Kangana Ranaut: ‘ಶಿವಸೇನೆ ಹನುಮಾನ್ ಚಾಲೀಸ ಬ್ಯಾನ್ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್
Uddhav Thackeray | Hanuman Chalisa: ‘ಹನುಮಂತನನ್ನು ಶಿವನ 12ನೇ ಅವತಾರ ಎಂದು ಹೇಳಲಾಗುತ್ತದೆ. ಶಿವ ಸೇನೆಯೇ ಹನುಮಾನ್ ಚಾಲೀಸವನ್ನು ಬ್ಯಾನ್ ಮಾಡಿದರೆ ಅವರನ್ನು ಸ್ವತಃ ಶಿವನೂ ಕಾಪಾಡಲು ಸಾಧ್ಯವಿಲ್ಲ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಉದ್ಧವ್ ಠಾಕ್ರೆಯ ಪ್ರತಿಷ್ಠೆ ಮಣ್ಣಾಗಲಿದೆ ಎಂದು ನಟಿ ಕಂಗನಾ ರಣಾವತ್ (Kangana Ranaut) ಅವರು 2020ರಲ್ಲಿಯೇ ಹೇಳಿದ್ದರು. ಈಗ ಅವರು ಮತ್ತೆ ಉದ್ಧವ್ ಠಾಕ್ರೆ ವಿರುದ್ಧ ಧ್ವನಿ ಎತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಹನುಮಾನ್ ಚಾಲೀಸ (Hanuman Chalisa) ಬಗ್ಗೆಯೂ ಮಾತನಾಡಿದ್ದಾರೆ. ಶಿವ ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ (Uddhav Thackeray) ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಂಗನಾ ಅವರು ಈ ವಿಡಿಯೋ ಹರಿಬಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಕಂಗನಾ ಮಾತಿಗೆ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ.
‘1975ರ ಬಳಿಕ ಇತಿಹಾಸದಲ್ಲಿ ಇದು ತುಂಬ ಮಹತ್ವವಾದ ಸಮಯ. 1975ರಲ್ಲಿ ಜೆಪಿ ನಾರಾಯಣ್ ಅವರ ಘೋಷಣೆಯಿಂದ ಸಿಂಹಾಸನ ಅಲುಗಾಡಿತ್ತು. ಪ್ರಜಾಪ್ರಭುತ್ವ ಎಂಬುದು ಒಂದು ವಿಶ್ವಾಸ. ಅಧಿಕಾರದ ಅಹಂಕಾರದಿಂದ ಆ ವಿಶ್ವಾಸವನ್ನು ಮುರಿದರೆ ಅಂಥವರ ಪ್ರತಿಷ್ಠೆ ನುಚ್ಚುನೂರಾಗುತ್ತದೆ ಎಂದು ನಾನು 2020ರಲ್ಲೇ ಹೇಳಿದ್ದೆ. ಇದು ಯಾವುದೇ ವ್ಯಕ್ತಿಯ ಶಕ್ತಿ ಅಲ್ಲ. ಇದು ಚರಿತ್ರೆಯ ಶಕ್ತಿ’ ಎಂದಿದ್ದಾರೆ ಕಂಗನಾ ರಣಾವತ್.
‘ಹನುಮಂತನನ್ನು ಶಿವನ 12ನೇ ಅವತಾರ ಎಂದು ಹೇಳಲಾಗುತ್ತದೆ. ಶಿವ ಸೇನೆಯೇ ಹನುಮಾನ್ ಚಾಲೀಸವನ್ನು ಬ್ಯಾನ್ ಮಾಡಿದರೆ ಅವರನ್ನು ಸ್ವತಃ ಶಿವನೂ ಕಾಪಾಡಲು ಸಾಧ್ಯವಿಲ್ಲ. ಹರಹರ ಮಹದೇವ್’ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಂಗನಾ ರಣಾವತ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಮುಂಬೈನಲ್ಲಿ ಇರುವ ಕಂಗನಾ ರಣಾವತ್ ಅವರ ಕಟ್ಟಡವು ನಿಯಮಬಾಹಿರವಾಗಿ ಕಟ್ಟಲ್ಪಟ್ಟಿದೆ ಎಂದು ಆರೋಪಿಸಿ 2020ರಲ್ಲಿ ಅದನ್ನು ತೆರವುಗೊಳಿಸಲಾಗಿತ್ತು. ಆಗ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಕಂಗನಾ ಆಕ್ರೋಶಭರಿತವಾಗಿ ವಿಡಿಯೋ ಮಾಡಿದ್ದರು. ‘ನೀನು ನನ್ನ ವಿರುದ್ಧ ಸೇಡು ತೀರಿಕೊಂಡೆ ಅಂತ ತಿಳಿದಿದ್ದೀಯಾ ಉದ್ಧವ್ ಠಾಕ್ರೆ? ಇಂದು ನನ್ನ ಮನೆ ಮರಿದಿದೆ. ನಾಳೆ ನಿನ್ನ ಗರ್ವ ಮುರಿದುಹೋಗಲಿದೆ’ ಎಂದು ಕಂಗನಾ ಶಾಪ ಹಾಕಿದ್ದರು. ಆ ವಿಡಿಯೋ ಕೂಡ ಈಗ ವೈರಲ್ ಆಗುತ್ತಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಕಂಗನಾ ರಣಾವತ್ ಅಭಿನಯಿಸಿದ ‘ಧಾಕಡ್’ ಸಿನಿಮಾ ಮೇ 20ರಂದು ಬಿಡುಗಡೆ ಆಯಿತು. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಆದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಕೇವಲ ಮೂರು ಮತ್ತೊಂದು ಕೋಟಿ ರೂಪಾಯಿ. ಆ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಕಂಗನಾ ಅವರು ಉದ್ಧವ್ ಠಾಕ್ರೆ ರಾಜೀನಾಮೆ ಬೆನ್ನಲ್ಲೇ ಮತ್ತೆ ಆ್ಯಕ್ಟೀವ್ ಆಗಿದ್ದಾರೆ.
ಇದನ್ನೂ ಓದಿ: 10 ಪರ್ಸೆಂಟ್ ಕೂಡ ಕಲೆಕ್ಷನ್ ಆಗಿಲ್ಲ: ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿದ ಕಂಗನಾ ಚಿತ್ರ
ಸ್ಪೂಫ್ ವಿಡಿಯೊವನ್ನು ನಿಜವೆಂದು ಭಾವಿಸಿ ಕತಾರ್ ಏರ್ವೇಸ್ ಮುಖ್ಯಸ್ಥರನ್ನು ಈಡಿಯಟ್ ಎಂದ ಕಂಗನಾ
Published On - 2:02 pm, Thu, 30 June 22