ಸದಾನಂದಗೌಡ ವಿರುದ್ಧ ಮಾತಿನ ಚಾಟಿ ಬೀಸಿದ ಕಾಂಗ್ರೆಸ್
ಸದಾನಂದ ಗೌಡ ಅವರೇ, ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿದ್ದೇಕೆ? ಅಸಾಮರ್ಥ್ಯಕ್ಕೊ, ಇನ್ಯಾವುದಾದರೂ ಕಾರಣಕ್ಕೋ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬೆಂಗಳೂರು: ‘ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ತಲೆ ಕೆಟ್ಟು ಹೋಗಿದೆ’ ಎಂದು ವಾಗ್ದಾಳಿ ನಡೆಸಿದ್ದ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಮರುಚಾಟಿ ಬೀಸಿರುವ ಕಾಂಗ್ರೆಸ್, ‘ನಿಮ್ಮ ಚಾರಿತ್ರ್ಯವೇ ಕೆಟ್ಟಿದೆ’ ಎಂದು ಹೇಳಿದೆ.
ಈ ಕುರಿತು ಕೂ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಸದಾನಂದಗೌಡರ ಚಾರಿತ್ರ್ಯವೇ ಕೆಟ್ಟಿದೆ, ತಡೆಯಾಜ್ಞೆ ತಂದರೂ ತಡೆಯಲಾಗಲಿಲ್ಲ! ಸದಾನಂದ ಗೌಡ ಅವರೇ, ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿದ್ದೇಕೆ? ಅಸಾಮರ್ಥ್ಯಕ್ಕೊ, ಇನ್ಯಾವುದಾದರೂ ಕಾರಣಕ್ಕೋ? ಸಿಎಂ ಆಗಿಯೂ ಅರ್ಧಕ್ಕೆ ಇಳಿದಿರಿ, ಕೇಂದ್ರ ಮಂತ್ರಿಯಾಗಿಯೂ ಅರ್ಧಕ್ಕೆ ಇಳಿದಿರಿ’ ಎಂದು ವ್ಯಂಗ್ಯವಾಡಿದೆ.
‘ಸಿದ್ದರಾಮಯ್ಯನವರಿಗೆ ಸಂಪೂರ್ಣ ತಲೆ ಕೆಟ್ಟು ಹೋಗಿದೆ. ರಾಜಕಾರಣದಲ್ಲಿ ಸ್ವಲ್ಪ ತಲೆ ಕೆಟ್ಟಿದ್ದರೆ ಪರವಾಗಿಲ್ಲ. ಪೂರ್ತಿ ತಲೆ ಕೆಟ್ಟಿರಬಾರದು. ತಾಲಿಬಾನ್ ಸಂಸ್ಕೃತಿ ಇದ್ದಿದ್ದರೆ ಪ್ರತಿಪಕ್ಷ ನಾಯಕನಾಗಿ ಕಾರಿನಲ್ಲಿ ಓಡಾಡುತ್ತಿದ್ದರಾ? ಇವರ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದರು. ಅರ್ಥ ಮಾಡಿಕೊಳ್ಳಬೇಕು. ಬಾಯಿಗೆ ಬಂದಂತೆ ಎಲ್ಲವನ್ನು ಮಾತನಾಡಬಾರದು’ ಎಂದು ಸದಾನಂದ ಗೌಡ ಅವರು ಸಿದ್ದರಾಮಯ್ಯ ಅವರ ತಾಲಿಬಾನ್ ಹೇಳಿಕೆಗೆ ತಿರುಗೇಟು ನೀಡಿದ್ದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಮತ್ತು ಸಂಘ ಪರಿವಾರವನ್ನು ತಾಲಿಬಾನ್ಗೆ ಹೋಲಿಸಿದ್ದರು. ಕರಾವಳಿ ಭಾಗದಲ್ಲಿ ಹಿಂದೂಪರ ಸಂಘಟನೆಗಳಿಂದ ಆಗಾಗ ನಡೆಯುತ್ತಿರುವ ಅನೈತಿಕ ಗೂಂಡಾಗಿರಿಯನ್ನು ಪ್ರಶ್ನಿಸಿ ನಿಮ್ಮದೇ ಪರಿವಾರದ ಕಾರ್ಯಕರ್ತರು ಮಾಡುತ್ತಿರುವುದು ತಾಲಿಬಾನ್ ಗಿರಿ ಅಲ್ಲವೇ ಎಂದು ಪ್ರಶ್ನಿಸಿದ್ದರು. ಆಗ ಅವರು ಮಂಗಳೂರಿನಲ್ಲಿರುವುದು ಬಿಜೆಪಿ ಸರ್ಕಾರವೋ? ತಾಲಿಬಾನ್ ಸರ್ಕಾರವೋ ಎಂದು ಪ್ರಶ್ನಿಸಿದ್ದರು.
(Congress Criticizes Sadananda Gowda on his Statement on Siddaramaiah)
ಇದನ್ನೂ ಓದಿ: ಅಧಿಕಾರ ಕಳೆದುಕೊಂಡ ಮೇಲೂ ನಾನೆಷ್ಟು ಪುಣ್ಯವಂತ ಅನಿಸುತ್ತಿದೆ: ಮಾಜಿ ಕೇಂದ್ರ ಸಚಿವ ಸದಾನಂದಗೌಡ
ಇದನ್ನೂ ಓದಿ: ಸಿದ್ದರಾಮಯ್ಯ ದೊಡ್ಡ ಭಯೋತ್ಪಾದಕ ಅನಿಸುತ್ತಿದೆ: ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ
Published On - 7:05 pm, Thu, 30 September 21