ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂಥ ಹೇಳಿಕೆ ನೀಡಿರುವ ಈಶ್ವರಪ್ಪ (Eshwarappa) ಅವರ ವಜಾಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಹಿರಿಯ ಕಾಂಗ್ರೆಸ್ ನಾಯಕರಾದ ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನಿಯೋಗದಲ್ಲಿ ಇದ್ದರು. ಮನವಿ ಸಲ್ಲಿಕೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaih), ‘ಇದು ಈಶ್ವರಪ್ಪ ಅಪ್ಪಿತಪ್ಪಿ ಅಚಾನಕ್ ಆಗಿ ಕೊಟ್ಟಿರುವ ಹೇಳಿಕೆ ಅಲ್ಲ. ಅವರು ಉದ್ದೇಶಪೂರ್ವಕವಾಗಿ ನೀಡಿರುವ ಹೇಳಿಕೆ. ಕೆಂಪುಕೋಟೆ ಮೇಲೆ ಇಂದಲ್ಲ ನಾಳೆ ಕೇಸರಿಧ್ವಜವನ್ನು ಹಾರಿಸಿಯೇ ಹಾರಿಸುತ್ತೇವೆ. ರಾಷ್ಟ್ರಧ್ವಜನಕ್ಕೆ ಅವಮಾನ ಮಾಡುವುದು ಅಕ್ಷಮ್ಯ ಅಪರಾಧ. ಸಂವಿಧಾನದ ಪ್ರಕಾರ ಇದು ದೇಶದ್ರೋಶ ಎನಿಸಿಕೊಳ್ಳುತ್ತದೆ. ಆರ್ಟಿಕಲ್ 55 (1) ಈ ವಿಚಾರವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಇಲ್ಲವಾದರೆ ಅದು ಅಪರಾಧವಾಗುತ್ತದೆ’ ಎಂದು ಹೇಳಿದರು.
ರಾಷ್ಟ್ರಧ್ವಜವು ನಮ್ಮ ದೇಶದ ಸ್ವಾತಂತ್ರ್ಯದ ಸಂಕೇತವಾಗಿದೆ. ಇಂಥ ಸಂಕೇತಕ್ಕೆ ಈಶ್ವರಪ್ಪ ಅವಮಾನ ಮಾಡಿದ್ದಾರೆ. ಹೀಗಾಗಿ ಸದನದಲ್ಲಿ ಚರ್ಚೆಗೆ ನಾವು ಮನವಿ ಮಾಡಿದ್ದೆವು. ಈಶ್ವರಪ್ಪ ಅವರನ್ನು ಶೀಘ್ರ ಸಂಪುಟದಿಂದ ಕೈಬಿಡಬೇಕು ಎಂದು ಕೇಳಿದ್ದೆವು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವಂತೆ ಒತ್ತಾಯಿಸಿದ್ದೆವು. ಆದರೆ ಇದ್ಯಾವುದನ್ನೂ ಸಿಎಂ ಬೊಮ್ಮಾಯಿ ಮಾಡಲಿಲ್ಲ. ಬದಲಾಗಿ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರು. ಇದು ದೇಶದ್ರೋಹ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ನಮಗೆ ಚರ್ಚೆ ಮಾಡುವುದಕ್ಕೆ ಅವಕಾಶ ನೀಡಲಿಲ್ಲ. ನಾವು 5 ದಿನ ಪ್ರತಿಭಟನೆ ಮಾಡಿದರೂ ಈಶ್ವರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ರಾಜ್ಯಪಾಲರಿಗೆ ನಾವು ಮನವಿಯನ್ನು ಸಲ್ಲಿಸಿದ್ದೇವೆ ಎಂದರು.
ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಾರೆಂಬ ವಿಶ್ವಾಸ ನಮಗಿದೆ. ಸಚಿವ ಈಶ್ವರಪ್ಪ ಹೇಳಿಕೆ ತಪ್ಪು ಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದರು. ನಮ್ಮ ನಿಲುವನ್ನೇ ಜೆ.ಪಿ.ನಡ್ಡಾ ಸಮರ್ಥಿಸಿದ್ದರು. ಅವರ ಹೇಳಿಕೆಯ ನಂತರವಾದರೂ ಈಶ್ವರಪ್ಪ ಅವರನ್ನು ಬೊಮ್ಮಾಯಿ ವಜಾ ಮಾಡಬೇಕಿತ್ತು. ರಾಜ್ಯಪಾಲರು ಈಶ್ವರಪ್ಪ ಅವರನ್ನು ವಜಾ ಮಾಡದಿದ್ದರೆ ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ. ವಿಧಾನಸಭೆ ಕಲಾಪ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆಯನ್ನು ಸದ್ಯಕ್ಕೆ ನಿಲ್ಲಿಸುತ್ತಿದ್ದೇವೆ ಎಂದು ವಿವರಿಸಿದರು.
ಸಂವಿಧಾನ ಬದಲಾವಣೆ ಆಗಬೇಕೆಂದು ಹಲವು ಬಾರಿ ಅವರೇ ಹೇಳಿದ್ದಾರೆ. ಸಚಿವರಾಗಿ 144ನೇ ಸೆಕ್ಷನ್ ಉಲ್ಲಂಘನೆ ಮಾಡಿದ್ದಾರೆ. ನಮ್ಮ ಅಹವಾಲಿನ ಬಗ್ಗೆ ಪರಿಶೀಲಿಸುವುದಾಗಿ ಮತ್ತು ಆ ಬಳಿಕ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ಹಿಜಾಬ್ ವಿಚಾರ ಕೂಡ ಹುಟ್ಟು ಹಾಕಿದ್ದೂ ಅವರೇ. ಸದ್ಯಕ್ಕೆ ಈ ವಿಚಾರ ನ್ಯಾಯಾಲಯದಲ್ಲಿದೆ. ಮುಂದೆ ಏನಾಗುತ್ತೋ ನೋಡೋಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ರಾಷ್ಟ್ರಧ್ವಜದ ಬಗ್ಗೆ ಗೌರವ ಇಲ್ಲ ಎಂದು ವಿಷಾದಿಸಿದರು.
ನಾನು ಡಿಜಿ ಪ್ರವೀಣ್ ಸೂದ್ ಅವರಿಗೆ ಕರೆ ಮಾಡಿ ಶಿವಮೊಗ್ಗದಲ್ಲಿ ಮೆರವಣಿಗೆಗೆ ಹೇಗೆ ಅನುಮತಿ ನೀಡಿದಿರಿ ಎಂದು ಕೇಳಿದೆ. ಮೆರವಣಿಗೆ ಅನುಮತಿ ನೀಡಬೇಡಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಸೆಕ್ಷನ್ 144 ಜಾರಿ ಮಾಡಿದ್ದೀರಿ ಎಂದೆ. ಮೆರವಣಿಗೆಗೆ ಅನುಮತಿ ಇಲ್ಲ ಎಂದು ಅವರೂ ಹೇಳಿದ್ದರು. ಆದರೂ ಕೂಡ ಸಚಿವರೇ ಮುಂದೆ ನಿಂತು ಮೆರವಣಿಗೆ ಮಾಡಿದ್ದಾರೆ. ಈಶ್ವರಪ್ಪ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಈಶ್ವರಪ್ಪ ತಮ್ಮನ್ನು ತಾವು ‘ಸಿಂಹ’ ಎಂದು ಕರೆದುಕೊಂಡಿರುವ ಹೇಳಿಕೆಗೂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಅವರು ತಮ್ಮನ್ನು ಪ್ರಾಣಿಗಳೆಂದು ಒಪ್ಪಿಕೊಂಡಿದ್ದಾರೆ. ಎಸ್ಡಿಪಿಐ, ಪಿಎಫ್ಐ ವಿರುದ್ಧ ಆಡಳಿತ ಪಕ್ಷ ಕ್ರಮಕೈಗೊಳ್ಳಲಿ. ಸರ್ಕಾರ ಕ್ರಮ ತೆಗೆದುಕೊಂಡರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಈಶ್ವರಪ್ಪ ಪ್ರತಿಯೊಬ್ಬ ನಾಗರಿಕರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Published On - 6:37 pm, Tue, 22 February 22