ಇಬ್ರಾಹಿಂ ವಿರುದ್ಧ ಹರಿಹಾಯ್ದ ಉಗ್ರಪ್ಪ: ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ಆರೋಪ
ವಕ್ಫ್ ಬೋರ್ಡ್ಗೆ ಸೇರಿದ ಆಸ್ತಿ ಕಬಳಿಸಿದ್ದೀರಿ ಎಂದು ದೂರಿರುವ ಉಗ್ರಪ್ಪ ಸಾರ್ವಜನಿಕ ಚರ್ಚೆಗೆ ಬರುವಂತೆ ಇಬ್ರಾಹಿಂ ಅವರಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷ ನಾಯಕನ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಸಿ.ಎಂ.ಇಬ್ರಾಹಿಂ ವಿರುದ್ಧ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಹರಿಹಾಯ್ದಿದ್ದಾರೆ. ನಿಷ್ಠೆ ಮತ್ತು ಪ್ರಾಮಾಣಿಕತೆ ನಿಮಗೆ ಇಲ್ಲ. ಜನ್ಮ ಕೊಟ್ಟ ಧರ್ಮ, ಜನಾಂಗಕ್ಕೂ ನಿಮ್ಮಿಂದ ಮೋಸ ಆಗಿದೆ. ವಕ್ಫ್ ಬೋರ್ಡ್ಗೆ ಸೇರಿದ ಆಸ್ತಿ ಕಬಳಿಸಿದ್ದೀರಿ ಎಂದು ದೂರಿರುವ ಅವರು ಸಾರ್ವಜನಿಕ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಇಬ್ರಾಹಿಂಗೆ ಎರಡು ನಾಲಗೆ ಇದೆ. ಯಾವಾಗಲೂ ದ್ವಂದ್ವ ನಿಲುವು ಹೊಂದಿರುವ ಮನುಷ್ಯ. ಬೆಳಿಗ್ಗೆ ಯಡಿಯೂರಪ್ಪ, ಮಧ್ಯಾಹ್ನ ದೇವೇಗೌಡ, ರಾತ್ರಿ ಡಿ.ಕೆ.ಶಿವಕುಮಾರ್ ಎಂದು ತಿರುಗುತ್ತಾರೆ. ಇಬ್ರಾಹಿಂ ಒಬ್ಬ ದೊಡ್ಡ ಬ್ಲ್ಯಾಕ್ಮೇಲ್ ರಾಜಕಾರಣಿ. ಸಂದರ್ಭ ಬಂದರೆ ಅವರ ವಿರುದ್ಧ ಪಕ್ಷದ ಹೈಕಮಾಂಡ್ಗೆ ದೂರು ನೀಡುವೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ಬಗೆಹರಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರ, ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆ ಸತ್ತುಹೋಗಿದೆಯೇ? ಸರ್ಕಾರದ ವೈಫಲ್ಯದಿಂದ ಹಿಜಾಬ್ ವಿವಾದ ಇಷ್ಟು ದೊಡ್ಡದಾಗಿದೆ. ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎನ್ನುವ ಸಚಿವ ಕೆ.ಎಸ್.ಈಶ್ವರಪ್ಪ ಧ್ವಜಾರೋಹಣ ನಿಯಮಗಳನ್ನು ಓದಿಲ್ಲ. ಅವರ ವಿರುದ್ಧ ರಾಜ್ಯಪಾಲರು ಶಿಸ್ತುಕ್ರಮ ಜರುಗಿಸಬೇಕು. ರಾಮನ ಜಪ ಮಾಡುವ ಬಿಜೆಪಿಯವರು ಆದರ್ಶ ರೂಢಿಸಿಕೊಳ್ಳಬೇಕು. ವೋಟ್ ಬ್ಯಾಂಕ್ಗಾಗಿ ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ. ರಾಜ್ಯದ ಜನತೆ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಹಿಜಾಬ್ ಕುರಿತು ಹೈಕೋರ್ಟ್ನ ಮಧ್ಯಂತರ ಆದೇಶ ಇದ್ದರೂ ಅದ ಪಾಲನೆ ಈ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಯಾವ ಮುಖ ಇಟ್ಟುಕೊಂಡು ನೀವು ಸರ್ಕಾರ ಮಾಡುತ್ತಿದ್ದೀರಿ. ಸರ್ಕಾರ ನಡೆಸಲು ಬಿಜೆಪಿಗೆ ಆಗುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಿಲ್ಲ, ಹೈಕಮಾಂಡ್ನಿಂದ ಬುಲಾವ್ ಬಂದಿದೆ: ಮುನಿಸಿಕೊಂಡಿದ್ದ ಸಿಎಂ ಇಬ್ರಾಹಿಂ ಯುಟರ್ನ್
ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಕಥೆ ಮುಗಿದಿದೆ; ಸಿಎಂ ಬೊಮ್ಮಾಯಿ ಸರ್ಕಾರ ಪಂಕ್ಚರ್ ಆಗಿರುವ ಬಸ್: ಸಿಎಂ ಇಬ್ರಾಹಿಂ ಟೀಕೆ