‘ನನ್ನ ದೇವರು, ನನ್ನ ಭಕ್ತಿ’; ‘ಬೇಡರ ಕಣ್ಣಪ್ಪ’ ಪೋಸ್ಟರ್ ಹಾಕಿ ಲೀನಾ ಪರ ಧ್ವನಿ ಎತ್ತಿದ ನಟ ಕಿಶೋರ್
ಲೀನಾ ಅವರನ್ನು ಬಹುತೇಕರು ವಿರೋಧಿಸುತ್ತಿದ್ದಾರೆ. ಹೀಗಿರುವಾಗ ಕಿಶೋರ್ ಅವರು ಲೀನಾ ಪರ ಬ್ಯಾಟ್ ಬೀಸಿದ್ದಾರೆ. ‘ನನ್ನ ದೇವರು, ನನ್ನ ಭಕ್ತಿ’ ಎಂದು ಅವರು ಬರೆದುಕೊಂಡಿದ್ದಾರೆ.
ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಾಳಿ ದೇವಿ ಸಿಗರೇಟ್ ಸೇದುತ್ತಿರುವ ರೀತಿಯ ಪೋಸ್ಟರ್ ಹಾಕುವ ಮೂಲಕ ಅವರು ವಿವಾದ ಎಬ್ಬಿಸಿದ್ದಾರೆ. ಈ ಪೋಸ್ಟರ್ ವಿರುದ್ಧ ಹಿಂದೂ ಸಮುದಾಯದವರು ಸಿಟ್ಟಾಗಿದ್ದಾರೆ. ಬಹುತೇಕರು ಲೀನಾ ಅವರನ್ನು ವಿರೋಧಿಸುತ್ತಿದ್ದಾರೆ. ಕನ್ನಡದ ನಟ ಕಿಶೋರ್ (Actor Kishore) ಅವರು ಲೀನಾ ಪರ ಧ್ವನಿ ಎತ್ತಿದ್ದಾರೆ. ರಾಜ್ಕುಮಾರ್ (Rajkumar) ನಟನೆಯ ‘ಬೇಡರ ಕಣ್ಣಪ್ಪ’ ಚಿತ್ರದ ಪೋಸ್ಟರ್ ಹಾಕಿ ‘ನನ್ನ ದೇವರು, ನನ್ನ ಭಕ್ತಿ’ ಎಂದು ಅವರು ಬರೆದುಕೊಂಡಿದ್ದಾರೆ. ಲೀನಾ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಕ್ಕೆ ಕಿಶೋರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಲೀನಾ ಮಣಿಮೇಕಲೈ ಅವರು ತಮಿಳುನಾಡಿನವರು. ಅವರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ‘ಕಾಳಿ’ ಡಾಕ್ಯುಮೆಂಟರಿಯನ್ನು ಅವರು ನಿರ್ಮಿಸಿ, ನಿರ್ದೇಶಿಸಿದ್ದರು. ಈ ಸಾಕ್ಷ್ಯಚಿತ್ರದ ಪೋಸ್ಟರ್ನಲ್ಲಿ ಕಾಳಿ ದೇವಿ ಸಿಗರೇಟ್ ಸೇದುತ್ತಿರುವ ರೀತಿಯಲ್ಲಿ ತೋರಿಸಲಾಗಿತ್ತು. ಲೀನಾ ಅವರನ್ನು ಬಹುತೇಕರು ವಿರೋಧಿಸುತ್ತಿದ್ದಾರೆ. ಹೀಗಿರುವಾಗ ಕಿಶೋರ್ ಅವರು ಲೀನಾ ಪರ ಪರೋಕ್ಷವಾಗಿ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: ಕಾಳಿ ಪೋಸ್ಟರ್ ವಿವಾದ: ನಿರ್ದೇಶಕಿ ಲೀನಾ ಮಣಿಮೇಕಲೈಗೆ ಶಿರಚ್ಛೇದ; ಬೆದರಿಕೆಯೊಡ್ಡಿದ ಅಯೋಧ್ಯೆಯ ಪುರೋಹಿತ
ರಾಜ್ಕುಮಾರ್ ನಟನೆಯ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ದೃಶ್ಯವೊಂದು ಬರುತ್ತದೆ. ಬೇಡರ ಕಣ್ಣಪ್ಪ ಈಶ್ವರ ಲಿಂಗಕ್ಕೆ ತಮ್ಮ ಕಾಲನ್ನು ತಾಗಿಸಿ, ಕಣ್ಣು ಕಿತ್ತು ಕೊಡುತ್ತಾರೆ. ಈ ಪೋಸ್ಟರ್ ಹಂಚಿಕೊಂಡಿರುವ ಕಿಶೋರ್, ‘ನನ್ನ ದೇವರು, ನನ್ನ ಭಕ್ತಿ, ನನ್ನ ನೈವೇದ್ಯಗಳು, ನನ್ನ ಹಕ್ಕು, ನನ್ನ ಸ್ವಾತಂತ್ರ್ಯ. ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ. ಯಾರಿಗೂ ಅದನ್ನು ನಿರ್ದೇಶಿಸುವ, ರಾಜಕೀಯವಾಗಿಸುವ ಹಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ.
ನನ್ನ ದೇವರು, ನನ್ನ ಭಕ್ತಿ , ನನ್ನ ನೈವೇದ್ಯಗಳು ನನ್ನ ಹಕ್ಕು, ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ. https://t.co/soOufencuC
— Kishore (@actorkishore) July 6, 2022
‘ದೇವರನ್ನು ಪೂಜಿಸುವಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಲ್ಪನೆ ಇರುವಂತೆ ಕಾಳಿ ಮಾತೆಯನ್ನು ಮಾಂಸಾಹಾರಿ ಮತ್ತು ಮದ್ಯ ಸೇವಿಸುವ ದೇವರಾಗಿ ಊಹಿಸುವ ಹಕ್ಕು ನನಗಿದೆ’ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದು ವಿವಾದಕ್ಕೀಡಾಗಿತ್ತು. ಅವರನ್ನೂ ಕಿಶೋರ್ ಬೆಂಬಲಿಸಿದ್ದಾರೆ.
ಕೆಲವರು ಕಿಶೋರ್ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ‘ಕಿಶೋರ್ ಅವರಿಗೆ ಮಾಡೋಕೆ ಸಿನಿಮಾ ಇಲ್ಲ. ಅದಕ್ಕಾಗಿ ಈ ರೀತಿ ಪೋಸ್ಟ್ ಹಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಕಿಶೋರ್ ಅವರು ಹೇಳಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಬಹಳ ಅದ್ಭುತ ಮಾತುಗಳು’ ಎಂದು ಬಾಯ್ತುಂಬ ಹೊಗಳಿದ್ದಾರೆ.
Published On - 4:26 pm, Thu, 7 July 22