಿದ್ದರು. ಮೃತದೇಹ ಪರೀಕ್ಷೆಯ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗಿದೆ. ಸದ್ಯ ಮೃತ ದೇಹವನ್ನು ಕಾಂಗೋಗೆ ತೆಗೆದುಕೊಂಡು ಹೋಗಲು ಕಾಂಗೋ ರಾಯಭಾರಿ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.

ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣ ಸಿಐಡಿ ತನಿಖೆಗೆ ವರ್ಗಾವಣೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು. ಎನ್‌ಹೆಚ್‌ಆರ್‌ಸಿ, ಸಿಐಡಿಯಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಲಿದೆ. ಬೆಂಗಳೂರಿನಲ್ಲಿ ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿಚಾರ್ಜ್ ನಡೆಸಲಾಗಿದ್ದು,. ನಗರದ ಜೆ.ಸಿ.ನಗರ ಪೊಲೀಸ್ ಠಾಣೆ ಎದುರು ಲಾಠಿಚಾರ್ಜ್ ನಡೆಸಲಾಗಿತ್ತು. ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಸಾವನ್ನಪ್ಪಿದ ಕಾರಣ ಠಾಣೆ ಮುಂದೆ ಧರಣಿ ನಡೆಸುತ್ತಿದ್ದ ಆಫ್ರಿಕನ್ ಪ್ರಜೆಗಳು ಪೊಲೀಸರ ಜತೆ ವಾಗ್ವಾದ, ಹಲ್ಲೆಗೆ ಯತ್ನಿಸಿದ ಕಾರಣ ಲಾಠಿಚಾರ್ಜ್ ನಡೆಸಲಾಗಿತ್ತು.

ಪ್ರಕರಣದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕಮಲ್ ಪಂಥ್, ಖಚಿತ ಮಾಹಿತಿ ಮೇಲೆ ಪೊಲೀಸ್ ತಂಡ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ವಿತರಣೆ ಮಾಡುತ್ತಾರೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಲಾಗಿತ್ತು. ಈವೇಳೆ ಓರ್ವನನ್ನು ಬಂಧನ ಮಾಡಲಾಯ್ತು. ಆತನ ಬಳಿ ಸಿಕ್ಕ ಮಾಲನ್ನು ಸೀಜ್ ಮಾಡಲಾಗಿತ್ತು. ಆರೋಪಿಗೆ ಆವೇಳೆ ಸ್ವಲ್ಪ ಸುಸ್ತು ಕಂಡುಬಂದಿತ್ತು.

ಅಲ್ಲಿ ಹೃದಯದ ಸಮಸ್ಯೆ ಆಗಿದೆ ಅಂತ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. 2017 ರಲ್ಲಿ ಆರೋಪಿ ವೀಸಾ ಅವಧಿ ಮುಗಿದಿದೆ. ಪಾರದರ್ಶಕತೆಯಿಂದ ರಾಷ್ತ್ರೀಯ ಮಾನವ ಹಕ್ಕು ಆಯೋಗ ನಿಯಮದ ಪ್ರಕಾರ ಪೋಸ್ಟ್ ಮಾರ್ಟಮ್ ಮಾಡಲಾಗುತ್ತಿದೆ. ಇಬ್ಬರು ವೈದ್ಯರು ಮತ್ತು ಜರ್ಡ್ ಒಬ್ಬರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿ ನಿಯಮ ಪಾಲನೆ ಮಾಡಿದ್ದಾರೆ. ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿದೆ. ಡಿಜಿ-ಐಜಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸ್ ಠಾಣೆ ಮುಂದೆ ಆಫ್ರಿಕಾದ ಪ್ರಜೆಗಳು ಗಲಾಟೆ ಮಾಡಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಮಲ್ ಪಂಥ್ ತಿಳಿಸಿದರು.

ಹೀಗಾಗಿ ಪೊಲೀಸರು ಲಾಠಿ ಜಾರ್ಜ್ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಬಲ ಪ್ರಯೋಗ ಮಾಡಲಾಗಿದೆ. ಸ್ಥಳೀಯ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಗಲಾಟೆ ಮಾಡಿದ ಸುಮಾರು 32 ಜನರ ಬಂಧನ ಆಗಿದೆ. ಎಲ್ಲರ ಮೇಲೂ ಕೇಸ್ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಎಲ್ಲರ ಹಿನ್ನೆಲೆಯನ್ನೂ ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಬಳಿಕ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಆರೋಪಿ ಸಾವಿನ ಬಗ್ಗೆ ಸಂಬಂಧ ಪಟ್ಟ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗುತ್ತಿದೆ. ಪಾರದರ್ಶಕವಾಗಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದರು.

ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಮೃತನು ಡ್ರಗ್ ಪೆಡ್ಲರ್‌ ಆಗಿದ್ದ, ಡ್ರಗ್ಸ್ ಪತ್ತೆಯಾಗಿತ್ತು. ಘಟನೆ ಬಳಿಕ ಠಾಣೆಯ ಬಳಿ ಜಮಾಯಿಸಿ ಪ್ರತಿಭಟನೆ  ನಡೆಸಿದ್ದಾರೆ. ಪ್ರತಿಭಟನೆ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಸಾಕಷ್ಟು ಬಾರಿ ಮನವೊಲಿಸಲು ಪ್ರಯತ್ನಿಸಿದ್ರೂ ಕೇಳಲಿಲ್ಲ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

ಇದನ್ನೂ ಓದಿ: ಆಫ್ರಿಕಾ ಪ್ರಜೆಗಳ ಗಲಾಟೆ ಪ್ರಕರಣ: ಘಟನೆಯ ಮಾಹಿತಿ ಪಡೆಯಲು ಆಗಮಿಸಿದ ಆಫ್ರಿಕಾ ಅಧಿಕಾರಿಗಳು

Follow us on

Related Stories

Most Read Stories

Click on your DTH Provider to Add TV9 Kannada