ಬೆಂಗಳೂರು: ಬಿಜೆಪಿ ಸರ್ಕಾರದ(State BJP Government) ವೈಫಲ್ಯ ಖಂಡಿಸಿ ಕಾಂಗ್ರೆಸ್(Congress) ಬಸ್ ಯಾತ್ರೆ(Bus Yatra) ನಡೆಸಲು ಮುಂದಾಗಿದೆ. ಆಗಸ್ಟ್ 15ರ ನಂತರ ರಾಜ್ಯಾದ್ಯಂತ ಬಸ್ ಯಾತ್ರೆಗೆ ನಿರ್ಧಾರ ಮಾಡಿದ್ದು ‘FREEDOM@75’ ಕಾರ್ಯಕ್ರಮದ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ತಂಡಗಳನ್ನು ರಚಿಸಿ ಬಸ್ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಫ್ರೀಡಂ ವಾಕ್’ ಮಾಡಲು ಸೂಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ರಾಷ್ಟ್ರಧ್ವಜ ಹಿಡಿದು 75 ಕಿ.ಮೀ. ಪಥಸಂಚಲನ ಮಾಡಲು ಸಭೆಯಲ್ಲಿ ಸೂಚಿಸಲಾಗಿದೆ.
ಇನ್ನು ಆಗಸ್ಟ್ 15ರಂದು ಬೆಂಗಳೂರಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇದನ್ನೂ ಓದಿ: ‘ನನ್ನ ದೇವರು, ನನ್ನ ಭಕ್ತಿ’; ‘ಬೇಡರ ಕಣ್ಣಪ್ಪ’ ಪೋಸ್ಟರ್ ಹಾಕಿ ಲೀನಾ ಪರ ಧ್ವನಿ ಎತ್ತಿದ ನಟ ಕಿಶೋರ್
ಸಭೆಯಲ್ಲಿ ಸಿದ್ದರಾಮೋತ್ಸವ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ
ಇನ್ನು ‘FREEDOM@75’ ಕಾರ್ಯಕ್ರಮದ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯ, ಸಿದ್ದರಾಮೋತ್ಸವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಗಸ್ಟ್ 3ರಂದು ನನ್ನ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಇದು ಪಕ್ಷಾತೀತ ಕಾರ್ಯಕ್ರಮ ಅಲ್ಲ, ಪಕ್ಷದ ಕಾರ್ಯಕ್ರಮ. ನಮ್ಮ ಪಕ್ಷದವರೇ ಸೇರಿ ಸಿದ್ದರಾಮೋತ್ಸವ ಮಾಡುತ್ತಿರುವುದು. ನಮ್ಮ ಪಕ್ಷದವರಿಗಷ್ಟೇ ಆಹ್ವಾನ ನೀಡಲಾಗಿದೆ. ಖಾಸಗಿ ವ್ಯಕ್ತಿಗಳಿಗೆ ಅಥವಾ ಇತರೆ ಪಕ್ಷದವರಿಗೆ ಆಹ್ವಾನ ನೀಡಿಲ್ಲ. ಪಕ್ಷದ ಒಳಿತಿಗಾಗಿ ಸಿದ್ದರಾಮೋತ್ಸವ ಕಾರ್ಯಕ್ರಮ ಮಾಡಲಾಗ್ತಿದೆ. ಕಾರ್ಯಕ್ರಮಕ್ಕೆ ಬರುವಂತೆ ರಾಹುಲ್ ಗಾಂಧಿಗೂ ಆಹ್ವಾನಿಸಲಾಗಿದೆ. ಪಕ್ಷದ ಎಲ್ಲಾ ನಾಯಕರಿಗೂ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಸಭೆಯಲ್ಲಿ ಪದಾಧಿಕಾರಿಗಳಿಗೆ ಸಿದ್ದರಾಮಯ್ಯ ಆಹ್ವಾನ ನೀಡಿದ್ರು.
Published On - 4:41 pm, Thu, 7 July 22